ಬೆಂಗಳೂರು: ಇತರ ರಾಜ್ಯಗಳಲ್ಲಿ ದೇವಾಲಯಗಳ ನಿರ್ವಹಣಾ ವ್ಯವಸ್ಥೆ ಯಾವ ರೀತಿ ಇದೆ ಎನ್ನುವ ವರದಿ ಪಡೆದು ನಂತರ ರಾಜ್ಯದಲ್ಲಿನ ಮುಜರಾಯಿ ಇಲಾಖೆ ಅಧೀನದಲ್ಲಿ ಬರುವ ದೇವಾಲಯಗಳಿಗೆ ಸ್ವಾಯತ್ತತೆ ನೀಡುವ ಸಂಬಂಧ ಅಗತ್ಯ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಸ್ಪಷ್ಟಪಡಿಸಿದ್ದಾರೆ.
ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವಾಲಯಗಳಿಗೆ ಸ್ವಾತಂತ್ರ್ಯ ಕೊಡುವುದಲ್ಲ, ಸ್ವಾಯತ್ತತೆ ಕೊಡಬೇಕು ಎನ್ನುವುದು ನಮ್ಮ ಸರ್ಕಾರದ ಮುಂದಿರುವ ವಿಚಾರ. ನಮ್ಮ ದೇವಾಲಯದಲ್ಲಿ ಬಹಳ ಒಳ್ಳೆಯ ಕೆಲಸ ನಡಯುತ್ತಿವೆ. ಇಡೀ ದೇಶದ ಎಲ್ಲ ದೇವಾಲಯಗಳಲ್ಲಿ ಯಾವ ಸ್ಥಿತಿ ಇದೆ, ಅಲ್ಲಿನ ಸರ್ಕಾರ ಏನು ಮಾಡುತ್ತಿದೆ ಎನ್ನುವ ವರದಿ ಸಂಗ್ರಹ ಮಾಡುತ್ತಿದ್ದೇವೆ. ಅನೇಕ ಇತಿಹಾಸ ತಜ್ಞರ ಜೊತೆ ಮಾತುಕತೆ ನಡೆಸಲಿದ್ದೇವೆ, ಎಲ್ಲ ವರದಿ ಬಂದ ನಂತರ ಸಿಎಂ ಜೊತೆ ಕುಳಿತು ಮಾತುಕತೆ ನಡೆಸಿ ಮುಂದೆ ಏನು ಮಾಡಬೆಕು ಎನ್ನುವ ಕುರಿತು ನಿರ್ಧಾರ ಕೈಗೊಳ್ಳಳಾಗುತ್ತದೆ ಎಂದರು.
ಆಂಜನೇಯನ ಜನ್ಮಸ್ಥಳ ವಿವಾದ ವಿಚಾರ ಕುರಿತು ನಿನ್ನೆ ನಡೆಯಬೇಕಿದ್ದ ಸಭೆ ಮುಂದಕ್ಕೆ ಹೋಗಿಲ್ಲ, ಅದರ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡಿದ್ದೇನೆ. ಈ ಸಂಬಂಧ ವರದಿ ಕೊಡಲು ಮುಖ್ಯಮಂತ್ರಿಗಳು ಹೇಳಿದ್ದಾರೆ. ಈ ವಿಷಯ ಬಹಳ ಪ್ರಮುಖವಾಗಿರುವುದರಿಂದ ಮುಖ್ಯಮಂತ್ರಿಗಳೇ ಅದರ ಘೋಷಣೆ ಮಾಡಲಿದ್ದಾರೆ, ರಾಜ್ಯದ ಜನತೆಗೆ ಅವರೇ ತಿಳಿಸಲಿದ್ದಾರೆ. ಹಾಗಾಗಿ ನಮ್ಮ ಸಭೆ ನಡೆದಿಲ್ಲ ಎಂದು ಸಚಿವೆ ಶಶಿಕಲಾ ಜೊಲ್ಲೆ ಸ್ಪಷ್ಟೀಕರಣ ನೀಡಿದರು.
ಅಂಜನಾದ್ರಿ ಬೆಟ್ಟದ ಅಭಿವೃದ್ಧಿ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಹಳ ದೊಡ್ಡ ಕನಸಿಟ್ಟುಕೊಂಡಿದ್ದಾರೆ. ಬೆಟ್ಟದ ಅಭಿವೃದ್ಧಿಗೆ ಮುಂದೆ ಬಂದಿದ್ದಾರೆ. ಸ್ವಲ್ಪ ದಿನಗಳಲ್ಲೇ ಅಧಿಕೃತವಾಗಿ ಅದು ಘೋಷಣೆಯಾಗಲಿದೆ. ಅಂಜನಾದ್ರಿ ಅಭಿವೃದ್ದಿ ಬಗ್ಗೆ ಈಗಾಗಲೇ ಹೆಚ್ಚಿನ ಒತ್ತು ಕೊಟ್ಟಿದ್ದೇವೆ. ಸಿಎಂ ಮುಂದೆ ಅದಕ್ಕೆ ಹೆಚ್ಚಿನ ನೆರವು ನೀಡಲಿದ್ದಾರೆ ಎಂದರು.