ಬೆಂಗಳೂರು : ಠೇವಣಿದಾರರ ಹಿತ ಕಾಪಾಡಲು ಸರ್ಕಾರ ಬದ್ಧವಾಗಿದೆ. ಸಾಲ ಮರುಪಾವತಿ ಹಾಗೂ ವಂಚನೆ ಎಸಗಿರುವವರ ವಿರುದ್ಧ ಕ್ರಮಕೈಗೊಳ್ಳುವ ಕುರಿತಂತೆ ಸರ್ಕಾರದಿಂದ ಅಗತ್ಯ ನೆರವು ನೀಡಲಾಗುವುದು ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರು ಹೇಳಿದರು.
ಶ್ರೀ ಗುರುರಾಘವೇಂದ್ರ ಸಹಕಾರ ಬ್ಯಾಂಕ್ ಹಾಗೂ ಶ್ರೀ ವಶಿಷ್ಠ ಸೌಹಾರ್ದ ಸಹಕಾರಿ ನಿ. ಬೆಂಗಳೂರು ಇದರ ಅವ್ಯವಹಾರಗಳು ಹಾಗೂ ಪುನಶ್ಚೇತನ ಕುರಿತು ಪರಾಮರ್ಶಿಸಲು ವಿಕಾಸಸೌಧದಲ್ಲಿ ಇಂದು ಸಂಜೆ ನಡೆದ ಸಭೆಯಲ್ಲಿ ಚರ್ಚೆ ನಡೆಸಿ ಮಾತನಾಡಿದ ಸಚಿವರು, ಈ ಎರಡು ಬ್ಯಾಂಕುಗಳಲ್ಲಿ ನಡೆದಿರುವ ವಂಚನೆ, ಅವ್ಯವಹಾರ, ಹಣ ದುರುಪಯೋಗ ಮಾಡಿರುವವರ ವಿರುದ್ಧ ಕಾನೂನಾತ್ಮಕ ಕ್ರಮಕೈಗೊಳ್ಳುವುದರ ಜೊತೆಗೆ ಹಣ ವಸೂಲಾತಿ ಕುರಿತು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಇದಕ್ಕೆ ಅವಶ್ಯವಿರುವ ಎಲ್ಲ ರೀತಿಯ ಸಹಕಾರವನ್ನು ಸರ್ಕಾರ ನೀಡಲಿದೆ ಎಂದು ಭರವಸೆ ನೀಡಿದರು.
ಬ್ಯಾಂಕ್ ನ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ಬೇನಾಮಿ ಹೆಸರಿನಲ್ಲಿ ಆಸ್ತಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಅವರ ಆಸ್ತಿಗಳನ್ನು ಪತ್ತೆಹಚ್ಚಿ ಮುಟುಗೋಲು ಹಾಕಿಕೊಳ್ಳುವುದರ ಜೊತೆಗೆ ಅವರ ಮೇಲೆ ಕಾನೂನು ರೀತ್ಯ ಕ್ರಮಕೈಗೊಳ್ಳಬೇಕು. ಆದಷ್ಟು ಶೀಘ್ರ ರೀಆಡಿಟ್ ಮುಕ್ತಾಯಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
24 ಆರೋಪಿಗಳ ಹೆಸರನ್ನು ಫೋಟೋ ಸಮೇತ ಜಾಹೀರಾತಿಗೆ ಸೂಚನೆ:ಅಕ್ರಮ ಎಸಗಿರುವ ಪ್ರಮುಖ 24 ಆರೋಪಿಗಳ ಹೆಸರು ಮತ್ತು ಫೋಟೋವನ್ನು ದಿನಪತ್ರಿಕೆಗಳಲ್ಲಿ ಪ್ರಕಟಿಸುವಂತಾಗಬೇಕು. ಸಾಲ ವಸೂಲಾತಿ, ಠೇವಣಿದಾರರ ಹಿತ ಕಾಪಾಡುವಲ್ಲಿ ಸರ್ಕಾರ, ಆರ್ಬಿಐ ಕೈಗೊಳ್ಳುತ್ತಿರುವ ಕ್ರಮಗಳ ಬಗ್ಗೆ ಠೇವಣಿದಾರರಿಗೆ ಕಾಲಕಾಲಕ್ಕೆ ಮಾಹಿತಿ ಒದಗಿಸುತ್ತಿರಬೇಕು. ಆಡಳಿತಾಧಿಕಾರಿಗಳು ಖರ್ಚು ವೆಚ್ಚಗಳನ್ನು ನಿಭಾಯಿಸಲು ಆರ್ಬಿಐ ಸೂಕ್ತ ರೀತಿಯಲ್ಲಿ ಸಹಕರಿಸಬೇಕು ಎಂದು ಹೇಳಿದರು.
ಠೇವಣಿದಾರರ ಹಿತರಕ್ಷಣೆಗೆ ಶಾಸಕರ ಒತ್ತಾಯ:ಶಾಸಕ ರವಿ ಸುಬ್ರಮಣ್ಯ ಮಾತನಾಡಿ, ಶ್ರೀ ಗುರುರಾಘವೇಂದ್ರ ಸಹಕಾರ ಬ್ಯಾಂಕ್ ನಲ್ಲಿ ಠೇವಣಿ ಇಟ್ಟಿರುವವರಲ್ಲಿ ಶೇ.95ರಷ್ಟು ಜನ ಹಿರಿಯ ನಾಗರೀಕರು. ಠೇವಣಿಯಿಂದ ಬರುವ ಬಡ್ಡಿ ಹಣದಲ್ಲಿ ಅವರು ಜೀವನ ಸಾಗಿಸುತ್ತಿದ್ದಾರೆ. ಸಾಲ ವಸೂಲಾತಿಗೆ ಕ್ರಮವಹಿಸಬೇಕು. ಪ್ರಮುಖ 24 ಆರೋಪಿಗಳಿಂದ 900 ಕೋಟಿ ರೂ.ಗೂ ಅಧಿಕ ಹಣ ವಸೂಲಿಯಾಗಬೇಕಿದೆ ಎಂದು ಹೇಳಿದರು.