ಕರ್ನಾಟಕ

karnataka

ನಾಳೆ ರಾಜ್ಯದ 263 ಕಡೆ ಕೋವಿಡ್ ವ್ಯಾಕ್ಸಿನ್ ಡ್ರೈರನ್; ಸಚಿವ ಸುಧಾಕರ್

By

Published : Jan 7, 2021, 5:02 PM IST

ನಾಳೆ ದೇಶಾದ್ಯಂತ ಕೋವಿಡ್ ಲಸಿಕೆ ಡ್ರೈರನ್ ನಡೆಯುತ್ತಿದೆ. ಕೇಂದ್ರದ ಮಾರ್ಗಸೂಚಿ ಪ್ರಕಾರ ರಾಜ್ಯದಲ್ಲಿ ಪ್ರತಿ ಜಿಲ್ಲೆಯ ಏಳು ಸ್ಥಳಗಳಲ್ಲಿ ಡ್ರೈರನ್ ನಡೆಸಲಾಗುವುದು. ಅದರಂತೆ ಒಟ್ಟು 263 ಕಡೆ ಡ್ರೈರನ್ ಕೈಗೊಳ್ಳಲಾಗುತ್ತದೆ.

minister-sudakhar-talk-about-corona-vaccine-delivery-news
ಸಚಿವ ಸುಧಾಕರ್

ಬೆಂಗಳೂರು: ಲಸಿಕೆ ವಿತರಣೆ ಸಂಬಂಧ ರಾಜ್ಯ ಎಲ್ಲಾ ಸಿದ್ಧತೆಗಳನ್ನು‌ ನಡೆಸಿದ್ದು, ಮೊದಲ‌ ಆದ್ಯತೆಯಾಗಿ ಲಸಿಕೆ ಹಾಕಿಸಿಕೊಳ್ಳಲು ರಾಜ್ಯದಲ್ಲಿ 6.36 ಲಕ್ಷ ಮಂದಿ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಸ್ಪಷ್ಟಪಡಿಸಿದರು.

ಸಚಿವ ಸುಧಾಕರ್

ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಜೊತೆ ಲಸಿಕೆ ವಿತರಣೆಯ ಪೂರ್ವಸಿದ್ಧತೆ ಸಂಬಂಧ ವಿಡಿಯೋ ಕಾನ್ಫರೆನ್ಸ್ ನಡೆಸಿದ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು. ಕೇಂದ್ರ ಆರೋಗ್ಯ ಸಚಿವರು ಎಲ್ಲ ರಾಜ್ಯಗಳ ಆರೋಗ್ಯ ಸಚಿವರ ಸಭೆ ನಡೆಸಿದರು. ಸಭೆಯಲ್ಲಿ ಲಸಿಕೆಯ ಸಿದ್ಧತೆಗಳ ಬಗ್ಗೆ ಚರ್ಚೆ ನಡೆಸಲಾಯಿತು ಎಂದು ಸಚಿವರು ಮಾಹಿತಿ ನೀಡಿದರು.

ನಾಳೆ ಡ್ರೈರನ್ ದೇಶಾದ್ಯಂತ ನಡೆಯುತ್ತಿದ್ದು, ಕೇಂದ್ರದ ಮಾರ್ಗಸೂಚಿ ಪ್ರಕಾರ ಡ್ರೈರನ್ ನಡೆಯಲಿದೆ. ನಮ್ಮ ರಾಜ್ಯದಲ್ಲಿ ಪ್ರತಿ ಜಿಲ್ಲೆಯ ಏಳು ಸ್ಥಳಗಳಲ್ಲಿ ಡ್ರೈರನ್ ನಡೆಸಲಾಗುವುದು. ಅದರಂತೆ ಒಟ್ಟು 263 ಕಡೆ ಡ್ರೈರನ್ ಕೈಗೊಳ್ಳಲಾಗುತ್ತದೆ. ಜಿಲ್ಲಾಸ್ಪತ್ರೆಗಳು 22, ಪ್ರಾಥಮಿಕ ಚಿಕಿತ್ಸಾ ಕೇಂದ್ರಗಳು 87, ಖಾಸಗಿ ಆಸ್ಪತ್ರೆಗಳು 28 ಕಡೆ ಡ್ರೈರನ್ ನಡೆಯಲಿದೆ ಎಂದರು.

ಓದಿ: ಜನವರಿ 8ರಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ವ್ಯಾಕ್ಸಿನ್​ ಡ್ರೈರನ್

ನಮ್ಮಲ್ಲಿ ಈವರೆಗೆ 6.36 ಆರೋಗ್ಯ ಸಿಬ್ಬಂದಿ ಲಸಿಕೆಗೆ ನೋಂದಣಿಯಾಗಿದ್ದಾರೆ. ಆರೋಗ್ಯ ಸಿಬ್ಬಂದಿಯಾಗಿರುವವರು ಇನ್ನೂ ನೋಂದಣಿ ಮಾಡಿಕೊಳ್ಳಬಹುದು. ಇನ್ನು ದೇಶಾದ್ಯಂತ ಮೊದಲಿಗೆ ಒಟ್ಟು 1 ಕೋಟಿ ಲಸಿಕೆ ನೀಡಲಾಗುತ್ತದೆ. ಆ ನಿಟ್ಟಿನಲ್ಲಿ ಆರೋಗ್ಯ ಸಿಬ್ಬಂದಿ ಜೊತೆಗೆ ಪೊಲೀಸ್ ಅಧಿಕಾರಿಗಳು, ರಕ್ಷಣಾ ಇಲಾಖೆ ಸಿಬ್ಬಂದಿ, ಕೋವಿಡ್ ಕರ್ತವ್ಯದಲ್ಲಿದ್ದ ಇತರ ಇಲಾಖೆ ಅಧಿಕಾರಿಗಳನ್ನು ಸೇರಿಸಲು ಮನವಿ ಮಾಡಿದ್ದೇವೆ ಎಂದರು.

ಲಸಿಕೆ ವಿತರಣೆಗೆ ಕೋಲ್ಡ್ ಚೇನ್ ಸಾಮಗ್ರಿಗಳು ಸಿದ್ಧವಾಗಿವೆ. 10 ವಾಕ್ ಇನ್ ಕೂಲರ್ಸ್, 4 ವಾಕ್ ಇನ್ ಫ್ರೀಜರ್, 3201 ಐಎಲ್ಆರ್ ರೆಫ್ರಿಜರೇಟರ್​​ಗಳು, 3039 ಡೀಪ್ ಫ್ರೀಜರ್​​ಗಳು, 3312 ಕೋಲ್ಡ್ ಬಾಕ್ಸ್​​ಗಳು, 46,591 ವ್ಯಾಕ್ಸಿನ್ ಕ್ಯಾರಿಯರ್​ಗಳು, 2,25,749 ಐಸ್ ಪ್ಯಾಕ್​​ಗಳನ್ನು ಸಿದ್ಧ ಮಾಡಿಕೊಳ್ಳಲಾಗಿದೆ. ಕೇಂದ್ರದಿಂದ ಇಲ್ಲಿಯ ತನಕ 24 ಲಕ್ಷ ಸಿರಿಂಜ್ ಕಳಿಸಲಾಗಿದೆ. ಇವುಗಳನ್ನು ಜಿಲ್ಲೆಗಳಿಗೆ ಸರಬರಾಜು ಮಾಡಿದ್ದೇವೆ ಎಂದರು.

ಲಸಿಕೆಯಿಂದ ಅಪಾಯ ಇಲ್ಲ, ಜನ ಅಪನಂಬಿಕೆ ಬಿಡಬೇಕು ಎಂದು ಕೇಂದ್ರ ಹೇಳಿದೆ. ಲಸಿಕೆ ಕಾರ್ಯಕ್ರಮವನ್ನು ಆಂದೋಲನದ ರೀತಿಯಲ್ಲಿ ಮಾಡಬೇಕು. ಜನರ ಪಾಲುದಾರಿಕೆಯೊಂದಿಗೆ ಮಾಡಬೇಕು‌ ಎಂದು ಕೇಂದ್ರ ಆರೋಗ್ಯ ಸಚಿವರು ಸೂಚನೆ ನೀಡಿದ್ದಾರೆ ಎಂದರು.

ಹಕ್ಕಿಜ್ವರ ಹಿನ್ನೆಲೆ ಕಟ್ಟೆಚ್ಚರ:

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರು ಕಾಗೆಗಳು ಸಾವಿಗೀಡಾಗಿದ್ದು, ಕಾಗೆಗಳ ಪರೀಕ್ಷೆ ವರದಿ ಬರಲಿದೆ. ಆ ಬಳಿಕ ಮಾರ್ಗಸೂಚಿಯಂತೆ ಕ್ರಮ ಕೈಗೊಳ್ಳಲಾಗುವುದು. ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಪಶುಸಂಗೋಪನೆ ಇಲಾಖೆ ಅಧಿಕಾರಿಗಳು ನಿಗಾ ವಹಿಸಿದ್ದಾರೆ ಎಂದು ಸಚಿವ ಸುಧಾಕರ್ ಇದೇ ವೇಳೆ ತಿಳಿಸಿದರು.

ಹಕ್ಕಿಜ್ವರ ಹಿನ್ನೆಲೆ ಕಟ್ಟೆಚ್ಚರ ವಹಿಸಿದ್ದೇವೆ. ದಕ್ಷಿಣ ಕನ್ನಡ, ಮೈಸೂರು, ಕೊಡಗು, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳ ಗಡಿಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ‌. ಜನ ಮಾಂಸವನ್ನು ಚೆನ್ನಾಗಿ ಬೇಯಿಸಿ ಬಳಸಬೇಕು ಎಂದು ಮನವಿ ಮಾಡಿದರು.

ಬ್ರಿಟನ್ ವಿಮಾನಯಾನ ಸೇವೆ ಆರಂಭ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕೇಂದ್ರದ ಹೊಸ ಮಾರ್ಗಸೂಚಿಯನ್ವಯ ಕ್ರಮ ವಹಿಸಲಾಗುತ್ತದೆ. ಬ್ರಿಟನ್ ನಿಂದ ಬರೋ ಪ್ರತಿಯೊಬ್ಬ ಪ್ರಯಾಣಿಕನಿಗೂ ಆರ್​​ಟಿಪಿಸಿಆರ್ ಪರೀಕ್ಷೆ ನಡೆಸಲಾಗುತ್ತದೆ. ಬ್ರಿಟನ್ ನಿಂದ ಬಂದವರಿಗೆ ಕಡ್ಡಾಯವಾಗಿ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗುತ್ತದೆ ಎಂದರು.

ವಿಡಿಯೋ ಕಾನ್ಫರೆನ್ಸ್ ವೇಳೆ ತಾಂತ್ರಿಕ ದೋಷ:

ಕೇಂದ್ರ ಆರೋಗ್ಯ ಸಚಿವರ ಜೊತೆ ವಿಡಿಯೋ ಸಂವಾದ ಮಾಡುವ ವೇಳೆ ತಾಂತ್ರಿಕ ದೋಷ ಕಂಡು ಬಂತು. ಎರಡು ಬಾರಿ ತಾಂತ್ರಿಕ ದೋಷ ತಲೆದೋರಿದ ಹಿನ್ನೆಲೆ ಸಂವಾದ ನಡೆಸಲು ಅಡಚಣೆ ಉಂಟಾಯಿತು. ಈ ಹಿನ್ನೆಲೆ ಆರೋಗ್ಯ ಸಚಿವರು ಲಸಿಕೆ ಸಂಬಂಧ ಸಂಪೂರ್ಣ ಮಾಹಿತಿ ನೀಡಲು ಸಾಧ್ಯವಾಗಿಲ್ಲ.

ABOUT THE AUTHOR

...view details