ಬೆಂಗಳೂರು:ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಕರ್ನಾಟಕದಲ್ಲಿ ಮುಕ್ತಾಯಗೊಂಡಿದೆ. ನಾವು ಈ ಯಾತ್ರೆಯ ಉದ್ದೇಶ ಶುದ್ಧಿಯನ್ನು ಪ್ರಶ್ನೆ ಮಾಡುವುದಿಲ್ಲ. ಆದರೆ, ಆಶಯ ಈಡೇರಿತೆ? ಎಂಬ ಸಾರ್ವಜನಿಕರ ಪ್ರಶ್ನೆಗೆ ಕಾಂಗ್ರೆಸ್ ಉತ್ತರ ನೀಡಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಆಗ್ರಹಿಸಿದ್ದಾರೆ.
ಭಾರತ್ ಜೋಡೋ ಯಾತ್ರೆ ಪ್ರಶ್ನಿಸಿ ಸರಣಿ ಟ್ವೀಟ್ ಮಾಡಿರುವ ಸುಧಾಕರ್, ಮೊದಲನೆಯದಾಗಿ ಭಾರತ್ ಜೋಡೋ ಎಂಬ ಕಾಂಗ್ರೆಸ್ ಘೋಷವಾಕ್ಯವೇ ಹಾಸ್ಯಾಸ್ಪದ ಹಾಗೂ ಪ್ರಶ್ನಾರ್ಹ. ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಭಾರತದ ಅಖಂಡತೆ ಭದ್ರವಾಗಿರುವಾಗ ಜೋಡಿಸುವ ಚರ್ಚೆ ರಾಜಕೀಯ ಸ್ಟಂಟ್. ಒಂದು ಮಿಥ್ಯಾ ವಾದವನ್ನು ಸತ್ಯ ಮಾಡುವ ವ್ಯರ್ಥ ಪ್ರಯತ್ನವಷ್ಟೆ ಎಂದು ವ್ಯಂಗ್ಯವಾಡಿದ್ದಾರೆ.
ಅಷ್ಟಕ್ಕೂ ರಾಜ್ಯದಲ್ಲಿ ನಡೆದ ಪಾದಯಾತ್ರೆ ಸಂದರ್ಭದಲ್ಲಿ ರಾಹುಲ್ ಗಾಂಧಿಯವರಾಗಲಿ, ಕಾಂಗ್ರೆಸ್ ಆಗಲಿ ಒಟ್ಟಾರೆಯಾಗಿ ರಾಜ್ಯಕ್ಕೆ ಕೊಟ್ಟ ಸಂದೇಶವೇನು? ಎಂಬುದು ಸಂಶೋಧನೆಗೆ ಅರ್ಹವಾದ ವಿಚಾರ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಡೆದ ಜಾತಿ ವಿಭಜನೆ, ಧರ್ಮ ವಿಭಜನೆ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದರೆ ಜೋಡಿಸುವ ಪ್ರಕ್ರಿಯೆ ಸರಿಯಾದ ಹಾದಿಯಲ್ಲಿದೆ ಎಂದು ವ್ಯಾಖ್ಯಾನಿಸಬಹುದಿತ್ತು. ಆದರೆ, ಅಂಥ ಯಾವ ಮಾತುಗಳೂ ನಿಮ್ಮಿಂದ ಬರಲೇ ಇಲ್ಲ! ಎಂದು ಜೋಡೋ ಉದ್ದೇಶವನ್ನು ಪ್ರಶ್ನಿಸಿದ್ದಾರೆ.