ಬೆಂಗಳೂರು:ಗುರು ರಾಘವೇಂದ್ರ ಬ್ಯಾಂಕ್, ಗುರುಸಾರ್ವಭೌಮ ಸಹಕಾರಿ ಬ್ಯಾಂಕ್, ವಶಿಷ್ಟ ಕ್ರೆಡಿಟ್ ಸಹಕಾರ ಬ್ಯಾಂಕ್ ಅಕ್ರಮ ಪ್ರಕರಣವನ್ನು ಸಿಬಿಐಗೆ ವಹಿಸಲು ಸಹಕಾರ ಸಂಘಗಳ ನಿಬಂಧಕರು ಶಿಫಾರಸು ಮಾಡಿದ್ದು, ಆದಷ್ಟು ಬೇಗ ಪ್ರಕರಣ ಸಿಬಿಐಗೆ ವಹಿಸುವ ಕುರಿತು ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ತಿಳಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಯು ಬಿ ವೆಂಕಟೇಶ್ ಪ್ರಶ್ನೆಗೆ ಉತ್ತರಿಸಿದ ಸಚಿವ ಸೋಮಶೇಖರ್, ಗುರು ರಾಘವೇಂದ್ರ ಬ್ಯಾಂಕ್, ಗುರುಸಾರ್ವಭೌಮ ಸಹಕಾರಿ ಬ್ಯಾಂಕ್, ವಶಿಷ್ಟ ಕ್ರೆಡಿಟ್ ಸಹಕಾರ ಬ್ಯಾಂಕ್ ಅಕ್ರಮ ಪ್ರಕರಣವನ್ನು ಸಿಬಿಐಗೆ ವಹಿಸಲು ಸಹಕಾರ ಸಂಘಗಳ ನಿಬಂಧಕರು ಶಿಫಾರಸು ಮಾಡಿದ್ದಾರೆ. ಈ ಮೂರು ಬ್ಯಾಂಕ್ ನಲ್ಲಿ ದೊಡ್ಡ ಅಕ್ರಮ ಆಗಿದೆ. ಶಿಫಾರಸನ್ನು ಈಗ ಗೃಹ ಇಲಾಖೆಗೆ ಮತ್ತು ಸಿಎಂಗೆ ಕಳಿಸುತ್ತೇವೆ. 2-3 ದಿನಗಳಲ್ಲಿ ಸಿಎಂಗೆ ಶಿಫಾರಸು ಕಳಿಸುತ್ತೇವೆ. ಸಿಎಂ ಜೊತೆ ಚರ್ಚೆ ಮಾಡಿ ಸಿಬಿಐ ತನಿಖೆಗೆ ಕೊಡುವ ಬಗ್ಗೆ ತೀರ್ಮಾನ ಮಾಡುತ್ತೇವೆ. ಸಿಬಿಐಗೆ ಕೊಡುವ ವ್ಯವಸ್ಥೆ ಆಗುತ್ತಿದೆ. ಆದಷ್ಟು ಬೇಗ ನಿರ್ಧಾರ ಮಾಡುತ್ತೇವೆ ಎಂದರು.
ಡಿಸಿಸಿ ಬ್ಯಾಂಕ್ ಅಕ್ರಮ ಸಿಬಿಐ ತನಿಖೆ ಇಲ್ಲ: ಡಿಸಿಸಿ ಬ್ಯಾಂಕ್ ಅಕ್ರಮ ಪ್ರಕರಣ ತನಿಖೆಯನ್ನು ಸಿಬಿಐಗೆ ನೀಡಲು ಸಹಕಾರ ಸಚಿವ ಎಸ್. ಟಿ ಸೋಮಶೇಖರ್ ನಿರಾಕರಿಸಿದ್ದು, ಅಕ್ರಮ ಮಾಡಿರುವ ಬ್ಯಾಂಕ್ಗಳ ತನಿಖೆ ಆಗುತ್ತಿದೆ. ಕ್ರಮ ಆಗುತ್ತದೆ ಎಂದು ಹೇಳಿದರು. ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ ಸದಸ್ಯ ಟಿ. ಎ ಶರವಣ ಮಾತನಾಡಿ, ಜಿಲ್ಲಾ ಸಹಕಾರಿ ಬ್ಯಾಂಕುಗಳಲ್ಲಿ ನಡೆದ ಅಕ್ರಮಗಳ ತನಿಖೆಯನ್ನ ಸಿಬಿಐಗೆ ಕೊಡಿ. ಅಮಿತ್ ಶಾ ಕೈ ಕೆಳಗೆ ಇಲಾಖೆ ಬರುತ್ತದೆ. ಸಿಐಡಿ ತನಿಖೆ ಇದಕ್ಕೆ ಸಾಲದು. ಯಾರನ್ನಾದರೂ ಬಲಿ ಕೊಟ್ಟರೆ ಮಾತ್ರ ಅಕ್ರಮ ತಡೆಯಬಹುದು. ರೈತರ ಹೆಸರಲ್ಲಿ ನಕಲಿ ಖಾತೆ ಸೃಷ್ಟಿ ಮಾಡಿ ಅಕ್ರಮ ಮಾಡುತ್ತಿದ್ದಾರೆ. ಈ ಬಗ್ಗೆ ಸರ್ಕಾರ ಕ್ರಮವಹಿಸಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಉತ್ತರಿಸಿದ ಸಚಿವ ಸೋಮಶೇಖರ್, 5 ಡಿಸಿಸಿ ಬ್ಯಾಂಕ್ ನಲ್ಲಿ ಅಕ್ರಮ ಆಗಿದೆ. ಈಗಾಗಲೇ ತನಿಖೆ ನಡೆಯುತ್ತಿದೆ. ಅಕ್ರಮ ಮಾಡಿದ ಡಿಸಿಸಿ ಬ್ಯಾಂಕ್ ಅಧ್ಯಕ್ಷರನ್ನ ವಜಾ ಮಾಡಲಾಗಿದೆ. ಅಕ್ರಮ ಮಾಡಿರುವ ಡಿಸಿಸಿ ಬ್ಯಾಂಕ್ ನಿಂದ ರಿಕವರಿ ಮಾಡುವ ಕೆಲಸ ಆಗುತ್ತಿದೆ. 5 ಬ್ಯಾಂಕ್ ಬಿಟ್ಟು ಉಳಿದ 21 ಡಿಸಿಸಿ ಬ್ಯಾಂಕ್ಗಳು ನಿಯಮದ ಪ್ರಕಾರ ನಡೆಯುತ್ತಿವೆ. ಅಕ್ರಮ ಮಾಡಿರುವ ಬ್ಯಾಂಕ್ ಗಳ ತನಿಖೆ ಆಗುತ್ತಿದೆ. ಕ್ರಮ ಆಗುತ್ತದೆ ಎಂದರು.
ಗಣಿ ಗುತ್ತಿಗೆ ಬಗ್ಗೆ ತೀರ್ಮಾನ: ಮರಳು ಮತ್ತು ಜಲ್ಲಿ ಪೂರೈಕೆಗಾಗಿ ಗಣಿ ಗುತ್ತಿಗೆ ನೀಡುವ ಹಿನ್ನೆಲೆಯಲ್ಲಿ ಸಚಿವ ಸಂಪುಟ ಉಪ ಸಮಿತಿ ರಚನೆ ಮಾಡಿ ವರದಿ ಪಡೆಯಲಾಗಿದೆ. ಮುಂದಿನ ಸಚಿವ ಸಂಪುಟದಲ್ಲಿ ವರದಿ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದು ವಿಧಾನ ಪರಿಷತ್ ಸಭಾ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.