ಬೆಂಗಳೂರು: "ನಾನು ಮದುವೆಗೆ ಹೋಗಬಾರದೇ?. ಅದು ಅಲ್ಲಿಯವರ ಸಂಸ್ಕೃತಿ. ಅದಕ್ಕೆ ನಾನೇನು ಮಾಡುವುದಕ್ಕೆ ಆಗುತ್ತದೆ" ಎಂದು ಸಚಿವ ಶಿವಾನಂದ ಪಾಟೀಲ್ ಹೇಳಿದರು. ಹೈದರಾಬಾದ್‌ನಲ್ಲಿ ಸಚಿವ ಶಿವಾನಂದ ಪಾಟೀಲ್ ಭಾಗವಹಿಸಿದ್ದ ಮದುವೆ ಸಮಾರಂಭವೊಂದರಲ್ಲಿ ನೋಟುಗಳ ಸುರಿಮಳೆಗೈದ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, "ಹೈದರಾಬಾದ್‌ನಲ್ಲಿ ಬರ ಇದೆಯಾ?. ಅಲ್ಲಿಯ ಗೃಹ ಸಚಿವರೇ ಕಾರ್ಯಕ್ರಮಕ್ಕೆ ಬಂದಿದ್ದರು. ಇದನ್ನೂ ಈಗ ವೈರಲ್ ಮಾಡ್ತೀರಾ ನೀವು?. ಯಾರೋ ಮಾಡಿದ್ದಕ್ಕೆ ನಾನು ಮದುವೆಗೆ ಹೋಗಬಾರದಾ?" ಎಂದು ಗರಂ ಆದರು.
"ನಾನು ಮೂರು ದಿನಗಳ ಹಿಂದೆ ಹೈದರಾಬಾದ್ಗೆ ಮದುವೆ ಕಾರ್ಯಕ್ರಮಕ್ಕೆ ಹೋಗಿದ್ದೆ ಅಷ್ಟೇ. ನಾನು ಹೋಗಿ ಅವರ ಸಂಸ್ಕೃತಿಯನ್ನು ನಿಲ್ಲಿಸುವುದಕ್ಕೆ ಆಗುತ್ತಾ?. ಅಲ್ಲಿನ ಸಚಿವರೇ ಕಾರ್ಯಕ್ರಮಕ್ಕೆ ಬಂದಿದ್ದರು. ನಮ್ಮ ಸಚಿವರೂ ಮದುವೆ ಕಾರ್ಯಕ್ರಮಕ್ಕೆ ಬಂದಿದ್ದರು. ಆದರೆ, ನನ್ನದು ಮಾತ್ರ ವಿಡಿಯೋ ಸುದ್ದಿ ಮಾಡಿದರೆ ಹೇಗೆ" ಎಂದು ಪ್ರಶ್ನಿಸಿದರು.
ಶಿವಾನಂದ ಪಾಟೀಲ್ ವಿಡಿಯೋ ವೈರಲ್ ಆಗಿರುವ ಕುರಿತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯಿಸಿ, "ಅದು ಒರಿಜಿನಲ್ ನೋಟ್ ಅಲ್ಲ, ಡೂಪ್ಲಿಕೇಟ್ ನೋಟು. ಒರಿಜಿನಲ್ ನೋಟನ್ನು ಹಾಗೆ ನೆಲದ ಮೇಲೆ ಹಾಕ್ತಾರಾ?. ಈಗ ದೊಡ್ಡ ದೊಡ್ಡ ಯಂತ್ರಗಳು ಬಂದಿವೆ. ಸಮಾರಂಭಗಳಲ್ಲಿ ಹೋದಾಗ ಅದರಿಂದ ಬ್ಲಾಸ್ಟ್ ಮಾಡುತ್ತಾರೆ. ಅದರಲ್ಲಿ ನಕಲಿ ನೋಟ್‌ಗಳನ್ನು ಬಳಸ್ತಾರೆ, ಅಲ್ಲೂ ಹಾಗೇ ಆಗಿದೆ ಅನ್ನಿಸುತ್ತದೆ" ಎಂದರು.
"ಗುತ್ತಿಗೆದಾರರು ಬಿಜೆಪಿಗೂ ಕಮಿಷನ್ ಕೊಟ್ಟು ನಮಗೂ ಕಮಿಷನ್ ಕೊಡ್ತಾರಾ?. ಕಲೆಕ್ಷನ್ ಮಾಸ್ಟರ್‌ಗಳೇ ಬಿಜೆಪಿಯವರು. ಅವರು ಮಗುವನ್ನು ಚಿವುಟಿ ಅವರೇ ಆಡಿಸುತ್ತಾರೆ. ಬಿಜೆಪಿ ಅವರದ್ದು ಸುಳ್ಳ ಮಳ್ಳ ಪಟಾಲಂ. ಸತ್ಯ ಹರಿಶ್ಚಂದ್ರನ ರೀತಿ ಪೋಸ್ ಕೊಡ್ತಾರೆ. ಐಟಿ ದಾಳಿಗೂ, ಕಾಂಗ್ರೆಸ್ಗೂ ಏನು ಸಂಬಂ?ಧ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಹೆಸರು ಹೇಳ್ತಾರೆ. ಗುತ್ತಿಗೆದಾರರ ಮನೆಯಲ್ಲಿ ಸಿಕ್ಕ ಹಣ ಬಿಜೆಪಿಯ 40% ಕಮಿಷನ್ ಹಣ ಇರಬೇಕು. ಕರ್ನಾಟಕವನ್ನು ಎಟಿಎಂ ಮಾಡಿದ್ದೇ ಬಿಜೆಪಿ ಅವರು. ಹಿಂದೆ 4 ವರ್ಷ ಎಟಿಎಂ ಮಾಡಿಕೊಂಡು ಹೊರ ರಾಜ್ಯಗಳಿಗೆ ದುಡ್ಡು ಸಾಗಿಸಿದ್ದು ಬಿಜೆಪಿ. ಕಾಂಗ್ರೆಸ್ ಪಕ್ಷದ ಆಸ್ತಿ, ಬಿಜೆಪಿ ಪಕ್ಷದ ಆಸ್ತಿ ಎಷ್ಟಿದೆ ಅನ್ನೋದನ್ನು ಒಮ್ಮೆ ನೋಡಿ. ನವ ನಗರೋತ್ಥಾನ ಯೋಜನೆಯಡಿ 4600 ಕೋಟಿ ಬಾಕಿ ಇಟ್ಟು ಹೋಗಿದ್ದಾರೆ" ಎಂದು ಆರೋಪಿಸಿದರು.
ಶಾಸಕರ ಜೊತೆ ಸಚಿವ ಸತೀಶ್ ಜಾರಕಿಹೊಳಿ ಪ್ರವಾಸ ಕುರಿತು ಮಾತನಾಡಿ, "ಅವರು ದಸರಾ ನೋಡಲು ಹೋಗಲು ರೆಡಿ ಇದ್ದರು ಅಷ್ಟೇ, ಯಾವುದೇ ಅಸಮಾಧಾನ ಇಲ್ಲ. ಆ ವಿಚಾರದ ಬಗ್ಗೆ ನನಗೆ ಅಷ್ಟು ಮಾಹಿತಿ ಇಲ್ಲ. ಬೆಳಗಾವಿ ರಾಜಕೀಯದ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ" ಎಂದರು.
ಕೆಪಿಸಿಸಿ ಕಾರ್ಯಾಧ್ಯಕ್ಷರ ಬದಲಾವಣೆ ಕುರಿತು ಪ್ರತಿಕ್ರಿಯಿಸಿ, "ಈ ಹಿಂದೆ ನಾನೇ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿದ್ದಾಗ ಹೇಳಿದ್ದೆ. ಕಾರ್ಯಾಧ್ಯಕ್ಷರ ಸ್ಥಾನ ಬದಲಾವಣೆ ಮಾಡಿ ಅಂತ. ಕಾರ್ಯಾಧ್ಯಕ್ಷ ಸ್ಥಾನ ಬಿಟ್ಟು ಕೊಡಲು ನಾನು ಸಿದ್ದನಿದ್ದೇನೆ. ಎಸ್ಟಿ ಸಮುದಾಯಕ್ಕೂ ಒಂದು ಕಾರ್ಯಾಧ್ಯಕ್ಷ ಸ್ಥಾನ ನೀಡಲಿ ಬಿಡಿ" ಎಂದು ಹೇಳಿದರು.
ಇದನ್ನೂ ಓದಿ:ಡಿಸಿಎಂ, ಕಾರ್ಯಾಧ್ಯಕ್ಷರ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ: ಸಚಿವ ಮಧು ಬಂಗಾರಪ್ಪ ಸ್ಪಷ್ಟನೆ