ಬೆಂಗಳೂರು:ಪ್ರತಿ ವರ್ಷ ರಾಜ್ಯದಲ್ಲಿ ಸಾರಿಗೆ ನೌಕರರ ವೇತನ ಹೆಚ್ಚಿಸುವಂತೆ ಮುಷ್ಕರ, ಪ್ರತಿಭಟನೆಗಳು ನಡೆಯುತ್ತಿರುತ್ತವೆ. ಇದೇ ವಿಚಾರವಾಗಿ ನಿನ್ನೆ ವಿಧಾನಸೌಧದಲ್ಲಿ ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರ ಅಧ್ಯಕ್ಷತೆಯಲ್ಲಿ ಕಾರ್ಮಿಕ ಮತ್ತು ಸಾರಿಗೆ ನೌಕರರ ಸಂಘಟನೆಗಳ ಮುಖಂಡರ ಜೊತೆ ಮಹತ್ವದ ಸಭೆ ನಡೆಯಿತು. ಅದರೆ ಈ ಸಭೆಯಲ್ಲಿ ಸಂಘಟನೆ ಮತ್ತು ಸಚಿವರು ಯಾವುದೇ ಒಮ್ಮತದ ತೀರ್ಮಾನಕ್ಕೆ ಬರದ ಕಾರಣ ವಿಫಲಗೊಂಡಿತು. ರಾಜ್ಯ ಸರ್ಕಾರ ಸಾರಿಗೆ ನೌಕರರಿಗೆ ಶೇ.7 ರಿಂದ 10ರಷ್ಟು ವೇತನ ಹೆಚ್ಚಿಸುವ ಭರವಸೆಯನ್ನು ಸಾರಿಗೆ ಸಂಘಟನೆಗಳ ಮುಖಂಡರು ತಿರಸ್ಕರಿಸಿದ್ದಾರೆ. ಶೇ.25ರಷ್ಟು ವೇತನ ಹೆಚ್ಚಿಸಬೇಕು ಎಂದು ಅವರು ಪಟ್ಟು ಹಿಡಿದಿದ್ದಾರೆ.
ಸಭೆಯಲ್ಲಿ ಸಾರಿಗೆ ಸಚಿವ ಬಿ. ಶ್ರೀರಾಮುಲು ಮುಖಂಡರ ಮನವೊಲಿಸಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಹೀಗಾಗಿ ಸುಮಾರು ಎರಡು ಗಂಟೆಗಳ ಕಾಲ ನಡೆದ ಸಭೆ ವಿಫಲಗೊಂಡಿತು. ಬಳಿಕ ಮಾತನಾಡಿದ ಶ್ರೀರಾಮುಲು, "ಚುನಾವಣೆ ನೀತಿ ಸಂಹಿತೆ ಜಾರಿಯಾಗುವ ಮೊದಲೇ ಸಾರಿಗೆ ನೌಕರರ ವೇತನ ಪರಿಷ್ಕರಣೆ ಸಮಸ್ಯೆ ಇತ್ಯರ್ಥ ಮಾಡುತ್ತೇವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜೊತೆಗೆ ಚರ್ಚಿಸಿ ಇನ್ನೆರಡು ದಿನಗಳೊಳಗೆ ಮತ್ತೆ ಸಭೆ ಕರೆಯಲಾಗುವುದು. ಸೂಕ್ತ ಕ್ರಮಗಳನ್ನು ಆದಷ್ಟು ಬೇಗ ಕೈಗೊಳ್ಳಲಾಗುವುದು" ಎಂದು ಭರವಸೆ ಕೊಟ್ಟರು.
"ಶೇ.10ರಷ್ಟು ವೇತನ ಹೆಚ್ಚಳ ಮಾಡುವುದಾಗಿ ತಿಳಿಸಿದ್ದೇವೆ. ಅದರೆ, ನೌಕರರು 2014ರ ನಂತರ ಈವರೆಗೂ ವೇತನ ಪರಿಷ್ಕರಣೆ ಆಗಿಲ್ಲ. ಹಾಗಾಗಿ ಹೆಚ್ಚಿನ ವೇತನ ಪರಿಷ್ಕರಣೆಯ ಬೇಡಿಕೆ ಇಟ್ಟಿದ್ದಾರೆ. ನೌಕರರ ಬೇಡಿಕೆಗಳ ಬಗ್ಗೆ ಗುರುವಾರ ಅಥವಾ ಶುಕ್ರವಾರ ಮುಖ್ಯಮಂತ್ರಿ ಬೊಮ್ಮಾಯಿ ಜೊತೆ ಚರ್ಚೆ ಮಾಡಿದ ಬಳಿಕ ಮತ್ತೊಮ್ಮೆ ಸಭೆ ಕರೆಯುತ್ತೇನೆ" ಎಂದು ಹೇಳಿದರು.