ಬೆಂಗಳೂರು: ಸುಪ್ರೀಂ ಕೋರ್ಟ್ನಲ್ಲಿ ಹಿಜಾಬ್ ಕುರಿತು ವಿಭಿನ್ನ ತೀರ್ಪು ಬಂದಿದ್ದು, ಸದ್ಯಕ್ಕೆ ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಫೆಬ್ರವರಿ 5ರಂದು ಹೊರಡಿಸಿದ ಆದೇಶ ವಾಪಸ್ ಪಡೆಯೋ ಪ್ರಶ್ನೆಯೇ ಇಲ್ಲ. ಸಮವಸ್ತ್ರದ ಆದೇಶ ಪಾಲನೆ ಮುಂದುವರೆಯಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನೀಲ್ ಕುಮಾರ್ ತಿಳಿಸಿದ್ದಾರೆ.
ಬೆಸ್ಕಾಂ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫೆ.5 ರಂದು ರಾಜ್ಯ ಸರ್ಕಾರ ಹಿಜಾಬ್ ನಿಷೇಧ ಕುರಿತು ಸುತ್ತೊಲೆ ಹೊರಡಿಸಿದೆ. ಇದರಿಂದ ಹಿಂದೆ ಸರಿಯೋ ಪ್ರಶ್ನೆ ಇಲ್ಲ. ಸುಪ್ರೀಂ ಕೋರ್ಟ್ನಲ್ಲಿ ಇಂದು ವಿಭಿನ್ನವಾಗಿ ತೀರ್ಪು ಬಂದಿದೆ. ಹಾಗಾಗಿ ಇದರಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಯಾರೂ ಹಿಜಾಬ್ ಧರಿಸಿ ಶಾಲೆಗೆ ಬರುವಂತಿಲ್ಲ. ಕಾಂಗ್ರೆಸ್, ಪಿಎಫ್ಐ ಅರ್ಥ ಮಾಡಿಕೊಳ್ಳಬೇಕು, ಸಮಾಜಕ್ಕೆ ವ್ಯತಿರಿಕ್ತವಾಗಿ ನಡೆದುಕೊಳ್ಳಲು ಸಾಧ್ಯವಿಲ್ಲ ಎಂದರು.
ಕೋರ್ಟ್ ಹಿಜಾಬ್ ಧರಿಸಿ ಬರಬಾರದು ಅಂದಾಗ ಸುಪ್ರೀಂ ಕೋರ್ಟ್ ಮೊರೆ ಹೋಗುತ್ತಾರೆ. ಅಂದರೆ ಇದರಿಂದಲೇ ಅರ್ಥ ಆಗುತ್ತದೆ ಮತೀಯ ಶಕ್ತಿ ಮತ್ತು ಇದರ ಹಿಂದೆ ಷಡ್ಯಂತ್ರ ಇದೆ ಅಂತ. ಮುಸ್ಲಿಂ ರಾಷ್ಟ್ರ ಇರಾನ್, ಇರಾಕ್ನಲ್ಲಿ ಹಿಜಾಬ್ ಬೇಡ ಅಂತ ಇದ್ದಾಗ, ನಮ್ಮ ರಾಜ್ಯದ ಶಾಲೆ- ಕಾಲೇಜಕುಗಳಲ್ಲಿ ಹಿಜಾಬ್ ಬೇಕು ಅಂತ ಇಲ್ಲಿ ಪ್ರತಿಭಟನೆ ಮಾಡುತ್ತಾರೆ. ಪಿಎಫ್ಐ ಇನ್ನಾದರೂ ಬದಲಾಗಬೇಕು. ಈಗಾಗಲೇ ಪಿಎಫ್ಐ ನಿಷೇಧ ಮಾಡಲಾಗಿದೆ. ಕಾಂಗ್ರೆಸ್ ಇದನ್ನು ಪುಷ್ಠೀಕರಿಸುವ ಕೆಲಸ ಮಾಡಿತು. ಸಿದ್ದರಾಮಯ್ಯ ಸ್ವಾಮೀಜಿ ಕೂಡ ಕಾವಿ ಹಾಕ್ತಾರೆ ಅಂತ ಹೇಳಿದರು. ಕಾಂಗ್ರೆಸ್ ಕೂಡ ಹಿಜಾಬ್ ಚೋಡೋ ಅಂತ ಭಾರತ್ ಜೋಡೋದಲ್ಲಿ ಜೋಡಿಸಿಕೊಳ್ಳಲಿ. ಇದರಿಂದ ಒಳ್ಳೆಯ ವಾತಾವರಣ ಸೃಷ್ಟಿಯಾಗಲಿದೆ. ಎಲ್ಲಾ ವಿದ್ಯಾರ್ಥಿಗಳು ಒಂದೇ ರೀತಿ ಕಾಣಬೇಕು ಅಂತ ಶಾಲೆಯಲ್ಲಿ ಸಮವಸ್ತ್ರ ತರಲಾಗಿದೆ. ಯಾವುದೇ ಕಾರಣಕ್ಕೂ ಫೆಬ್ರವರಿ 5ರಂದು ಹೊರಡಿಸಿದ ಆದೇಶ ವಾಪಸ್ ಪಡೆಯೋ ಪ್ರಶ್ನೆಯೇ ಇಲ್ಲ ಎಂದರು.
ಹಿಜಾಬ್ ಬಗ್ಗೆ ರಾಜ್ಯ ಸರ್ಕಾರದ ನಿಲುವಿನಲ್ಲಿ ಬದಲಾವಣೆ ಇಲ್ಲ: ಆರ್.ಅಶೋಕ್:
ವಿಧಾನಸೌಧದಲ್ಲಿ ಗುರುವಾರ ಮಾತನಾಡಿದ ಅವರು, ಸರ್ಕಾರಿ ಶಾಲೆಗೆ ಬರುವವರು ಸಮವಸ್ತ್ರ ಪಾಲನೆ ಮಾಡಬೇಕು. ಇದು ನಿಯಮವಾಗಿದೆ. ಇದರ ವಿರುದ್ಧವಾಗಿ ಕೆಲವು ವಿದ್ಯಾರ್ಥಿಗಳು ಕೋರ್ಟ್ಗೆ ಹೋಗಿದ್ದಾರೆ. ಹೈಕೋರ್ಟ್ ಸರ್ಕಾರ ಪರವಾಗಿ ಬಂದಿತ್ತು. ಇದೀಗ ಸುಪ್ರೀಂ ಕೋರ್ಟ್ನಲ್ಲಿ ಭಿನ್ನ ತೀರ್ಪು ಬಂದಿದೆ. ಇವಾಗ ಸಿಜೆ ಪೀಠಕ್ಕೆ ವರ್ಗಾವಣೆ ಆಗಿದ್ದು, ಅಲ್ಲಿ ಕೂಡಾ ಸರ್ಕಾರದ ನಿಲುವು ಇದೇ ಇರುತ್ತದೆ ಎಂದರು.
ವಿದ್ಯಾರ್ಥಿಗಳು ಮನೆಯಲ್ಲಿ ಏನು ಬೇಕಾದರೂ ವಸ್ತ್ರ ಹಾಕಲಿ. ಶಾಲೆಯಲ್ಲಿ ಬರುವಾಗ ಸಮವಸ್ತ್ರ ಕಡ್ಡಾಯವಾಗಿದೆ. ಖಾಸಗಿ ಶಾಲೆಗಳಲ್ಲಿ ಸಮವಸ್ತ್ರ ಕೋಡ್ ಇದೆ. ಇರಾನ್ನಲ್ಲಿ ಏನು ನಡೆಯುತ್ತಿದೆ ಎಂಬುದು ಗಮನಾರ್ಹ, ಅಲ್ಲಿ ಮಹಿಳೆಯರು ಹಿಜಾಬ್ ಕಿತ್ತು ಬಿಸಾಡುತ್ತಿದ್ದಾರೆ ಎಂದರು.