ಕರ್ನಾಟಕ

karnataka

ETV Bharat / state

ಎಪಿಎಂಸಿ ಕಾಯಿದೆಯಿಂದ ರೈತರಿಗೆ ಅನುಕೂಲ, ವದಂತಿಗಳಿಗೆ ಕಿವಿಗೊಡಬೇಡಿ: ಸಚಿವ ಸೋಮಶೇಖರ್ - ಗ್ರಾಮ ಪಂಚಾಯಿತಿ ಚುನಾವಣೆ

ಎಪಿಎಂಸಿ ಕಾಯಿದೆಯ ಕುರಿತು ಅನಗತ್ಯವಾಗಿ ಅಪಪ್ರಚಾರ ಮಾಡಲಾಗುತ್ತಿದೆ. ಕಾಯಿದೆ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸುವ ಸಂಬಂಧ ಬೆಂಗಳೂರು, ಮೈಸೂರು, ಬೆಳಗಾವಿ, ಕಲಬುರಗಿ ವಿಭಾಗದಲ್ಲಿ ಜಾಗೃತಿ ಸಭೆಗಳನ್ನು ನಡೆಸಲು ತೀರ್ಮಾನಿಸಲಾಗಿದೆ.

minister-st-somashekhar-talk-about-apmc-amendment-act
ಸಚಿವ ಎಸ್.ಟಿ. ಸೋಮಶೇಖರ್

By

Published : Dec 11, 2020, 7:25 PM IST

ಬೆಂಗಳೂರು:ಎಪಿಎಂಸಿ ತಿದ್ದುಪಡಿ ಕಾಯಿದೆಯಿಂದ ಯಾವುದೇ ತೊಂದರೆಯಾಗುವುದಿಲ್ಲ ಎಂಬುದನ್ನು ಮನವರಿಕೆ ಮಾಡಿಕೊಡಲು, ಗ್ರಾಮ ಪಂಚಾಯಿತಿ ಚುನಾವಣೆ ಬಳಿಕ ಜನವರಿಯಿಂದ ರಾಜ್ಯದ ನಾಲ್ಕು ವಿಭಾಗಗಳಲ್ಲಿ ಜಾಗೃತಿ ಸಭೆಗಳನ್ನು ನಡೆಸಲಾಗುವುದು ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದ್ದಾರೆ.

ಸಚಿವ ಎಸ್.ಟಿ. ಸೋಮಶೇಖರ್

ವಿಧಾನಸೌಧದಲ್ಲಿ ಇಂದು ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಪಿಎಂಸಿ ಕಾಯಿದೆ ಕುರಿತು ಅನಗತ್ಯವಾಗಿ ಅಪಪ್ರಚಾರ ಮಾಡಲಾಗುತ್ತಿದೆ. ಕಾಯಿದೆ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸುವ ಸಂಬಂಧ ಬೆಂಗಳೂರು, ಮೈಸೂರು, ಬೆಳಗಾವಿ, ಕಲಬುರಗಿ ವಿಭಾಗದಲ್ಲಿ ಜಾಗೃತಿ ಸಭೆಗಳನ್ನು ನಡೆಸಲು ತೀರ್ಮಾನಿಸಲಾಗಿದೆ ಎಂದರು.

ಗ್ರಾಮ ಪಂಚಾಯಿತಿ ಚುನಾವಣೆ ಬಳಿಕ ಜನವರಿ ತಿಂಗಳಿನಿಂದ ಜಾಗೃತಿ ಸಭೆಗಳನ್ನು ಮಾಡಲಾಗುವುದು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬೆಂಗಳೂರಲ್ಲಿ ಜಾಗೃತಿ ಸಭೆಗೆ ಚಾಲನೆ ನೀಡಲಿದ್ದಾರೆ ಎಂದು ಹೇಳಿದರು.

ರೈತರಿಗೆ ಉಪಯೋಗವೇನು?:

ಕಾಯಿದೆಯಲ್ಲಿ ಮೊದಲು ರೈತರು ಎಪಿಎಂಸಿ ಮಾರುಕಟ್ಟೆಯಲ್ಲಿಯೇ ತನ್ನ ಉತ್ಪನ್ನಗಳನ್ನು ಮಾರಾಟ ಮಾಡಬೇಕಾಗಿತ್ತು. ಎಪಿಎಂಸಿ ಮಾರುಕಟ್ಟೆಯಿಂದ ಹೊರಗಡೆ ಮಾರಾಟ ಮಾಡಿದರೆ 2 ಸಾವಿರ ರೂ. ನಿಂದ 5 ಸಾವಿರ ರೂ.ವರೆಗೆ ದಂಡ ವಿಧಿಸಲಾಗುತ್ತಿತ್ತು. ಕಳೆದ ಮೂರು ವರ್ಷದಲ್ಲಿ ಸುಮಾರು 25 ಕೋಟಿ ರೂ. ದಂಡ ಸಂಗ್ರಹಿಸಲಾಗಿದೆ. ಹೀಗಾಗಿ ಈ ನಿಯಮವನ್ನು ತೆಗೆದು ಹಾಕಲಾಗಿದೆ. ರೈತರು ತಮ್ಮ ಉತ್ಪನ್ನಗಳನ್ನು ಎಪಿಎಂಸಿ ಮಾರುಕಟ್ಟೆಯಲ್ಲಿ ಮಾತ್ರವಲ್ಲದೇ, ಹೊರಗಡೆಯೂ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಓದಿ: ದೇಶದ ಬರಗಾಲಕ್ಕೆ ಕಾರಣಗಳೇನು?: ಹೀಗೆ ಹೇಳುತ್ತಿದೆ ಐಐಎಸ್​ಸಿ ಸಂಶೋಧನೆ!

ಅಲ್ಲದೇ, ರೈತರಿಗೆ ದಂಡ ವಿಧಿಸುತ್ತಿದ್ದ ವಿಚಕ್ಷಣ ದಳವನ್ನು ರದ್ದು ಮಾಡಲಾಗಿದೆ. ಇದರಿಂದ ರೈತರಿಗೆ ಯಾವುದೇ ಕಿರಿಕಿರಿ ಇಲ್ಲ ಹಾಗೂ ತಮ್ಮ ಉತ್ಪನ್ನಗಳಿಗೆ ಒಳ್ಳೆಯ ಬೆಲೆ ಎಲ್ಲಿ ಸಿಗುತ್ತದೆಯೋ ಅಲ್ಲಿ ಮಾರಾಟ ಮಾಡಬಹುದು. ಈ ಕಾಯಿದೆಯಿಂದ ರೈತರಿಗೆ ಅನುಕೂಲವಾಗಲಿದೆ ಎಂದು ಮಾಹಿತಿ ನೀಡಿದರು.

ರಾಜ್ಯದಲ್ಲಿ ಎಪಿಎಂಸಿಗೆ ಸೇರಿದ 8,565 ಎಕರೆ ಜಾಗವಿದ್ದು, ಅಲ್ಲಿ ಮಳಿಗೆಗಳು, ಉಗ್ರಾಣಗಳು, ನಿವೇಶನಗಳನ್ನು ಮಾಡಲಾಗಿದೆ. ಇನ್ನು ಮೂರು ಸಾವಿರ ಎಕರೆಯಷ್ಟು ಜಾಗ ಇದೆ. ಎಪಿಎಂಸಿಯನ್ನು ಆಧುನೀಕರಣಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ನಬಾರ್ಡ್‌ನಿಂದ 200 ಕೋಟಿ ರೂ. ಎಪಿಎಂಸಿಗೆ ಬಂದಿದ್ದು, ಅಭಿವೃದ್ಧಿಗಾಗಿ ಬಳಕೆ ಮಾಡಲಾಗುವುದು ಎಂದರು.

ಎಪಿಎಂಸಿ ಕಾಯಿದೆ ತಿದ್ದುಪಡಿಯಿಂದ ಬಹುರಾಷ್ಟ್ರೀಯ ಕಂಪನಿಗಳ ಪ್ರಭಾವ ಹೆಚ್ಚಾಗಲಿದೆ ಎಂಬ ಅಭಿಪ್ರಾಯ ಇದೆ. ಇದು ಸತ್ಯಕ್ಕೆ ದೂರವಾದುದ್ದು, ಕಳೆದ 7 ವರ್ಷದಲ್ಲಿ 62 ಎಂಎನ್‌ಸಿ ಕಂಪನಿಗಳಿಗೆ ಪರವಾನಗಿ ನೀಡಲಾಗಿದೆ. ಯಾವುದೇ ಸಮಸ್ಯೆಯಾಗಿಲ್ಲ. ಹೀಗಿರುವ ಮುಂದಿನ ದಿನದಲ್ಲಿಯೂ ಯಾವುದೇ ತೊಂದರೆಯಾಗುವುದಿಲ್ಲ ಎಂದು ಆಶ್ವಾಸನೆ ನೀಡಿದರು.

ಒಂದು ಬಹುರಾಷ್ಟ್ರೀಯ ಕಂಪನಿಯು (Multi National Company) ತನ್ನ ಉತ್ಪನ್ನಕ್ಕೆ ದರ ನಿಗದಿಪಡಿಸಿಕೊಂಡು ತಾನು ಬೆಳೆದ ಬೆಳೆಗೆ ತಾನೇ ಬೆಲೆ ನಿರ್ಧರಿಸುವ ಹಕ್ಕು ರೈತನದ್ದಾಗಬೇಕು. ರೈತ ಸ್ವತಂತ್ರ ಜೀವಿಯಾಗಬೇಕು. ನನ್ನ ಬೆಳೆ, ನನ್ನ ಹಕ್ಕು ಎಂಬ ಘೋಷ ವಾಕ್ಯ ಪ್ರತಿಯೊಬ್ಬ ರೈತನದ್ದಾಗಿರಬೇಕು ಎಂದು ಹೇಳಿದರು.

ಎಪಿಎಂಸಿ ಕಾಯಿದೆ ಜಾರಿಯಿಂದ ಈ ಹಿಂದಿನ ಸೌಲಭ್ಯಗಳು ಇರುವುದಿಲ್ಲ ಎಂಬ ಆತಂಕ ಬೇಡ. ಯಾವುದೇ ಕೃಷಿ ಉತ್ಪನ್ನಗಳ ಬೆಲೆ ಕುಸಿತ ಉಂಟಾದಾಗ ಎಂದಿನಂತೆ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಪ್ರಕ್ರಿಯೆ ನಡೆಯುತ್ತದೆ. ಕಾಯಿದೆಗೂ, ಕನಿಷ್ಠ ಬೆಂಬಲ ಬೆಲೆಗೂ ಯಾವುದೇ ಸಂಬಂಧ ಇಲ್ಲ.
ಕೇಂದ್ರ ಸರ್ಕಾರದ The State/UT Agricultural Produce and Livestock Marketing (Promotion and Facilitation) Act, 2017 ಮಾದರಿ ಕಾಯ್ದೆಯ ಶಿಫಾರಸುಗಳ ಅನ್ವಯ ರಾಜ್ಯದ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ.

ಇದರನ್ವಯ ಕಲಂ 8(2) ಮತ್ತು ಕಲಂ 117ಕ್ಕೆ ತಿದ್ದುಪಡಿ ಮಾಡಲಾಗಿದೆ. ಕಲಂ 8(3) ನ್ನು ಕೈಬಿಡಲಾಗಿದೆ. ಕಲಂ 8(2) ರಡಿ ಇದುವರೆಗೆ ಅಧಿಸೂಚಿತ ಕೃಷಿ ಉತ್ಪನ್ನಗಳನ್ನು ಎಪಿಎಂಸಿ ಪ್ರಾಂಗಣದಲ್ಲೇ ಮಾರಾಟ ಮಾಡಬೇಕು ಎಂಬ ನಿರ್ಬಂಧವನ್ನು ತೆಗೆದು ಹಾಕಲಾಗಿದೆ. ಎಪಿಎಂಸಿ ಸಮಿತಿಯ ನಿಯಂತ್ರಣವನ್ನು ಪ್ರಾಂಗಣಕ್ಕೆ ಸೀಮಿತಗೊಳಿಸಿದೆ. ಕಲಂ 8(2)ರ ಉಲ್ಲಂಘನೆಗೆ ದಂಡ ಮತ್ತು ಸಜೆ ಶಿಕ್ಷೆಯನ್ನು ವಿಧಿಸುತ್ತಿದ್ದ ಕಲಂ 117 ಕೈಬಿಡಲಾಗಿದೆ.

ಈ ತಿದ್ದುಪಡಿಯಿಂದ ರೈತ ತಾನು ಬೆಳೆದ ಬೆಳೆಯನ್ನು ತನ್ನ ಇಚ್ಚೆಯಂತೆ ಹೊಲ/ಫಾರಂ ಗೇಟ್ ಅಥವಾ ಎಪಿಎಂಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಸ್ವಾತಂತ್ರ್ಯ ಹೊಂದಿರುತ್ತಾನೆ. ಬೇರೆ ರಾಜ್ಯಗಳಿಗೂ ತೆರಳಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವ ಅವಕಾಶವನ್ನು ಈಗ ಕಲ್ಪಿಸಲಾಗಿದೆ. ಇಲ್ಲವೇ, ವ್ಯಾಪಾರಿಗಳು ರೈತರ ಮನೆ ಬಾಗಿಲಿಗೆ ಇಲ್ಲವೇ ಹೊಲಗಳಿಗೆ ಬಂದು ಬೆಳೆಗಳನ್ನು ಖರೀದಿ ಮಾಡಬಹುದಾಗಿದೆ ಎಂದು ವಿವರಿಸಿದರು.

ರೈತರು ಈ ಹಿಂದೆ ತಮ್ಮ ಉತ್ಪನ್ನಗಳನ್ನು ಸ್ಥಳಗಳಿಗೆ ಒಯ್ದು ಮಾರಾಟ ಮಾಡಲು ಅಧಿಕೃತ ದಾಖಲೆಗಳಾದ ಪಹಣಿ ಅಥವಾ ಸ್ಥಳೀಯ ಕಂದಾಯ ಅಧಿಕಾರಿಗಳು ನೀಡುವ ದೃಢೀಕರಣದೊಂದಿಗೆ ಅವಕಾಶ ಕಲ್ಪಿಸಲಾಗಿತ್ತು. ಪ್ರಸ್ತುತ ತಿದ್ದುಪಡಿಯಿಂದ ಯಾವುದೇ ದಾಖಲಾತಿಗಳಿಲ್ಲದೇ ತಮ್ಮ ಉತ್ಪನ್ನಗಳನ್ನು ಸಾಗಾಟ ಮಾಡಿ ಮಾರಾಟ ಮಾಡಲು ಅವಕಾಶ ಕಲ್ಪಿಸಿದೆ. ರಾಜ್ಯ ಸರ್ಕಾರ ರೈತರ ಆದಾಯ ದ್ವಿಗುಣಗೊಳಿಸಲು ಮತ್ತು ರೈತರ ಸಾಗಾಣಿಕಾ ವೆಚ್ಚ ಮತ್ತು ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಓದಿ: ಕುರುಬ ಸಮುದಾಯ ಎಸ್​​ಟಿಗೆ ಸೇರಿಸಲು ಒತ್ತಾಯ, 'ಕೈ' ನಾಯಕರಿಂದ ಮಹತ್ವದ ಸಭೆ

ABOUT THE AUTHOR

...view details