ಕರ್ನಾಟಕ

karnataka

ETV Bharat / state

ಮಾನ್ಯ ಶಾಸಕ ಮಿತ್ರರ ಬಗ್ಗೆ ನನಗೆ ಅಪಾರವಾದ ಗೌರವವಿದೆ: ಸುಧಾಕರ್ ಸರಣಿ ಟ್ವೀಟ್​​​ - ಸುಧಾಕರ್ ಹೇಳಿಕೆ

ನನ್ನ ಹೇಳಿಕೆಯನ್ನು ಅರ್ಥ ಮಾಡಿಕೊಳ್ಳಬೇಕಾದ ಮಹಾನಾಯಕರುಗಳು ಅರ್ಥ ಮಾಡಿಕೊಂಡರೆ ಸಾಕು. ಇಡೀ ರಾಜ್ಯದ ಜನರನ್ನು ತಪ್ಪು ದಾರಿಗೆ ಎಳೆದು ರಾಜಕೀಯ ದ್ವೇಷ ಸಾಧಿಸಲು ಹೊರಟಿರುವ ಮಹಾನಾಯಕರ ಮುಖವಾಡ ಕಳಚುವ ಉದ್ದೇಶ ನನ್ನ ಹೇಳಿಕೆಯ ಹಿಂದೆ ಇತ್ತು ಅಷ್ಟೇ ಅಂತ ಸಚಿವ ಸುಧಾಕರ್ ಸರಣಿ ಟ್ವೀಟ್ ಮಾಡಿದ್ದಾರೆ.

minister-sudhakar-
ಸುಧಾಕರ್

By

Published : Mar 24, 2021, 8:02 PM IST

ಬೆಂಗಳೂರು: ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಏಕಪತ್ನಿ ವ್ರತಸ್ಥ ಹೇಳಿಕೆಗೆ ವಿರೋಧ ವ್ಯಕ್ತವಾಗಿದೆ. ಸ್ವಪಕ್ಷೀಯರಲ್ಲೇ ಕೆಲವರು ಸಚಿವ ಸುಧಾಕರ್ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್​ ಶಾಸಕರು ಈ ಬಗ್ಗೆ ಕಿಡಿಕಾರಿದ್ದಾರೆ. ಈ ಕುರಿತಂತೆ ಸ್ವತಃ ಸುಧಾಕರ್​ ಅವರೇ ಸರಣಿ ಟ್ವೀಟ್​ಗಳ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ಸದನದಲ್ಲೂ ಇದೇ ವಿಚಾರವಾಗಿ ಕಾಂಗ್ರೆಸ್ ವಾಗ್ದಾಳಿ ನಡೆಸಿದರೆ, ಸ್ವಪಕ್ಷೀಯರಿಂದಲೂ ಅಸಮಾಧಾನ ಕೇಳಿಬಂದಿದೆ. ಇತ್ತ ಅವರ ಹೇಳಿಕೆ ರಾಜಕೀಯದಲ್ಲಿ ಸಂಚಲನ ಸೃಷ್ಟಿಸುತ್ತಿದ್ದಂತೆ ಸುಧಾಕರ್ ಸರಣಿ ಟ್ವೀಟ್​​​ಗಳನ್ನು ಮಾಡಿದ್ದಾರೆ.

ನನ್ನ ಹೇಳಿಕೆಯನ್ನು ಅರ್ಥ ಮಾಡಿಕೊಳ್ಳಬೇಕಾದ ಮಹಾನಾಯಕರುಗಳು ಅರ್ಥ ಮಾಡಿಕೊಂಡರೆ ಸಾಕು. ಇಡೀ ರಾಜ್ಯದ ಜನರನ್ನು ತಪ್ಪು ದಾರಿಗೆ ಎಳೆದು ರಾಜಕೀಯ ದ್ವೇಷ ಸಾಧಿಸಲು ಹೊರಟಿರುವ ಮಹಾನಾಯಕರ ಮುಖವಾಡ ಕಳಚುವ ಉದ್ದೇಶ ನನ್ನ ಹೇಳಿಕೆಯ ಹಿಂದೆ ಇತ್ತು ಅಷ್ಟೇ. ನಮ್ಮಗಳ ತೇಜೋವಧೆ ಮಾಡಲು ಹೊರಟವರ ಉದ್ದೇಶ ಈಡೇರಲ್ಲ ಎಂದಿದ್ದಾರೆ.

ಕೆಲ ನಾಯಕರ ಏಕಪಕ್ಷೀಯ, ಪೂರ್ವಗ್ರಹ ಪೀಡಿತ ಹೇಳಿಕೆಗಳಿಂದ ಬೇಸತ್ತು ಅವರ ನೈತಿಕತೆಯನ್ನು ಪ್ರಶ್ನಿಸಿ ಬೆಳಗ್ಗೆ ನಾನು ಮಾಧ್ಯಮಗಳಿಗೆ ನೀಡಿದ್ದ ಹೇಳಿಕೆ ಬೇರೆ ಬೇರೆ ಆಯಾಮಗಳನ್ನು ಪಡೆದುಕೊಂಡಿದೆ. ಎಲ್ಲಾ ಮಾನ್ಯ ಶಾಸಕ ಮಿತ್ರರ ಬಗ್ಗೆ ನಾನು ಅಪಾರವಾದ ಗೌರವ ಇಟ್ಟುಕೊಂಡಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.

ಹೀಗಾಗಿ ಯಾರಿಗಾದರೂ ನನ್ನ ಹೇಳಿಕೆಯಿಂದ ನೋವಾಗಿದ್ದಲ್ಲಿ ಅದಕ್ಕಾಗಿ ವಿಷಾದ ವ್ಯಕ್ತಪಡಿಸುತ್ತೇನೆ. 17 ಜನರ ವಿರುದ್ಧ ತೇಜೋವಧೆ ಯತ್ನ ನಡೆಸಿದ್ದ ಕೆಲ ನಾಯಕರ ವಿರುದ್ಧ ಮಾತ್ರವೇ ನಾನು ಹೇಳಿಕೆ ನೀಡುವ ಯತ್ನ ಮಾಡಿದ್ದೇನೆಯೇ ಹೊರತು ಎಲ್ಲಾ ಶಾಸಕರಿಗೆ ನೋವುಂಟು ಮಾಡುವ ಉದ್ದೇಶ ನನಗಿಲ್ಲ ಎಂದು ಟ್ವಿಟ್​ ಮಾಡಿದ್ದಾರೆ.

ಮುಂದುವರೆದು, ಕೆಲ ದಿನಗಳಿಂದ ಮಹತ್ವವಾಗಿರುವ ರಾಜ್ಯ ಬಜೆಟ್ ಅಧಿವೇಶನದಲ್ಲಿ ಕಲಾಪ ನಡೆಯಲು ಬಿಡದೆ ಅನಾವಶ್ಯಕ ವಿಚಾರಗಳನ್ನು ಪ್ರಸ್ತಾಪಿಸಿ ಸದನದ ಮತ್ತು ಶಾಸಕರ ಸಮಯ ವ್ಯರ್ಥ ಮಾಡಿರುವ ಕಾಂಗ್ರೆಸ್, ರಾಜಕೀಯ ದುರುದ್ದೇಶದಿಂದ 6 ಮಂದಿ ಸಚಿವರ ತೇಜೋವಧೆ ಮಾಡಲು ಯತ್ನಿಸುತ್ತಿದೆ. 6 ಜನ ಮಂತ್ರಿಗಳ ವಿರುದ್ಧ ನಿರಂತರ ಶಂಕೆ, ಆರೋಪ ಮಾಡುತ್ತಿರುವಾಗ ಅವರಿಗಾಗಿರಬಹುದಾದ ಅವಮಾನ, ಮಾನಸಿಕ, ಭಾವನಾತ್ಮಕ ನೋವು ಅರಿವಾಗಲಿಲ್ಲ. ಆದರೆ ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕು ಎನ್ನುವ ನನ್ನ ಹೇಳಿಕೆ ಕೆಲವರಿಗೆ ಬಹಳ ತಪ್ಪಾಗಿ ಕಾಣುತ್ತಿದೆ. ನನ್ನ ಹೇಳಿಕೆಯನ್ನು ಶಬ್ದಶಃ ಅರ್ಥೈಸದೆ, ನಮ್ಮ ಸ್ಥಾನದಲ್ಲಿ ನಿಂತು, ಅದರ ಹಿಂದಿರುವ ಆಘಾತ, ವೇದನೆ, ಭಾವನೆಗಳನ್ನು ಅವಲೋಕಿಸಿ, ಅರ್ಥ ಮಾಡಿಕೊಳ್ಳಬೇಕೆಂದು ನಿವೇದನೆ ಮಾಡಿಕೊಳ್ಳುತ್ತೇನೆ ಎಂದು ಸಚಿವರು ಟ್ವೀಟ್​ಗಳಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ:ರಾಜ್ಯದ ಆರ್ಥಿಕತೆ ದಿವಾಳಿಯತ್ತ ಹೋಗ್ತಿದೆ, ಸರ್ಕಾರದಿಂದ ಸೂಕ್ತ ಉತ್ತರ ಸಿಕ್ಕಿಲ್ಲ: ಸಿದ್ದರಾಮಯ್ಯ

ABOUT THE AUTHOR

...view details