ಬೆಂಗಳೂರು: ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಎದುರಾಗುತ್ತದೆ ಎಂದು ಸಿದ್ದರಾಮಯ್ಯ ಹಗಲು ಗನಸಿನಲ್ಲಿದ್ದಾರೆ. ಕುಮಾರಸ್ವಾಮಿ ಮತ್ತೊಮ್ಮೆ ಅವಕಾಶವಾದಿ ಕೂಟ ರಚನೆಯ ಕನಸಿನಲ್ಲಿದ್ದಾರೆ. ಆದರೆ ಉಪ ಚುನಾವಣೆಯಲ್ಲಿ ಜನ ಸ್ಥಿರ ಸರ್ಕಾರಕ್ಕಾಗಿ ಬಿಜೆಪಿಗೆ ಆಶೀರ್ವಾದ ಮಾಡಲಿದ್ದಾರೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಮೈತ್ರಿ ಸರ್ಕಾರದ 15 ತಿಂಗಳು ಆಡಳಿತದ ವೇಳೆ ಪ್ರತಿನಿತ್ಯ ಆರೋಪ ಪ್ರತ್ಯಾರೋಪ, ಸ್ವಜನ ಪಕ್ಷಪಾತದ ಆಪಾದನೆ, ರಿಮೋಟ್ ಕಂಟ್ರೋಲ್ ಆರೋಪ ಕಾಂಗ್ರೆಸ್, ಜೆಡಿಎಸ್ ಶಾಸಕರ ನಡುವೆಯೇ ಬಂದಿತ್ತು. ನಾನು ಸಾಂದರ್ಭಿಕ ಶಿಶು, ಕಾಂಗ್ರೆಸ್ನ ಗುಲಾಮನಾಗಿದ್ದೆ. ಈಗ ಮುಕ್ತಿಸಿಕ್ಕಿದೆ ಎಂದು ಸರ್ಕಾರ ಬಿದ್ದ ನಂತರ ಕುಮಾರಸ್ವಾಮಿ ಹೇಳಿದ್ದರು. ಈಗ ಮತ್ತೆ ಅವಕಾಶವಾದಿ ಕೂಟ ಕಟ್ಟಬಹುದು ಎಂದು ಹಗಲುಗನಸು ಕಾಣುತ್ತಿದ್ದಾರೆ. ಅದಕ್ಕಾಗಿ ಕಣ್ಣೀರ ಕೋಡಿ ಹರಿಸುತ್ತಿದ್ದಾರೆ. ನಟರಿಗೆ ನಟನೆಯೇ ವೃತ್ತಿಯಾದರೂ ಗ್ಲಿಸರಿನ್ ಇಲ್ಲದೆ ಕಣ್ಣೀರು ಬರಲ್ಲ. ನಟ ಭಯಂಕರರಿಗೆ ಮಾತ್ರ ಗ್ಲಿಸರಿನ್ ಇಲ್ಲದೆ ಕಣ್ಣೀರು ಬರುತ್ತದೆ ಎಂದು ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.
ತಮ್ಮ ಪಕ್ಷದಿಂದ ಎರಡು ಬಾರಿ ಶಾಸಕರನ್ನಾಗಿ ಮಾಡಿದವರನ್ನು ಈಗ ಬಾಂಬೆ ಕಳ್ಳ ಎಂದು ಕರೆಯುತ್ತಾರೆ. ಪಕ್ಷದಲ್ಲಿ ಇದ್ದರೆ ಸಂಪನ್ನ, ಪಕ್ಷ ಬಿಟ್ಟರೆ ಕಳ್ಳ. ಪಕ್ಷದಲ್ಲಿ ಇದ್ದವರು ಏನು ಮಾಡಿದರೂ ಸಚ್ಚಾರಿತ್ರರು, ಪಕ್ಷ ಬಿಟ್ಟವರು ಪರಮ ಭ್ರಷ್ಟರಾಗುತ್ತಾರೆ. ವಿಧಾನಸೌಧದಲ್ಲಿ ಆಡಳಿತ ನಡೆಸಲು ಯಾವುದೋ ಜನ್ಮದ ಪುಣ್ಯ ಇರಬೇಕು. ಅದರ ಪಾವಿತ್ರ್ಯತೆ ಕಡೆಗಣಿಸಿ ವೆಸ್ಟ್ ಎಂಡ್ ಹೋಟೆಲ್ಗೆ ಆಡಳಿತ ಕೇಂದ್ರ ಬದಲಾಯಿಸಿ, ವಿಧಾನಸೌಧದ ಗೌರವವನ್ನು ಹೋಟೆಲ್ನಲ್ಲಿ ಡೀಲಿಂಗ್ ಲಾಬಿಗೆ ಇಳಿಸಿದ್ದನ್ನು ಜನ ಮರೆತಿದ್ದಾರೆ ಅಂದುಕೊಂಡಿದ್ದಾರೆ ಎಂದು ಲೇವಡಿ ಮಾಡಿದರು.
ಮಹಾರಾಷ್ಟ್ರದಲ್ಲಿ ಕರ್ನಾಟಕದಂತೆ ಆಗಲಿದೆ: ದೇವೇಂದ್ರ ಫಡ್ನವೀಸ್ ನೇತೃತ್ವದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ, ಶಿವಸೇನೆ ಮೈತ್ರಿಗೆ ಸರಳ ಬಹುಮತ ಬಂದಿತ್ತು. ಹಿಂದುತ್ವ ಹೇಳುವ ಬಿಜೆಪಿ ಮೈಲ್ಡ್ ಹಿಂದಿತ್ವವಾದಿಯಾದರೆ, ವೈಲ್ಡ್ ಹಿಂದುತ್ವ ಹೊಂದಿದ್ದ ಶಿವಸೇನೆ ಈಗ ಸೆಕ್ಯುಲರ್ ಆಗಿದೆ. ಕರ್ನಾಟಕದಲ್ಲಿ ಸೆಕ್ಯುಲರ್ ಹೆಸರಿನ ಪಕ್ಷ 15 ತಿಂಗಳಲ್ಲಿ ಜನರ ನಗೆಪಾಟಲಿಗೆ ಗುರಿಯಾಗಿತ್ತು. ಮಹಾರಾಷ್ಟ್ರದಲ್ಲಿ ಏನಾಗಲಿದೆ ನೋಡೋಣ. ಕರ್ನಾಟಕದಲ್ಲಿ ಆಗಿದ್ದೇ ಮಹಾರಾಷ್ಟ್ರದಲ್ಲೂ ಆಗಲಿದೆ. ಕೆಲ ಕಾಲ ಅಧಿಕಾರ ಇಲ್ಲದಿರಬಹುದು. ಆದರೆ ಈಗ ಇದ್ದ ಪಾಲುಭೌಮತ್ವ ಹೋಗಿ ಅಧಿಕಾರದ ಸಾರ್ವಭೌಮತ್ವ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.