ಕರ್ನಾಟಕ

karnataka

ರಸ್ತೆ ಸಾರಿಗೆ ನಿಗಮಗಳ ಆದಾಯ ಹೆಚ್ಚಿಸಲು ಯೋಜನೆ ರೂಪಿಸಿ ಅನುಷ್ಠಾನಗೊಳಿಸಿ: ಅಧಿಕಾರಿಗಳಿಗೆ ಸಚಿವ ರಾಮಲಿಂಗಾರೆಡ್ಡಿ ಸೂಚನೆ

By

Published : Jun 25, 2023, 8:02 AM IST

ಸಾರಿಗೆ ಸಂಸ್ಥೆಗಳ ಆರ್ಥಿಕ ಸ್ವಾವಲಂಬನೆ ಮತ್ತು ಸುಧಾರಣೆ ಕುರಿತು ಸಚಿವ ರಾಮಲಿಂಗಾರೆಡ್ಡಿ ಶನಿವಾರ ಸಭೆ ನಡೆಸಿದರು. ಈ ವೇಳೆ ಶಕ್ತಿ ಯೋಜನೆಯ ಯಶಸ್ಸಿನ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.

ಸಚಿವ ರಾಮಲಿಂಗಾರೆಡ್ಡಿ
ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರು: ನಾಲ್ಕು ಸಾರಿಗೆ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ಖಾಲಿ ಜಾಗಗಳನ್ನು ವಾಣಿಜ್ಯ‌ ಉದ್ದೇಶಕ್ಕಾಗಿ ಬಳಸಿಕೊಂಡು ವಾಣಿಜ್ಯ ಆದಾಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಯೋಜನೆ ತಯಾರಿಸಿ ಕೂಡಲೇ ಕಾಲಮಿತಿಯೊಳಗೆ ಅನುಷ್ಠಾನಗೊಳಿಸುವಂತೆ ಅಧಿಕಾರಿಗಳಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸೂಚಿಸಿದ್ದಾರೆ.

ಸಾರಿಗೆ ಹಾಗೂ ಮುಜರಾಯಿ ಸಚಿವರು ರಾಜ್ಯ ಸರ್ಕಾರಿ ಸ್ವಾಮ್ಯದ ನಾಲ್ಕು ಸಾರಿಗೆ ಸಂಸ್ಥೆಗಳ ಪುನರ್‌ ವಿನ್ಯಾಸ, ಸುಧಾರಣೆ ಮತ್ತು ಆರ್ಥಿಕ ಸ್ವಾವಲಂಬನೆ ತರುವ ಕುರಿತು ಅಧ್ಯಯನ ನಡೆಸಲು ರಚಿಸಲಾಗಿದ್ದ ಏಕ ಸದಸ್ಯ ಸಮಿತಿಯ ಅಧ್ಯಕ್ಷ ಎಂ.ಆರ್. ಶ್ರೀನಿವಾಸಮೂರ್ತಿ ಹಾಗೂ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ‌‌ ವ್ಯವಸ್ಥಾಪಕ ನಿರ್ದೇಶಕರುಗಳೊಡನೆ ಶನಿವಾರ ಕೆಎಸ್‌ಆರ್‌ಟಿ‌ಸಿ ಕೇಂದ್ರ ಕಚೇರಿಯಲ್ಲಿ ಸಭೆ ನಡೆಸಿದರು.

ಈ ವೇಳೆ ಮಾತನಾಡಿದ ಅವರು, ಸಾರಿಗೆ ಸಂಸ್ಥೆಗಳ‌ ಬಸ್‌ ನಿಲ್ದಾಣಗಳಲ್ಲಿ ಸ್ವಚ್ಛತೆಯನ್ನು ಕಾಪಾಡಬೇಕು. ಪ್ರಮುಖವಾಗಿ ಆಸನಗಳ‌ ವ್ಯವಸ್ಥೆ, ಶೌಚಾಲಯಗಳು, ಕುಡಿಯುವ ನೀರಿನ ವ್ಯವಸ್ಥೆಗಳ‌ ಬಗ್ಗೆ ಗಮನಹರಿಸಲು ಸೂಚಿಸಿ, ತಾವೇ ಖುದ್ದು ಬಸ್ ನಿಲ್ದಾಣಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸುವುದಾಗಿ ಎಚ್ಚರಿಕೆ‌ ನೀಡಿದರು. ಅಧಿಕಾರಿಗಳು ಸಹ ಬಸ್ ನಿಲ್ದಾಣಗಳಿಗೆ ಆಗಾಗ ಭೇಟಿ ನೀಡಬೇಕೆಂದು ಸೂಚಿಸಿದರು.

ಇದನ್ನೂ ಓದಿ:Shakti Scheme: ಮೊದಲ ವಾರ 3 ಕೋಟಿಗೂ ಹೆಚ್ಚು ಮಹಿಳೆಯರಿಂದ ಉಚಿತ ಪ್ರಯಾಣ: ಟಿಕೆಟ್​ ಮೌಲ್ಯವೆಷ್ಟು ಗೊತ್ತಾ?

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಸಬಲೀಕರಣಕ್ಕೆ ಅನುಕೂಲವಾಗುವ ತುರ್ತು‌ ಕ್ರಮಗಳಾದ ಹೊಸ ಬಸ್ಸುಗಳ ಸೇರ್ಪಡೆ, (Refurbishing) ಬಸ್ಸುಗಳ ಪುನಶ್ಚೇತನ ಕಾರ್ಯ, ಪರಿಣಾಮಕಾರಿ ಮಾಹಿತಿ ತಂತ್ರಜ್ಞಾನ ಬಳಕೆ, ಕಾರ್ಮಿಕಸ್ನೇಹಿ‌ ಉಪಕ್ರಮಗಳು, ಸಿಬ್ಬಂದಿ ನೇಮಕ ಇತರೆ ವಿಷಯಗಳನ್ನು ಆದ್ಯತೆಯ ಮೇರೆಗೆ ಅನುಷ್ಠಾನಕ್ಕೆ ತರಬೇಕು ಎಂದು ತಿಳಿಸಿದರು.

ಹಾಗೆಯೇ ಸಂಪನ್ಮೂಲ‌ ನಗದೀಕರಣದ ಬಗ್ಗೆ ಕೂಡಲೇ ಕ್ರಿಯಾ ಯೋಜನೆಯನ್ನು ತಯಾರಿಸಿ, ನಾಲ್ಕು ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ಖಾಲಿ ಜಾಗಗಳನ್ನು ವಾಣಿಜ್ಯ‌ ಉದ್ದೇಶಕ್ಕಾಗಿ ಬಳಸಿಕೊಂಡು ವಾಣಿಜ್ಯ ಆದಾಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಯೋಜನೆ ತಯಾರಿಸಿ ಕೂಡಲೇ ಕಾಲಮಿತಿಯೊಳಗೆ ಅನುಷ್ಠಾನಗೊಳಿಸಲು ಸೂಚಿಸಿದರು.

ಇತ್ತ ಏಕ ಸದಸ್ಯ ಸಮಿತಿಯ ಅಧ್ಯಕ್ಷ ಸಚಿವರಿಗೆ ಈಗಾಗಲೇ‌ ಸಲ್ಲಿಕೆಯಾಗಿರುವ ವರದಿಯ ಪ್ರತಿಯನ್ನು ನೀಡಿ, ವರದಿಯ ಪ್ರಮುಖ ಅಂಶಗಳನ್ನು ಸಂಕ್ಷಿಪ್ತ ಪ್ರಾತ್ಯಕ್ಷಿಕೆಯ‌ ಮೂಲಕ‌ ವಿವರಿಸಿದರು. ಹಾಗೂ ಇತ್ತೀಚೆಗೆ ಸರ್ಕಾರ ಜಾರಿಗೆ ತಂದಿರುವ ಶಕ್ತಿ ಯೋಜನೆಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ, ಈ ಯೋಜನೆಯಿಂದ ಸಾರ್ವಜನಿಕ ಸಾರಿಗೆಗೆ ಬಲ ನೀಡಿದಂತಾಗಿದೆ. ಈ‌ ಯೋಜನೆ ಜಾರಿಗೆ ಮೊದಲು ಸಾರಿಗೆ ಸಂಸ್ಥೆಗಳ‌‌ ಒಟ್ಟು ಪ್ರಯಾಣಿಕರ‌ ಸಂಖ್ಯೆ ಪ್ರತಿದಿನ ಸರಾಸರಿ 84.15 ಲಕ್ಷಗಳಿದ್ದು, ಇಂದು ಸರಾಸರಿ 1 ಕೋಟಿ 5 ಲಕ್ಷಗಳಾಗಿರುವುದರಿಂದ ಶಕ್ತಿ ಯೋಜನೆ ಯಶಸ್ವಿಯಾಗಿದೆ ಎಂದರು.

ಇದನ್ನೂ ಓದಿ: ಶಕ್ತಿ ಯೋಜನೆ ಎಫೆಕ್ಟ್: ಧಾರ್ಮಿಕ ಕ್ಷೇತ್ರಗಳಿಗೆ ಹರಿದು ಬರುತ್ತಿರುವ ಮಹಿಳಾ ಭಕ್ತರು.. ಆಯತಪ್ಪಿ ಬಸ್​ನಿಂದ ಬಿದ್ದ ಬಾಲಕಿ

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆ ಜೂನ್ 11ರಂದು ಆರಂಭವಾಗಿದೆ. ರಾಜ್ಯಾದ್ಯಂತ ಬಸ್​ಗಳಲ್ಲಿ ಮಹಿಳೆಯರು ಉಚಿತವಾಗಿ ಓಡಾಡುತ್ತಿದ್ದು, ಬಹುಪಾಲು ಬಸ್​ಗಳು ರಶ್ ಆಗಿ ಸಂಚರಿಸುತ್ತಿವೆ. ಇನ್ನು ಉಚಿತ ಪ್ರಯಾಣದ ಹಿನ್ನೆಲೆ ಧಾರ್ಮಿಕ ಕ್ಷೇತ್ರಗಳು ಮಹಿಳೆಯರಿಂದ ಫುಲ್ ಆಗಿವೆ. ಅಂತೆಯೇ ಯೋಜನೆ ಆರಂಭವಾದ ಮೊದಲ ವಾರವೇ 3 ಕೋಟಿಗೂ ಅಧಿಕ ಪ್ರಯಾಣಿಕರು ಉಚಿತವಾಗಿ ಸಂಚರಿಸಿದ್ದಾರೆ.

ABOUT THE AUTHOR

...view details