ಬೆಂಗಳೂರು: "ನೀನೆಷ್ಟು ಬಿರುಗಾಳಿಯನ್ನು ಎದುರಿಸಿದೆ ಎಂಬುದು ಮುಖ್ಯವಲ್ಲ. ಹಡಗನ್ನು ತೀರಕ್ಕೆ ಸೇರಿಸಿದೆಯಾ ಎಂಬುದಷ್ಟೇ ಮುಖ್ಯ ಎನ್ನುವ ವಿಲಿಯಮ್ ಮೀಕ್ಲಿ ಸಾಲುಗಳನ್ನು ಉಲ್ಲೇಖಿಸಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಟ್ವೀಟ್ ಮಾಡಿದ್ದು ಇದು ಯಾರನ್ನು ಉದ್ದೇಶಿಸಿ ಮಾಡಿದ ಟ್ವೀಟ್ ಎನ್ನುವ ಕುತೂಹಲ ಮೂಡಿಸಿದೆ.
ನಾವು ಬೀಸುವ ಬಿರುಗಾಳಿಯನ್ನು ಎದುರಿಸಲು ಸಮರ್ಥರಿದ್ದೇವೆ. ಹಡಗನ್ನು ದಡ ಮುಟ್ಟಿಸಿಯೇ ತೀರುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರಾ ಎನ್ನುವ ಅನುಮಾನ ಹುಟ್ಟುಹಾಕಿದೆ.
ಕಳೆದ 4 ತಿಂಗಳಲ್ಲಿ ನಾನು ಕನಿಷ್ಠ 12 ಸಂದರ್ಭಗಳಲ್ಲಿ ವಿಕ್ಟೊರಿಯಾ ಆಸ್ಪತ್ರೆಗೆ ಭೇಟಿ ನೀಡಿ ವ್ಯವಸ್ಥೆಗಳನ್ನು ಪರಿಶೀಲಿಸಿ, ಸೋಂಕಿತರಲ್ಲಿ ಧೈರ್ಯ ತುಂಬುವ, ವೈದ್ಯರು, ಸಿಬ್ಬಂದಿಗಳ ಬೆನ್ನು ತಟ್ಟುವ ಕೆಲಸ ಮಾಡಿದ್ದೇನೆ. ತಾವು ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದಾಗ ಎಷ್ಟು ಬಾರಿ ಭೇಟಿ ನೀಡಿದ್ದರು ಎಂದು ನೆನಪಿಸಿಕೊಳ್ಳಲಿ ಎಂದು ಡಿ.ಕೆ ಶಿವಕುಮಾರ್ ಹೆಸರು ಪ್ರಸ್ತಾಪಿಸದೇ ಟೀಕಿಸಿರುವುದು. ಹಾಗೂ ವಿಲಿಯಮ್ ಮೀಕ್ಲಿ ಸಾಲುಗಳ ಉಲ್ಲೇಖ ಡಿಕೆಶಿ ಅವರ ಕಡೆಗೇನಾ ಇರಬಹುದೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ.
ಇನ್ನು ಬೆಂಗಳೂರಿನ ಕೋವಿಡ್ ಆಸ್ಪತ್ರೆಗಳಲ್ಲಿ ವ್ಯವಸ್ಥೆ ಸರಿ ಇಲ್ಲ ಎಂದು ಟೀಕೆ ಮಾಡುತ್ತಿದ್ದ ಪ್ರತಿಪಕ್ಷಗಳಿಗೆ ಈಗ ವಾಸ್ತವದ ಅರಿವಾಗಿದೆ. ಸರ್ಕಾರ ಉತ್ತಮವಾದ ಕೆಲಸ ಮಾಡಿದೆ ಅಂತ ಸ್ವತಃ ಕೆಪಿಸಿಸಿ ಅಧ್ಯಕ್ಷರು ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿ, ಅಲ್ಲಿ ನಿಜವಾಗಲೂ ಉತ್ತಮ ಸೇವೆ ಇದೆ ಎಂದು ಒಪ್ಪಿಕೊಂಡಿದ್ದಾರೆ. ಅವರಿಗೆ ನನ್ನ ಧನ್ಯವಾದಗಳು ಎಂದು ಡಿಕೆಶಿ ಹೆಸರು ನೇರವಾಗಿ ಪ್ರಸ್ತಾಪಿಸದೇ ಸುಧಾಕರ್ ಟ್ವೀಟ್ ಮಾಡಿದ್ದಾರೆ.