ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯೆ ಬೆಂಗಳೂರು:ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನಮ್ಮ ಕಾರ್ಗೋ ಟ್ರಕ್ ಸೇವೆ ಯೋಜನೆಯ ಟ್ರಕ್ಗಳಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಶನಿವಾರ ಹಸಿರು ನಿಶಾನೆ ತೋರಿದರು. ಬಳಿಕ ಮಾತನಾಡಿದ ಅವರು, "ಪ್ರಸಕ್ತ ಪೀಣ್ಯದಲ್ಲಿರುವ ಸಾರಿಗೆ ನಿಗಮದ ಬಸವೇಶ್ವರ ಬಸ್ ನಿಲ್ದಾಣವನ್ನು ನಮ್ಮ ಕಾರ್ಗೋ ಟ್ರಕ್ ಟರ್ಮಿನಲ್ ಆಗಿ ಪರಿವರ್ತನೆ ಮಾಡಲಾಗುವುದು. ಟ್ರಕ್ಗಳ ಕಾರ್ಯಾಚರಣೆ ಹಾಗೂ ನಿರ್ವಹಣೆಗಾಗಿ ಈ ಘಟಕವನ್ನು ಮೀಸಲಿರಿಸಲಾಗುವುದು. ಬಸ್ ನಿಲ್ದಾಣದಲ್ಲಿರುವ ಉಳಿದ ಸ್ಥಳವನ್ನು ಸರ್ಕಾರಿ ಸಂಸ್ಥೆಗಳಿಗೆ ನೀಡಿ ವಾಣಿಜ್ಯ ಉಪಯೋಗಕ್ಕಾಗಿ ಬಳಸಲಾಗುವುದು" ಎಂದು ತಿಳಿಸಿದರು.
"ಸದ್ಯ 20 ಕಾರ್ಗೋ ಟ್ರಕ್ಗಳಿಗೆ ಚಾಲನೆ ನೀಡಲಾಗಿದೆ. ಮುಂದಿನ ಒಂದು ತಿಂಗಳಿನಲ್ಲಿ 100 ಟ್ರಕ್ಗಳನ್ನು ಮತ್ತು ಒಂದು ವರ್ಷದೊಳಗಾಗಿ 500 ಟ್ರಕ್ಗಳನ್ನು ಈ ಯೋಜನೆಗೆ ಸೇರ್ಪಡೆ ಮಾಡಲಾಗುವುದು. ದೇಶದಲ್ಲೇ ಮೊದಲ ಬಾರಿಗೆ ಸಾರಿಗೆ ನಿಗಮದಿಂದ ಸರಕು ಸಾಗಣೆಗಾಗಿ ಕಾರ್ಗೋ ಟ್ರಕ್ ಗಳನ್ನು ಪರಿಚಯಿಸಲಾಗಿದೆ. ನೆರೆಯ ರಾಜ್ಯ ಆಂಧ್ರದಲ್ಲಿ ಕಾರ್ಗೋ ವ್ಯವಸ್ಥೆ ಇದೆ. ಆದರೆ, ಅಲ್ಲಿ ಹಳೆ ಬಸ್ಗಳನ್ನು ಕಾರ್ಗೋ ವಾಹನವಾಗಿ ಬಳಸಲಾಗುತ್ತಿದೆ. ಇದರಿಂದ ರಾಜ್ಯ ಸಾರಿಗೆ ನಿಗಮ ಮತ್ತೊಂದು ಬಾರಿ ವಿನೂತನ ಯಶಸ್ವಿ ಪ್ರಯೋಗದೊಂದಿಗೆ ರಾಷ್ಟ್ರದ ಸಾರ್ವಜನಿಕ ಸಾರಿಗೆ ವಲಯದಲ್ಲಿ ನಾವೀನ್ಯತೆ ತರಲು ಮುನ್ನುಡಿ ಬರೆದಿದೆ" ಎಂದು ಹೇಳಿದರು.
"ಪ್ರತಿ ವಾಹನಕ್ಕೆ ಇನ್ಶೂರೆನ್ಸ್ ಮಾಡಿಸಲಾಗಿದೆ. ಜಿಪಿಎಸ್ ಅಳವಡಿಸಿ ಮೊಬೈಲ್ ಟ್ರ್ಯಾಕಿಂಗ್ ಕೂಡ ಮಾಡಲಾಗುತ್ತದೆ. ಸರ್ಕಾರದಲ್ಲಿರುವ ಬೇರೆ ಬೇರೆ ಇಲಾಖೆಗಳಿಗೆ ಈ ಟ್ರಕ್ಗಳನ್ನು ಬಾಡಿಗೆಗೆ ನೀಡಲಿದ್ದೇವೆ. ಈಗಾಗಲೇ 3 ವಾಹನ ಬುಕ್ ಆಗಿವೆ. ಸದ್ಯಕ್ಕೆ 5 ಜಿಲ್ಲೆಗಳಲ್ಲಿ ಈ ವಾಹನಗಳು ಓಡಾಡಲಿವೆ.
ವಿನೂತನ ಸೇವೆ ಮತ್ತು ಯಶಸ್ವಿ ಪ್ರಯೋಗಗಳಿಂದ. 6 ತಿಂಗಳಲ್ಲಿ 46 ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳು ಕೆಎಸ್ಆರ್ಟಿಸಿಗೆ ಬಂದಿವೆ. ಇನ್ನು ಮುಂದೆ ವರ್ಷಕ್ಕೆ 100 ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿ ಬರಲಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಟ್ರಕ್ ಗಳ ಸಾಮರ್ಥ್ಯ 5 ರಿಂದ 6 ಟನ್:ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಎಂಡಿ ಅನ್ಬುಕ್ ಕುಮಾರ್ ಮಾತನಾಡಿ, ಆಟೋಮೊಬೈಲ್, ಫಾರ್ಮಾ, ಟೆಕ್ಸ್ ಟೈಲ್ ನವರಿಗೆ ಕಾರ್ಗೋ ಸೇವೆಗಳ ಅವಶ್ಯಕತೆ ಇರಲಿದೆ. ಇವುಗಳಲ್ಲಿ 5 ರಿಂದ 6 ಟನ್ ವಸ್ತುಗಳನ್ನು ತೆಗೆದುಕೊಂಡು ಹೋಗಬಹುದು. ಕೆಎಂಎಫ್, ಹ್ಯಾಂಡ್ ಲೂಮ್ಸ್, ಟೆಕ್ಸ್ ಟೈಲ್ಸ್ ಕಂಪನಿಗಳು ಬಳಸಬಹುದು. ಗ್ರಾಹಕರ ವಸ್ತುಗಳ ಸಂಪೂರ್ಣ ಜವಾಬ್ದಾರಿ ನಮ್ಮದಾಗಿರುತ್ತದೆ. ಅಲ್ಲದೇ ಗ್ರಾಹಕರು ಕೂಡ ಲೊಕೇಶನ್ ಟ್ರಾಕ್ ಮಾಡಬಹುದಾಗಿದೆ. ವಾಹನದ ಇಂಜಿನ್ ಆನ್ ಆದ ತಕ್ಷಣ ಅಲರ್ಟ್ ಬರಲಿದೆ ಎಂದು ಹೇಳಿದರು.
ಇದನ್ನೂ ಓದಿ:ಶೀಘ್ರವೇ ಬೆಂಗಳೂರು ಸ್ಪೋರ್ಟ್ಸ್ ಹಬ್ ಆಫ್ ಇಂಡಿಯಾ ಆಗಲಿದೆ : ಅನುರಾಗ್ ಠಾಕೂರ್