ಕರ್ನಾಟಕ

karnataka

ETV Bharat / state

ಕೋವಿಡ್ ನಿರ್ವಹಣೆ ಬಗ್ಗೆ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಗರಂ ; ಸಚಿವ ಸುಧಾಕರ್ ಸ್ಪಷ್ಟೀಕರಣ

ಸತ್ತ ತಂದೆ ತಾಯಿಯ ಮುಖ ನೋಡಲು ಬಿಡಲಿಲ್ಲ. ಮಾನವೀಯತೆ ಇಲ್ಲದ ಸರ್ಕಾರ ಅಂತಾ ಕರೆಯಬೇಕು. ಶವದ ಮೇಲೆ ರಾಜಕಾರಣ ಮಾಡಬಾರದು. ಹೀಗಾಗಿ, ಈ ವಿಚಾರದಲ್ಲಿ ನಾವು ರಾಜಕಾರಣ ಮಾಡಲಿಲ್ಲ. ಶವದ ಮೇಲಿನ ರಾಜಕಾರಣ ಅದು ನಿಮ್ಮ ಸಂಸ್ಕೃತಿ ಎಂದು ಆರೋಪಿಸಿದರು. ಇದಕ್ಕೆ ಸಚಿವ ಸುಧಾಕರ್‌ ತಿರುಗೇಟು ನೀಡುವ ಪ್ರಯತ್ನ ಮಾಡಿದರು..

Minister Sudhakar gave clarification about management of Covid in the Assembly
ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್

By

Published : Sep 22, 2020, 9:56 PM IST

Updated : Sep 22, 2020, 11:25 PM IST

ಬೆಂಗಳೂರು : ಸರ್ಕಾರದ ಮೂಲಕ ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆಗೆ ದಾಖಲಾದವರ ಸಂಪೂರ್ಣ ವೆಚ್ಚ ಸರ್ಕಾರವೇ ಭರಿಸುತ್ತದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್‌ ಸ್ಪಷ್ಟಪಡಿಸಿದರು.

ವಿಧಾನಸಭೆಯಲ್ಲಿ ಪ್ರತಿಪಕ್ಷಗಳು ನಿಯಮ 69ರ ಅಡಿ ಪ್ರಸ್ತಾಪಿಸಿದ ವಿಷಯಗಳಿಗೆ ಸಂಬಂಧಿಸಿ ಉತ್ತರ ನೀಡಿದ ಅವರು, ಕೊರೊನಾ ಚಿಕಿತ್ಸೆಯಲ್ಲಿ ಎರಡು ವಿಧಗಳಿವೆ. ಕೋವಿಡ್‌ ದೃಢವಾದ ಕೂಡಲೇ ಬಿಬಿಎಂಪಿ ಮೂಲಕ ನೋಂದಣಿ ಮಾಡಿಕೊಂಡು ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗೆ ದಾಖಲಾದ್ರೆ, ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಸರ್ಕಾರ ಭರಿಸಲಿದೆ. ಸರ್ಕಾರದಲ್ಲಿ ನೋಂದಣಿ ಮಾಡಿಕೊಳ್ಳದೇ, ನೇರವಾಗಿ ಅವರೇ ಖಾಸಗಿ ಆಸ್ಪತ್ರೆಗೆ ದಾಖಲಾಗುತ್ತಾರೆ.

ಅಂತವರು ಚಿಕಿತ್ಸಾ ವೆಚ್ಚವನ್ನು ಅವರೇ ಭರಿಸಬೇಕು. ಖಾಸಗಿ ಆಸ್ಪತ್ರೆಯಲ್ಲಿ ಹೆಚ್ಚು ಶುಲ್ಕ ವಿಧಿಸುತ್ತಿರುವುದು ಗಮನಕ್ಕೆ ಬಂದ ಕೂಡಲೇ, ಖಾಸಗಿಯವರಿಗೂ ಕೊರೊನಾ ಚಿಕಿತ್ಸಾ ವೆಚ್ಚ ನಿಗದಿ ಮಾಡಿದ್ದೇವೆ ಎಂದು ಉತ್ತರಿಸಿದರು. ಇದಕ್ಕೂ ಮುನ್ನ ನಿಯಮ 69 ಅಡಿ ಮುಂದುವರೆದ ಚರ್ಚೆಯಲ್ಲಿ ಮಾಜಿ ಸಚಿವ ಯು ಟಿ ಖಾದರ್, ಸತ್ತ ತಂದೆ ತಾಯಿಯ ಮುಖ ನೋಡಲು ಬಿಡಲಿಲ್ಲ. ಮಾನವೀಯತೆ ಇಲ್ಲದ ಸರ್ಕಾರ ಅಂತಾ ಕರೆಯಬೇಕು. ಶವದ ಮೇಲೆ ರಾಜಕಾರಣ ಮಾಡಬಾರದು. ಹೀಗಾಗಿ, ಈ ವಿಚಾರದಲ್ಲಿ ನಾವು ರಾಜಕಾರಣ ಮಾಡಲಿಲ್ಲ. ಶವದ ಮೇಲಿನ ರಾಜಕಾರಣ ಅದು ನಿಮ್ಮ ಸಂಸ್ಕೃತಿ ಎಂದು ಆರೋಪಿಸಿದರು.

ಯು ಟಿ ಖಾದರ್ ಹೇಳಿಕೆಗೆ ಕಾನೂನು ಸಚಿವ ಮಧುಸ್ವಾಮಿ ಆಕ್ಷೇಪಿಸುತ್ತಾ, ಸಂಸ್ಕೃತಿ ಬಗ್ಗೆ ನಿಮ್ಮಿಂದ ಕಲಿಯುವ ಅಗತ್ಯ ಇಲ್ಲ. ಸಮಯ ಸಿಕ್ಕಿದೆ ಅಂತಾ ಬಾಯಿಗೆ ಬಂದಿದ್ದು ಮಾತನಾಡಬೇಡಿ ಅಂತಾ ಗರಂ ಆದರು. ಮೊದಲ ದಿನಗಳಲ್ಲಿ ಶವ ತೆಗೆದುಕೊಂಡು ಹೋಗಲು ಕುಟುಂಬದವರು ಬರಲಿಲ್ಲ. ಹೀಗಾಗಿ, ಸರ್ಕಾರವೇ ನಿಯಮ ಮಾಡಿ ಶವಸಂಸ್ಕಾರ ಮಾಡುವ ವ್ಯವಸ್ಥೆ ಮಾಡಿದೆ. ಮಾಜಿ ಆರೋಗ್ಯ ಸಚಿವರಾಗಿ ಈ ರೋಗದ ತೀವ್ರತೆ ಅರಿತುಕೊಳ್ಳದೇ ಮಾತನಾಡುವುದು ತಪ್ಪು ಎಂದು ಸಚಿವ ಸುಧಾಕರ್ ತಿರುಗೇಟು ನೀಡಿದರು.

ಫ್ರಾಡ್ ಶಾಸಕರೆಂದು ಕರೀತಾರೆ:ಇದೇ ವೇಳೆ ಮಾತನಾಡಿದ ಕುಣಿಗಲ್ ಶಾಸಕ ಡಾ.ರಂಗನಾಥ, ನಾನು ಕೂಡ ಕೊರೊನಾ‌ ಸೋಂಕಿತನಾಗಿ 15 ದಿನ ಚಿಕಿತ್ಸೆ ಪಡೆದು ಬಂದಿದ್ದೇನೆ. ಏನಾದ್ರೂ ಕೇಳೋಕೆ ಹೋದ್ರೇ ಕಾನೂನು ಸಚಿವರು ಕೋಪ ಮಾಡ್ಕೋತಾರೆ. ಕುಣಿಗಲ್ ಫ್ರಾಡ್, ನೀನು ಫ್ರಾಡ್ ಅಂತಾರೆ ಸಚಿವರು‌ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಮಧ್ಯೆ ಪ್ರವೇಶ ಮಾಡಿದ ಸಚಿವ ಮಾಧುಸ್ವಾಮಿ, ನಾನು ಮನೆ ವಿಚಾರದಲ್ಲಿ ಫ್ರಾಡ್ ಆಗಿದೆ ಅಂತಾ ಹೇಳಿದ್ದೇನೆ. ಫ್ರಾಡ್ ಅಂತಾ ಅಂದಿಲ್ಲ ಎಂದು ಈಗಾಗಲೇ ಹೇಳಿದ್ದೇನೆ. ಹಾಗಿದ್ರೂ ಈಗ ನಿಮ್ಮನ್ನ ನೀವೇ ಫ್ರಾಡ್ ಅಂತಾ ಹೇಳಿದ್ರೇ ಹೇಗೆ ಎಂದು ಸಮಜಾಯಿಷಿ ನೀಡಿದರು.

ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್

ಅರ್ಧ ಎಕರೆ ಜಮೀನು ಮಾರಾಟ ಮಾಡಬೇಕು:ಕೊರೊನಾ ಬಂದು‌ ಖಾಸಗಿ ಆಸ್ಪತ್ರೆಗೆ ಅರ್ಧ ಎಕರೆ ಮಾರಾಟ ಮಾಡಿಕೊಳ್ಳಬೇಕು ಎಂದು ಜೆಡಿಎಸ್ ಶಾಸಕ ಶಂಕರಲಿಂಗೇಗೌಡ ಆತಂಕ ವ್ಯಕ್ತಪಡಿಸಿದರು. ಕೊರೊನಾ ಬರೋದು ಒಂದೇ, ಅರ್ಧ ಎಕರೆ ಢಮಾರ್ ಅನ್ನೋದು ಒಂದೇ. ಪಾಪ ನರ್ಸ್‌ಗಳು, ಡಾಕ್ಟರ್​ಗಳು ಕೆಲಸ ಮಾಡ್ತಿದ್ದಾರೆ. ನಾನು ಬಿಬಿಎಂಪಿಯಿಂದ ಅನುಮತಿ ಪಡೆದು ಖಾಸಗಿ ಆಸ್ಪತ್ರೆಗೆ ಹೋಗಿದ್ದೆ. ಅರ್ಧ ಬಿಲ್ ತಗೊಂಡ್ರು. ಫುಲ್ ಬಿಲ್ ನೋಡಿದ್ರೇ ಭಯ ಆಗೋದು ಎಂದು ತಿಳಿಸಿದರು. ಕೊರೊನಾದಿಂದಾಗಿ ಜನ ಸಾಯ್ತಿದ್ದಾರೆ. ಇದರಿಂದ ಖಾಸಗಿ ಆಸ್ಪತ್ರೆಗಳವರು ಬದುಕಿಹೋದ್ರು ಎಂದು ಆಕ್ಷೇಪ ವ್ಯಕ್ತಪಡಿಸಿದರು. ಆಗ ಮಧ್ಯಪ್ರವೇಶಿಸಿದ ಸುಧಾಕರ್, ಬಿಬಿಎಂಪಿಯಿಂದ ಅನುಮತಿ ಪಡೆದು ಖಾಸಗಿ ಆಸ್ಪತ್ರೆಗೆ ಹೋದ್ರೆ ಸರ್ಕಾರವೇ ಪೂರ್ತಿ ಹಣ ಪಾವತಿಸುತ್ತದೆ ಎಂದು ಸ್ಪಷ್ಟಪಡಿಸಿದರು.

Last Updated : Sep 22, 2020, 11:25 PM IST

ABOUT THE AUTHOR

...view details