ಬೆಂಗಳೂರು:ಗಂಗಾ ಕಲ್ಯಾಣ ಯೋಜನೆಯಡಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಗಳು ನೀಡುತ್ತಿರುವ ಘಟಕ ವೆಚ್ಚಗಳ ಹಾಗೂ ನೆರವಿನ ಮೊತ್ತದಲ್ಲಿ ವ್ಯತ್ಯಾಸಗಳಿವೆ. ಇಲಾಖೆಗೊಂದು ನೀತಿ ಅನುಸರಿಸುವುದು ಸೂಕ್ತವಲ್ಲ. ಹಾಗಾಗಿ ಇನ್ನು ಮುಂದೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ನೀಡುವ ನೆರವಿನ ಮೊತ್ತವನ್ನು ಸಮಾಜ ಕಲ್ಯಾಣ ಇಲಾಖೆಯಲ್ಲಿರುವಂತೆಯೇ 3.5 ಲಕ್ಷ ರೂ.ಗಳಿಗೆ ಹೆಚ್ಚಿಸಬೇಕು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.
ವಿಧಾನಸೌಧದ ತಮ್ಮ ಕೊಠಡಿಯಲ್ಲಿ ಗುರುವಾರ ನಡೆಸಿದ ವಿವಿಧ ನಿಗಮ/ಮಂಡಳಿಗಳ ವ್ಯವಸ್ಥಾಪಕ ನಿರ್ದೇಶಕರು ಮತ್ತು ಉನ್ನತಾಧಿಕಾರಿಗಳೊಂದಿಗೆ ಸಚಿವರು ಸಭೆ ನಡೆಸಿದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಇದುವರೆಗೂ ಗಂಗಾ ಕಲ್ಯಾಣ ಯೋಜನೆಯಡಿ ಪ್ರತಿ ಘಟಕಕ್ಕೆ 2 ಲಕ್ಷ ರೂ ನೆರವು ನೀಡಲಾಗುತ್ತಿತ್ತು. ಆದರೆ, ಸಮಾಜ ಕಲ್ಯಾಣ ಇಲಾಖೆಯಲ್ಲಿ 3.5 ಲಕ್ಷ ರೂ. ನೆರವು ನೀಡಲಾಗುತ್ತಿದೆ. ಒಂದೇ ಉದ್ದೇಶಕ್ಕಾಗಿ ನೀಡಲಾಗುವ ನೆರವಿನ ಮೊತ್ತದಲ್ಲಿ ಇಲಾಖೆಗೊಂದು ನೀತಿ ಅನುಸರಿಸುವುದು ಸೂಕ್ತವಲ್ಲ ಎಂದು ಅವರು ಅಭಿಪ್ರಾಯಪಟ್ಟರು.
ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗ ಪಡೆಯಲು ಇಚ್ಚಿಸುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡಲು 150ರ ವರ್ಲ್ಡ್ ರ್ಯಾಂಕಿಂಗ್‌ನ ಒಳಗಿರಬೇಕು ಎಂಬ ನಿಯಮ ಇತ್ತು. ಇದನ್ನು 500 ರ್ಯಾಂಕಿಂಗ್ ಒಳಗಿರುವ ವಿದ್ಯಾರ್ಥಿಗಳಿಗೆ ಎಂದು ತಿದ್ದುಪಡಿ ಮಾಡಬೇಕು. ಇದರಿಂದ ಹೆಚ್ಚಿನ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡಲು ಸಹಾಯವಾಗುತ್ತದೆ ಎಂದು ಅವರು ತಿಳಿಸಿದರು.