ಬೆಂಗಳೂರು : ಬಿಯು ಸಂಖ್ಯೆ ಇಲ್ಲವೆಂದು ನೆಪವೊಡ್ಡಿ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ನಿರಾಕರಿಸಿದರೆ ಅಂಥಹ ಖಾಸಗಿ ಆಸ್ಪತ್ರೆಗಳ ಹೊರ ರೋಗಿಗಳ ವಿಭಾಗವನ್ನ ಮುಚ್ಚಿಸಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ಎಚ್ಚರಿಕೆ ನೀಡಿದ್ದಾರೆ.
ರಾಜರಾಜೇಶ್ವರಿ ನಗರದ ವಾರ್ ರೂಮ್‌ಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿ ನಂತರ ಮಾತನಾಡಿದ ಅವರು, ಯಾವ ಖಾಸಗಿ ಆಸ್ಪತ್ರೆಗಳು ಬಿಯು ನಂಬರ್ ಇಲ್ಲವೆಂಬ ಕಾರಣಕ್ಕೆ ಚಿಕಿತ್ಸೆ ನೀಡಲು ಹಿಂದೇಟು ಹಾಕುತ್ತವೋ, ಅಂಥಹ ಆಸ್ಪತ್ರೆಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ಜರುಗಿಸಲಾಗುವುದು. ಈಗಾಗಲೇ ಎಲ್ಲಾ ಆಸ್ಪತ್ರೆಗಳಿಗೆ ದಾಖಲು ಮಾಡಿಕೊಳ್ಳಲು ಬಿಯು ನಂಬರ್ ಕಡ್ಡಾಯಗೊಳಿಸುವಂತಿಲ್ಲ ಎಂದು ಸೂಚನೆ ನೀಡಿದ್ದೇನೆ. ರಾಜ್ಯಕ್ಕೆ 2,000 ಆಕ್ಸಿಜನ್ ಕಾನ್ಸಂಟ್ರೇಟರ್ ಗಳನ್ನು ತರಿಸಿಕೊಳ್ಳಲಾಗುತ್ತಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿಯೂ 100 ಹಾಸಿಗೆಗಳ ಕೋವಿಡ್ ಆರೈಕೆ ಕೇಂದ್ರವನ್ನ ಸ್ಥಾಪಿಸಲಾಗುವುದು. ಬೆಡ್ ಹಂಚಿಕೆಯ ಹೊಣೆಯನ್ನ ವೈದ್ಯರಿಗೆ ನೀಡಬೇಕು. ಇದರಿಂದ ಅಗತ್ಯವಿರುವವರಿಗೆ ಬೆಡ್ ದೊರೆಯುತ್ತದೆ ಎಂದು ಹೇಳಿದರು.