ಬೆಂಗಳೂರು :ಕೊರೊನಾ ಎರಡನೇ ಅಲೆಯಲ್ಲಿ ಯುವಕರಲ್ಲಿ ಪಾಸಿಟಿವ್ ಹೆಚ್ಚಾಗಿರುವುದು ಕಾಣಿಸುತ್ತಿದೆ. ಪಾಸಿಟಿವ್ ಇರುವ ಎರಡು ದಿನಗಳಲ್ಲಿಯೇ ವೇಗ ಪಡೆದುಕೊಳ್ಳುತ್ತಿದೆ.
ಎರಡನೆಯ ಅಲೆಯಲ್ಲಿ ತಂದೆ ತಾಯಿ ತೀರಿ ಹೋಗಿ ಮಕ್ಕಳು ಅನಾಥವಾಗಿರುವ ಪ್ರಕರಣ ಹೆಚ್ಚಾಗುತ್ತಿವೆ. ಜೆಜೆ ಆ್ಯಕ್ಟ್ ಪ್ರಕಾರ ಪ್ರತಿ ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ನಿಯಮ ಜಾರಿಗೆ ತಂದಿದ್ದೇವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಹಿರಿಯ ನಾಗರಿಕರ ಹಾಗೂ ವಿಕಲಚೇತನರ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.
ವಿಕಾಸಸೌಧದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಪ್ರತಿ ಜಿಲ್ಲೆಯ ಮುರಾರ್ಜಿ ದೇಸಾಯಿ ಹಾಗೂ ಕಿತ್ತೂರು ಚೆನ್ನಮ್ಮ ಶಾಲೆಗಳಲ್ಲಿ ಕೋವಿಡ್ ಕೇರ್ ಸೆಂಟರ್‌ಗಳನ್ನ ಆರಂಭಿಸಲು ತೀರ್ಮಾನಿಸಲಾಗಿದೆ.
ಐಎಎಸ್ ಅಧಿಕಾರಿ ಮೋಹನ್ ರಾಜ್‌ರನ್ನ ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದೆ ಎಂದರು. ರಾಜ್ಯದ 30 ಜಿಲ್ಲೆಗಳಲ್ಲಿ ಕೋವಿಡ್ ಮಕ್ಕಳಿಗಾಗಿ ಕೋವಿಡ್ ಕೇರ್ ಕೇಂದ್ರ , 993 ಸಂಸ್ಥೆಗಳು ಇಲಾಖೆ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ.
ಸಚಿವೆ ಶಶಿಕಲಾ ಜೊಲ್ಲೆ ಸುದ್ದಿಗೋಷ್ಠಿ 33 ಮಕ್ಕಳ ದತ್ತು ಕೇಂದ್ರಗಳಿವೆ. 1098 ನಂಬರ್‌ಗೆ ಕಾಲ್ ಮಾಡಬಹುದು. ಈಗಾಗಲೇ 23,613 ಕರೆಗಳು ಬಂದಿವೆ. ಪ್ರತಿ ತಿಂಗಳು ಕೋವಿಡ್ ಸಂಬಂಧಿತ 137 ಕರೆಗಳು ಬರುತ್ತಿವೆ. ಮೂವತ್ತು ಜಿಲ್ಲೆಗಳಲ್ಲಿ ಮಕ್ಕಳು ಹೆಚ್ಚಾದರೆ ವಿಶೇಷ ಮಕ್ಕಳ ಶಾಲೆಗಳನ್ನು ತೆಗೆದುಕೊಳ್ಳಲು ತೀರ್ಮಾನ ಮಾಡಲಾಗಿದೆ ಎಂದು ಹೇಳಿದರು.
ದತ್ತು :ಮಗುವನ್ನು ಹತ್ತಿರದ ಸಂಬಂಧಿಗಳು ನೋಡಿಕೊಳ್ಳಲು ಒಪ್ಪಿಕೊಂಡರೆ ಅವರಿಂದ ಒಪ್ಪಿಗೆ ಪತ್ರ ಬರೆದುಕೊಂಡು ಅವರಿಗೆ ಜವಾಬ್ದಾರಿ ನೀಡಲಾಗುವುದು. ಕೋವಿಡ್ ಕೇರ್ ಕೇಂದ್ರಗಳಲ್ಲಿ ಯಾವುದೇ ರೀತಿಯ ಮಾನಸಿಕ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು.
ಅನಾಥ ಮಕ್ಕಳನ್ನು ದತ್ತು ಕೇಂದ್ರದ ಮೂಲಕ ದತ್ತು ನೀಡಲಾಗುವುದು. 7 ರಿಂದ 18 ವರ್ಷದ ಹೆಣ್ಣು ಮಕ್ಕಳನ್ನು ಪ್ರತ್ಯೇಕವಾಗಿ ಇಡಲು ತೀರ್ಮಾನಿಸಲಾಗಿದೆ ಎಂದರು.
ನೇರವಾಗಿ ದತ್ತು ಪಡೆಯಲು ಅವಕಾಶ ಇಲ್ಲ : ಯಾರೂ ನೇರವಾಗಿ ಮಕ್ಕಳನ್ನು ದತ್ತು ಪಡೆಯಲು ಅವಕಾಶ ಇಲ್ಲ. ಯಾವುದೇ ಮಗುವಾಗಿದ್ದರೂ ಅದನ್ನು ಇಲಾಖೆ ವ್ಯಾಪ್ತಿಗೆ ಒಪ್ಪಿಸಿ ನಂತರ ದತ್ತು ಪಡೆಯುವ ಪ್ರಕ್ರಿಯೆ ಮಾಡಬೇಕು.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಸಂದೇಶಗಳನ್ನು ನೇರವಾಗಿ ನಂಬದೆ ಪರಿಶೀಲಿಸಬೇಕು. ಮಕ್ಕಳ ಭವಿಷ್ಯದ ಜೊತೆಗೆ ಆಟ ಆಡುವುದು ಬೇಡ. ಇಬ್ಬರು ಮಕ್ಕಳು ಅನಾಥವಾಗಿದ್ದರೆ ಇಬ್ಬರನ್ನೂ ಒಟ್ಟಿಗೆ ಇಡಲು ಕ್ರಮ ಕೈಗೊಳ್ಳಲಾಗುವುದು.
ನೇರವಾಗಿ ದತ್ತು ಪಡೆಯುವುದು ಕಾನೂನು ಬಾಹಿರವಾಗಿದ್ದು, ಅದರ ವಿರದ್ದ ಬಾಲ ನ್ಯಾಯ ಕಾಯ್ದೆ 2015 ಹಾಗೂ ಅಡಾಪ್ಸನ್ ರೆಗ್ಯುಲೇಷನ್ 2017ರಂತೆ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಹಿರಿಯ ನಾಗರಿಕರಿಗೆ ಲಸಿಕೆ : ಹಿರಿಯ ನಾಗರಿಕರಿಗೆ ಲಸಿಕೆ ಕೊಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದ ಸಚಿವರು, ಎರಡನೇ ಅಲೆಯಲ್ಲಿ ಅನಾಥವಾಗಿರುವ 2 ಮಕ್ಕಳು ಮಂಡ್ಯ ಹಾಗೂ ಚಾಮರಾಜನಗರದಲ್ಲಿ ಇಬ್ಬರು ಮಕ್ಕಳು ಅನಾಥವಾಗಿವೆ. ಮಂಡ್ಯದಲ್ಲಿ ಅವರ ಅಜ್ಜ-ಅಜ್ಜಿ ನೋಡಿಕೊಳ್ಳುತ್ತಿದ್ದಾರೆ. ಚಾಮರಾಜನಗರದಲ್ಲಿ ಅವರ ಚಿಕ್ಕಮ್ಮ ನೋಡಿಕೊಳ್ಳುತ್ತಿದ್ದಾರೆ ಎಂದರು.
ಅನಾಥ ಮಕ್ಕಳ ಯೋಜನೆಗೆ ಚಿಂತನೆ : ಅನಾಥ ಮಗುವಿಗೆ ಭಾಗ್ಯಲಕ್ಷ್ಮಿ ಮಾದರಿ ಯೋಜನೆ ಜಾರಿ ಬಗ್ಗೆ ಚಿಂತನೆ ಮಾಡಲಾಗುತ್ತಿದ್ದು, ದಾನಿಗಳಿಂದ ಅವರ ಶಿಕ್ಷಣ ವ್ಯವಸ್ಥೆ ಮಾಡಲಾಗುವುದು. ಶೈಕ್ಷಣಿಕವಾಗಿ ದತ್ತು ತೆಗೆದುಕೊಳ್ಳಲು ಮುಂದೆ ಬಂದರೆ ಅವರಿಗೆ ಸರ್ಕಾರ ಸಹಕಾರ ನೀಡುತ್ತದೆ.
ಯಾವುದೇ ಮಠಾಧೀಶರು ನೇರವಾಗಿ ಮಕ್ಕಳನ್ನು ದತ್ತು ತೆಗೆದುಕೊಳ್ಳಲು ಅವಕಾಶ ಇಲ್ಲ. ಅವರು ಸರ್ಕಾರವನ್ನ ಸಂಪರ್ಕಿಸಿ ಕಾನೂನು ಪ್ರಕಾರ ದತ್ತು ಪಡೆಯಬೇಕು ಎಂದು ಹೇಳಿದರು. ಕೊಡಗು, ಶಿವಮೊಗ್ಗ ಸೇರಿದಂತೆ ಆರು ಜಿಲ್ಲೆಗಳಲ್ಲಿ ದತ್ತು ಕೇಂದ್ರಗಳಿಲ್ಲ. ಅಲ್ಲಿ ದತ್ತು ತೆಗೆದುಕೊಳ್ಳಲು ಮುಂದೆ ಬಂದರೆ ಸರ್ಕಾರ ಸಹಕಾರ ನೀಡಲಿದೆ ಎಂದರು.
ನೋಡಲ್ ಅಧಿಕಾರಿ ಮೋಹನ್ ರಾಜ್ ಮಾತನಾಡಿ, ಮೂರನೆ ಅಲೆಯಲ್ಲಿಯೂ ಮಕ್ಕಳಿಗೆ ಯಾವುದೇ ತೊಂದರೆ ಆಗದಂತೆ ನಾವು ನೋಡಿಕೊಳ್ಳುತ್ತೇವೆ. ಯಾರೋ ಕಳಿಸಿದ ಮೆಸೇಜ್ ಸುಮ್ಮನೆ ಫಾರ್ವರ್ಡ್ ಮಾಡಬಾರದು ಎಂದು ಹೇಳಿದರು.
ಮಕ್ಕಳ ತಜ್ಞರನ್ನು ಹಾಗೂ ಸಂಘ-ಸಂಸ್ಥೆಗಳ ಇಂಡಿಯನ್ ಪಿಡಿಯಾಟ್ರಿಕ್ ಅಸೋಸಿಯೇಷನ್ ಅವರೊಂದಿಗೆ ಮಾತನಾಡಿದ್ದೇವೆ. ಅವರಿಂದ ಒಳ್ಳೆಯ ಪ್ರತಿಕ್ರಿಯೆ ಬಂದಿದೆ. ಒಂದೆರಡು ದಿನದಲ್ಲಿ ಜಿಲ್ಲಾವಾರು ಮಾಹಿತಿ ನೀಡಲಾಗುವುದು ಎಂದರು.