ಧಾರವಾಡ: "ಹಿಂದುಳಿದ ವರ್ಗಗಳ ಇಲಾಖೆಯ ಹಾಸ್ಟೆಲ್ ವಾರ್ಡನ್ಗಳ ಮುಂಬಡ್ತಿಯಲ್ಲಿ ಯಾವುದೇ ಅವ್ಯವಹಾರ, ಅಕ್ರಮ ನಡೆಯಲು ಸಾಧ್ಯವೇ ಇಲ್ಲ" ಎಂದು ಹಿಂದುಳಿದ ವರ್ಗಗಳ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಹೇಳಿದರು. ಧಾರವಾಡದಲ್ಲಿ ಇಂದು ಮಧ್ಯಮದವರೊಂದಿಗೆ ಮಾತನಾಡಿದ ಅವರು, ಹಿಂದುಳಿದ ವರ್ಗಗಳ ಇಲಾಖೆಯ ಹಾಸ್ಟೆಲ್ ವಾರ್ಡನ್ ಬಡ್ತಿ ಅಕ್ರಮ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, "ಅಂತಹ ಅಕ್ರಮ ಮಾಡಲು ನಾವು ಬಿಡುವುದಿಲ್ಲ, 2002ರಲ್ಲಿ ಮಹಿಳಾ ಮತ್ತು ಪುರುಷರ ಮೇಲ್ವಿಚಾರಕರ ನೇಮಕ ಮಾಡಿಕೊಳ್ಳಬೇಕಿತ್ತು. ಆದರೆ ಅದು ಆಗಲಿಲ್ಲ" ಎಂದರು.
"2006ರಲ್ಲಿ ಕೇವಲ ಮಹಿಳೆಯ ಮುಂಬಡ್ತಿಯಾಯ್ತು. ಪುರುಷರ ಮುಂಬಡ್ತಿಗೆ ಅವಕಾಶ ಕೊಡಲಿಲ್ಲ. 2019ರಲ್ಲಿ ಇಲಾಖೆ ರದ್ದಾಗಿತ್ತು. ಅಲ್ಲಿರುವ ಅಧಿಕಾರಿಗಳು ಕೆಎಟಿಗೆ ಹೋದರು. ಕೆಎಟಿ ಪುರುಷರ ಮೇಲ್ವಿಚಾರಕರಿಗೆ ಮುಂಬಡ್ತಿ ಕೊಡಬೇಕು ಎಂದು ಆದೇಶಿಸಿತು. ಕೆಎಟಿಯಿಂದ ಆದೇಶ ಬಂದ ಮೇಲೆ ನಾವು ಕಾನೂನು ಇಲಾಖೆಗೆ ಕಳುಹಿಸಿದ್ದೆವು. ಅದಕ್ಕೆ ಕಾನೂನು ಇಲಾಖೆ ಒಪ್ಪಿಗೆ ಕೊಟ್ಟಿತು. ಅದಾದ ಬಳಿಕ ನಾವು ಮುಂಬಡ್ತಿ ಕೊಟ್ಟಿದ್ದೇವೆ" ಎಂದು ಸ್ಪಷ್ಟಪಡಿಸಿದರು.
"ಇದರಲ್ಲಿ ಯಾವುದೇ ಅವ್ಯವಹಾರ, ಅಕ್ರಮ ಆಗಿಲ್ಲ, ಅವರಿಗೆ ಅನ್ಯಾಯ ಆಗಿತ್ತು. ಅವರ ಜೊತೆಗಿದ್ದ ಮಹಿಳೆಯರಿಗೆ ಮುಂಬಡ್ತಿಯಾಗಿತ್ತು, ಆದರೆ ಅವರಿಗೆ ಮಂಬಡ್ತಿಯಾಗಿರಲಿಲ್ಲ. ಈಗ ಅದು ನಿಯಮಾನುಸಾರ ಆಗಿದೆ. ಕೆಲವೊಂದಿಷ್ಟು ಜನ ನಮಗೂ ಮುಂಬಡ್ತಿ ಸಿಗಲಿ ಎಂದು ಈ ರೀತಿ ಆರೋಪಿಸಿರಬಹುದು. ಕಾನೂನುಬದ್ಧವಾಗಿ ಮುಂಬಡ್ತಿ ಕೊಡುತ್ತೇವೆ" ಎಂದು ತಿಳಿಸಿದರು.