ಬೆಂಗಳೂರು:ಹಾರೋಹಳ್ಳಿ ಕಪಾಲಬೆಟ್ಟದಲ್ಲಿ ಏಸು ಪ್ರತಿಮೆ ಸ್ಥಾಪನೆ ಪ್ರಕರಣದ ವರದಿ ಬರುತ್ತಿದ್ದಂತೆ ರಾಜ್ಯ ಸರ್ಕಾರ ದಿಟ್ಟ ಕ್ರಮ ಕೈಗೊಳ್ಳುತ್ತದೆ. ಅದೇ ರೀತಿ ರಾಮನಗರ ಜಿಲ್ಲೆಯ ಮುನೇಶ್ವರ ಬೆಟ್ಟದಲ್ಲಿಯೂ ಅಕ್ರಮವಾಗಿ ಶಿಲುಬೆ ನಿರ್ಮಾಣ ಮಾಡಿದವರ ವಿರುದ್ಧ ಕ್ರಮ ಖಚಿತ ಎಂದು ಕಂದಾಯ ಸಚಿವ ಆರ್.ಅಶೋಕ್ ಎಚ್ಚರಿಕೆ ನೀಡಿದರು.
ಪದ್ಮನಾಭ ನಗರದ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಆರ್.ಅಶೋಕ್, ಹಾರೋಹಳ್ಳಿ ಕಪಾಲ ಬೆಟ್ಟದಲ್ಲಿ ಏಸು ಪ್ರತಿಮೆ ಸ್ಥಾಪನೆಗೆ ಸಂಘಟನೆಯವರಾಗಲಿ ಟ್ರಸ್ಟ್ನವರಾಗಲಿ ಅನುಮತಿಯನ್ನೇ ಪಡೆದಿಲ್ಲ. ಡಿಸೆಂಬರ್ನಲ್ಲಿ ಗ್ರಾಮ ಪಂಚಾಯ್ತಿಗೆ ಅರ್ಜಿ ಕೊಟ್ಟಿದ್ದಾರೆ. ಬೆಸ್ಕಾಂ ಅನುಮತಿಯನ್ನೇ ಪಡೆಯದೇ ದೂರದಿಂದ ಎಲೆಕ್ಟ್ರಿಕ್ ಲೈನ್ ಎಳೆದಿದ್ದಾರೆ. ಕಳೆದ ಆರು ವರ್ಷಗಳಿಂದ ಕೆಲವು ಪ್ರತಿಮೆಗಳನ್ನು ಸಾಗಿಸಿದ್ದಾರೆ. ಮೇಲಾಗಿ ಅಲ್ಲಿ ಟ್ರಸ್ಟ್ ಡೀಡ್ ನಲ್ಲಿ ಇಲ್ಲಿ ಆಸ್ಪತ್ರೆ, ಸ್ಕೂಲ್ ಮಾಡುವುದಾಗಿ ತಿಳಿಸಿದ್ದಾರೆ. ಈಗ ಅಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ ನ ಏಸು ಪ್ರತಿಮೆ ಸ್ಥಾಪಿಸಿದ್ದಾರೆ. ಜಿಲ್ಲಾಧಿಕಾರಿಗಳ ವರದಿ ಕೇಳಿದ್ದೇನೆ. ಯಾಕೋ ಅಧಿಕಾರಿಗಳು ಹಿಂಜರಿಯುತ್ತಿದ್ದಾರೆ. ಅದಕ್ಕೆ ಆತುರವೇನಿಲ್ಲ. ಸಮಯ ತೆಗೆದುಕೊಳ್ಳಲಿ. ಆದರೆ ನಿಖರವಾದ ವರದಿಯನ್ನೇ ಕೊಡಬೇಕು ಎಂದು ಸೂಚಿಸಿದ್ದೇನೆ. ವರದಿ ಬಂದ ಬಳಿಕ ದಿಟ್ಟ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಮಾಹಿತಿ ನೀಡಿದರು.
ಮಾಜಿ ಸಚಿವ ಡಿ.ಕೆ ಶಿವಕುಮಾರ್ ಕನಕಪುರದ ಶಾಸಕರು ಅಷ್ಟೇ. ಕನಕಪುರವೇ ಅವರಿಗೆ ಸಂಬಂಧಿಸಿಲ್ಲ. ನಾವು ಗಲಾಟೆ ಮಾಡಿಸಲ್ಲ, ಗಲಾಟೆ ಮಾಡಿಸೋರು ಡಿ.ಕೆ ಶಿವಕುಮಾರ್. ಹಾಗಾಗಿ ಡಿಕೆಶಿ ಅಲ್ಲಿ ಪ್ರಚೋದಿಸುವುದು ಬೇಡ. ನಿಮಗೆ ಅಲ್ಲಿನವರೇ ಆದ ಶಿವಕುಮಾರ ಸ್ವಾಮಿಗಳು, ಬಾಲಗಂಗಾಧರನಾಥ ಸ್ವಾಮಿಗಳು ಮರೆತು ಹೋದ್ರಾ? ಮೊದಲಿಗೆ ನಮ್ಮ ಹೆತ್ತ ತಾಯಿಯನ್ನು ಆರಾಧಿಸೋಣ. ಬಳಿಕ ಪಕ್ಕದ ಮನೆ ತಾಯಿಯ ಕಡೆ ನೋಡೋಣ. ನಮಗೆ ಊಟ ಆಗಿ ಮಿಕ್ಕಿದರೆ ಬೇರೆಯವರಿಗೆ ಹಂಚಬಹುದು. ನಮಗೆ ಯಾವ ಧರ್ಮವೂ ವಿರೋಧಿಯಲ್ಲ. ಮೊದಲಿಗೆ ನಮ್ಮ ಧರ್ಮವನ್ನು ಪೂಜಿಸಿ ಬಳಿಕ ಅನ್ಯ ಧರ್ಮವನ್ನು ಆರಾಧಿಸೋಣ ಎಂದು ಕಿಡಿಕಾರಿದರು.