ಕರ್ನಾಟಕ

karnataka

ETV Bharat / state

ಲೋಪವಿಲ್ಲದಂತೆ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಿ: ವಿಕ್ಟೋರಿಯಾ ಆಸ್ಪತ್ರೆ ವೈದ್ಯರಿಗೆ ಸಚಿವ ಸುಧಾಕರ್ ಸೂಚನೆ - ಬೆಂಗಳೂರು ಸುದ್ದಿ 2020

ಕೊರೊನಾ ನಿಯಂತ್ರಣಕ್ಕೆ ಹಗಲು-ರಾತ್ರಿ ಲೆಕ್ಕಿಸದೆ ಮುಖ್ಯಮಂತ್ರಿ ಸೇರಿ ಎಲ್ಲರೂ ಕೆಲಸ ಮಾಡುತ್ತಿರುವಾಗ ಇಂತಹ ಲೋಪಗಳನ್ನು ಸಹಿಸಲು ಸಾಧ್ಯವಿಲ್ಲ. ನಿಮಗೆ ಬೇಕಿರುವ ಎಲ್ಲಾ ಸೌಲಭ್ಯಗಳನ್ನು ಸರ್ಕಾರ ನೀಡಲು ಸಿದ್ಧವಿದೆ. ಆದರೆ ತಪ್ಪುಗಳು ಮರುಕಳಿಸಬಾರದು ಎಂದು ವಿಕ್ಟೋರಿಯಾ ಆಸ್ಪತ್ರೆ ವೈದ್ಯರಿಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ತಾಕೀತು ಮಾಡಿದ್ದಾರೆ.

Minister Sudhakar
ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್

By

Published : Jul 7, 2020, 7:46 PM IST

ಬೆಂಗಳೂರು: ಕೋವಿಡ್ ರೋಗಿಗಳ ಚಿಕಿತ್ಸೆ ಮತ್ತು ಸೌಲಭ್ಯಗಳ ವಿಷಯದಲ್ಲಿ ಲೋಪಗಳಿಗೆ ಅವಕಾಶವಿಲ್ಲದಂತೆ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಲು ವಿಕ್ಟೋರಿಯಾ ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ಸೂಚನೆ ನೀಡಿದ್ದಾರೆ.

ಇಂದು ಆಸ್ಪತ್ರೆಗೆ ಭೇಟಿ ನೀಡಿ ಅಧಿಕಾರಿಗಳು, ವೈದ್ಯರು ಮತ್ತು ಸಿಬ್ಬಂದಿ ಜತೆ ಸಮಾಲೋಚನೆ ನಡೆಸಿ ಪರಿಶೀಲನೆ ನಡೆಸಿದ ಸಚಿವರು, ಸಭೆಯಲ್ಲಿ ಈ ಕುರಿತು ಎಚ್ಚರಿಕೆ ನೀಡಿದರು. ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎಸ್.ಆರ್.ವಿಶ್ವನಾಥ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಮಾಧ್ಯಮಗಳಲ್ಲಿ ಆಸ್ಪತ್ರೆಗೆ ಸಂಬಂಧಿಸಿದಂತೆ ನಕಾರಾತ್ಮಕ ವರದಿಗಳು ಬರುತ್ತಿವೆ. ಹಗಲು-ರಾತ್ರಿ ಲೆಕ್ಕಿಸದೆ ಮುಖ್ಯಮಂತ್ರಿ ಸೇರಿ ಎಲ್ಲರೂ ಕೆಲಸ ಮಾಡುತ್ತಿರುವಾಗ ಇಂತಹ ಲೋಪಗಳನ್ನು ಸಹಿಸಲು ಸಾಧ್ಯವಿಲ್ಲ. ನಿಮಗೆ ಬೇಕಿರುವ ಎಲ್ಲಾ ಸೌಲಭ್ಯಗಳನ್ನು ಸರ್ಕಾರ ನೀಡಲು ಸಿದ್ಧ. ಆದರೆ ತಪ್ಪುಗಳು ಮರುಕಳಿಸಬಾರದು ಎಂದು ತಾಕೀತು ಮಾಡಿದರು.

ಪ್ರತಿದಿನ ದಾಖಲಾಗುತ್ತಿರುವ ಸೋಂಕಿತರು ಮತ್ತು ಗುಣಮುಖರಾಗಿ ಬಿಡುಗಡೆ ಆಗುವವರ ಸಂಖ್ಯೆಯನ್ನು ಅಧಿಕೃತವಾಗಿ ತಿಳಿಸುವ ವ್ಯವಸ್ಥೆ ಮಾಡಬೇಕು. ಹಾಗೆಯೇ ಸಾವಿನ ಸಂಖ್ಯೆ ಮತ್ತು ಕಾರಣಗಳು, ಗಂಭೀರ ಸ್ಥಿತಿಯಲ್ಲಿ ಇರುವವರ ಕುರಿತು ಮಾಹಿತಿ ನೀಡಬೇಕು ಎಂದು ತಿಳಿಸಿದರು.

ಅನುಸರಿಸುತ್ತಿರುವ ಚಿಕಿತ್ಸಾ ವಿಧಿ ವಿಧಾನಗಳು, ಡಯಾಲಿಸಿಸ್ ಸೌಲಭ್ಯ ಪಡೆಯುತ್ತಿರುವವರ ಆರೈಕೆಗೆ ಕೈಗೊಂಡಿರುವ ಕ್ರಮಗಳ ಮಾಹಿತಿಯನ್ನು ಪ್ರತಿದಿನವೂ ಕೊಡಬೇಕು. ಹಾಗೆಯೇ ಗರ್ಭಿಣಿಯರ ವಿವರಗಳನ್ನು ನೀಡಲು ಸೂಚಿಸಿದ ಅವರು, ಈ ಹಿಂದೆ ಸೂಚನೆ ನೀಡಿದ್ದಂತೆ ಟೆಲಿ ಐಸಿಯುಗೆ ಸೇರ್ಪಡೆ ಮಾಡಿಲ್ಲದಕ್ಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಆದಷ್ಟು ಬೇಗ ಸೇರ್ಪಡೆ ಮಾಡುವಂತೆ ತಿಳಿಸಿದರು.

ಇದಾದ ಬಳಿಕ ವಿಡಿಯೋ ಸಂವಾದದ ಮೂಲಕ ಐಸಿಯು ವಾರ್ಡ್​ಗಳಲ್ಲಿರುವ ರೋಗಿಗಳ ಜೊತೆ ಸಮಾಲೋಚನೆ ನಡೆಸಿ ಚಿಕಿತ್ಸೆ ಮತ್ತು ಸೌಲಭ್ಯಗಳ ಗುಣಮಟ್ಟದ ಬಗ್ಗೆ ಹಾಗೂ ಊಟದ ಗುಣಮಟ್ಟದ ಬಗ್ಗೆ ವಿಚಾರಿಸಿದರು.

ABOUT THE AUTHOR

...view details