ಬೆಂಗಳೂರು:''ಯಾವುದೇ ಬಣ ಗಿಣ ಇಲ್ಲ, ಸಮಾನ ಮನಸ್ಕ ಶಾಸಕರು ದಸರಾ ಆಚರಣೆಗಾಗಿ ಮೈಸೂರಿಗೆ ಹೋಗಬೇಕು ಅಂತ ಇತ್ತು. ಆಮೇಲೆ ಸಿಎಂ, ಅಧ್ಯಕ್ಷರ ಗಮನಕ್ಕೆ ತಂದು ಹೋಗುತ್ತೇವೆ'' ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ಈ ಬಗ್ಗೆ ಬೆಂಗಳೂರಲ್ಲಿ ಪ್ರತಿಕ್ರಿಯಿಸಿದ ಸಚಿವ ಸತೀಶ್ ಜಾರಕಿಹೊಳಿ, ''ಮೈಸೂರಿಗೆ ಕೆಲವರು ಹೋಗಬೇಕು ಅಂತ ಮಾತನಾಡಿದ್ದೆವು. ದಸರಾ ನೋಡಲು ಬನ್ನಿ ಅಂತ ಅಲ್ಲಿನ ಶಾಸಕರೂ ಹೇಳ್ತಿದ್ದರು. ಕೆಲವು ನಮ್ಮ ಲೈಕ್ ಮೈಂಡೆಡ್ ಶಾಸಕರು ಹೋಗಬೇಕು ಎಂದು ಇತ್ತು. ನಮ್ಮನ್ನು ಎಲ್ಲಾದರೂ ಟ್ರಿಪ್ ಕರೆದುಕೊಂಡು ಹೋಗಿ ಅಂತ ಕೆಲವರು ಹೇಳ್ತಿದ್ರು. ಹಾಗೆ ಸಮಾನ ಮನಸ್ಕರು ಹೋಗಬೇಕು ಅಂತ ಇತ್ತು'' ಎಂದರು ಸಮಜಾಯಿಶಿ ನೀಡಿದರು.
''ಈಗ ದಸರಾ ಹಬ್ಬ ಇದ್ದು, ಸದ್ಯ ಹೋಗುವುದು ಬೇಡ ಅಂತ ಇದ್ದೇವೆ. ಮುಂದೆ ಹೋಗಬೇಕು ಅಂತಾದರೆ ಸಿಎಂ ಹಾಗೂ ಅಧ್ಯಕ್ಷರ ಗಮನಕ್ಕೆ ತಂದು ಹೋಗ್ತೇವೆ. ಪಕ್ಷದೊಳಗೆ ಯಾವುದೇ ಬಣ ಗಿಣ ಅಂತೇನಲ್ಲ'' ಎಂದು ಸ್ಪಷ್ಟಪಡಿಸಿದರು.
20 ಶಾಸಕರೊಂದಿಗೆ ಒಟ್ಟಾಗಿ ಮೈಸೂರಿಗೆ ತೆರಳುವ ಸಚಿವ ಸತೀಶ್ ಜಾರಕಿಹೊಳಿ ಮುಂದಾಗಿದ್ದರು ಎಂದು ಹೇಳಲಾಗಿತ್ತು. ಸತೀಶ್ ಜಾರಕಿಹೊಳಿ ನಡೆಗೆ ಎಐಸಿಸಿ ಬ್ರೇಕ್ ಹಾಕಿದೆ. ಬಸ್ ಮೂಲಕ 20 ಶಾಸಕರೊಂದಿಗೆ ಮೈಸೂರಿಗೆ ತೆರಳಿದರೆ ಬೇರೆ ಸಂದೇಶ ರವಾನೆಯಾಗುವ ಆತಂಕದಿಂದ ಎಐಸಿಸಿ ಶಾಸಕರ ಟ್ರಿಪ್ಗೆ ತಡೆಯೊಡ್ಡಿದೆ. ಮೈಸೂರಿಗೆ ತೆರಳಲು ಬಸ್ ಅನ್ನು ಸಿದ್ಧಪಡಿಸಲಾಗಿತ್ತು. ಈಗಾಗಲೇ ಕೈ ಶಾಸಕರಲ್ಲಿ ಸರ್ಕಾರದ ವಿರುದ್ಧ ಅಸಮಾಧಾನ ಇದೆ ಎಂಬ ಕೂಗು ಕೇಳಿ ಬರುತ್ತಿದೆ. ಈ ವೇಳೆ, 20 ಶಾಸಕರು ಒಟ್ಟಾಗಿ ಹೋದರೆ, ಪ್ರತಿಪಕ್ಷಗಳಿಗೆ ಆಹಾರವಾಗುವ ಸಾಧ್ಯತೆ ಇದೆ‘‘ಎಂದು ಎಐಸಿಸಿ ಪ್ರವಾಸ ಕೈಬಿಡುವಂತೆ ಸೂಚಿಸಿದೆ ಎನ್ನಲಾಗಿದೆ.