ಸಚಿವ ಆರ್.ಬಿ. ತಿಮ್ಮಾಪುರ ಮಾಧ್ಯಮದವರ ಜೊತೆ ಮಾತನಾಡಿದರು. ಬೆಂಗಳೂರು:ಬಿಜೆಪಿಯವರಿಗೆ ರಾಮ ಗೊತ್ತು ಅಷ್ಟೇ, ರಾಮರಾಜ್ಯ ಗೊತ್ತಿಲ್ಲ ಎಂದು ಸಚಿವ ಆರ್ ಬಿ ತಿಮ್ಮಾಪುರ ಟೀಕಿಸಿದರು. ವಿಕಾಸಸೌಧದಲ್ಲಿ ಮಾತನಾಡಿದ ಅವರು, ಬಿಜೆಪಿಯವರೆಲ್ಲ ಧರ್ಮ ದೇವರನ್ನು ರಾಜಕೀಯಕ್ಕೆ ಉಪಯೋಗಿಸಿಕೊಳ್ಳುತ್ತ ಬಂದಿದ್ದಾರೆ. ಇದನ್ನು ಬಿಟ್ಟು ಅವರು ಬೇರೇನೂ ಮಾಡುವುದಿಲ್ಲ, ಅವರು ಅಭಿವೃದ್ಧಿ ಬಗ್ಗೆ ಮಾತಾಡಿದ್ದಾರಾ? ಎಂದು ಪ್ರಶ್ನಿಸಿದರು.
ಧರ್ಮ ದೇವರು ಯಾರಪ್ಪನ ಮನೆ ಆಸ್ತಿಯೂ ಆಗಬಾರದು. ಧರ್ಮ ದೇವರು ನಮಗೆಲ್ಲರಿಗೂ ಇರಬೇಕು ವಿನಹ, ನನ್ನದೇ ಧರ್ಮ, ನಾನೇ ಸ್ಥಾಪನೆ ಮಾಡಿದ್ದು, ನಾನೇ ದೇವಸ್ಥಾನ ಕಟ್ಟಿಬಿಡ್ತಿನಿ ಅನ್ನುವ ಹೇಳಿಕೆಗಳಿಂದ ದೇಶ ದಿವಾಳಿ ಆಗ್ತಿದೆ. ಎಲ್ಲರ ಧರ್ಮ ಆಗಬೇಕು, ಎಲ್ಲರ ರಾಮ ಆಗಬೇಕು. ರಾಮನ ಗುಡಿ ಕಟ್ಟಿದರೆ ಸಾಲದು, ರಾಮ ರಾಜ್ಯ ಆಗಬೇಕು ಎಂದು ತಿಳಿಸಿದರು.
ಹಿಂದೂ ಕರಸೇವಕರ ಬಂಧನ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅದು ಕಾನೂನಿನ ವಿಚಾರ, ಕಾನೂನಿನ ಎದುರು ಯಾರೂ ದೊಡ್ಡವರಲ್ಲ. ಕಾನೂನು ತನ್ನ ಕ್ರಮ ಕೈಗೊಳ್ಳುತ್ತದೆ. ಕಾನೂನಿಗೆ ಎಲ್ಲರೂ ಒಂದೇ. ಕಾನೂನು ಪ್ರಕಾರ ಕ್ರಮ ಆಗುತ್ತದೆ ಅಷ್ಟೇ ಎಂದರು.
ಮದ್ಯದ ದರ ಏರಿಕೆ ಮಾಡಿಲ್ಲ: ಯಾವುದೇ ಮದ್ಯದ ದರದಲ್ಲಿ ಏರಿಕೆ ಮಾಡಿಲ್ಲ. ಹೊಸ ವರ್ಷಕ್ಕೆ ಗಣನೀಯ ಏರಿಕೆಯೇನು ಆಗಿಲ್ಲ. ಪ್ರತಿವರ್ಷದಂತೆ ಮಾರಾಟ ಆಗಿದೆ. ನೋ ಟ್ಯಾಕ್ಸ್ ನಥಿಂಗ್. ಟ್ಯಾಕ್ಸ್ ಏರಿಸಿದರೆ ಮೊದಲೇ ನಿಮಗೆ ಹೇಳ್ತೇವೆ. ಮದ್ಯ ಉತ್ಪಾದಕರು ದರ ಹೆಚ್ಚಳ ಮಾಡಿರಬಹುದು. ನಾವಂತೂ ಏರಿಸಿಲ್ಲ ಎಂದರು.
ನಮಗೆ ಸರ್ಕಾರಕ್ಕೆ ಟ್ಯಾಕ್ಸ್ ಮಾತ್ರ ಕಟ್ಟಬೇಕು ಅಷ್ಟೇ ಅಲ್ವೇ. ಟ್ಯಾಕ್ಸ್ ನಲ್ಲಿ ಏರಿಕೆ ಮಾಡಿಲ್ಲ, ಹೇಗಿದೆಯೋ ಹಾಗೇ ಇದೆ. ನಮಗೆ ಯಾವುದೇ ಟಾರ್ಗೆಟ್ ಇಲ್ಲ, ಆದಾಯ ನಿರೀಕ್ಷೆ ಇದೆ. ಒಳ್ಳೆಯ ಡ್ರಿಂಕ್ಸ್ ಕೊಡಲಿಕ್ಕೆ ಪ್ರಯತ್ನ ಮಾಡ್ತೇವೆ. ಬಜೆಟ್ ನಲ್ಲೂ ಟ್ಯಾಕ್ಸ್ ಏರಿಸುವ ಬಗ್ಗೆ ಇನ್ನೂ ಪ್ರಸ್ತಾಪ ಇಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.
ಸಚಿವ ಈಶ್ವರ್ ಖಂಡ್ರೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರಾಮ ಯಾರೊಬ್ಬರ ಆಸ್ತಿಯೂ ಅಲ್ಲ: ಸಚಿವ ಖಂಡ್ರೆರಾಮ ಯಾರೋ ಒಬ್ಬರಿಗೆ ಜಹಗೀರ್ ಅಲ್ಲ. ರಾಮ ಯಾರೊಬ್ಬರ ಖಾಸಗಿ ಆಸ್ತಿಯಲ್ಲ ಎಂದು ಸಚಿವ ಈಶ್ವರ್ ಖಂಡ್ರೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ವಿಕಾಸಸೌಧದಲ್ಲಿ ಮಾತನಾಡಿದ ಅವರು, ರಾಮ ಸೀತೆ ಎಲ್ಲ ಸಮುದಾಯಕ್ಕೆ ಎಲ್ಲ ಹಿಂದೂಗಳಿಗೆ ಸೇರಿದವರು. ಕೆಲವರು ನಕಲಿ ದೇಶಭಕ್ತಿಯನ್ನು ಬಿಡಲಿ. ನಾನು ಯಾವುದೇ ವಿವಾದಾತ್ಮಕ ಹೇಳಿಕೆ ಕೊಡಲು ಇಷ್ಟ ಪಡುವುದಿಲ್ಲ. ನಾವು ದೇಶ ಅಭಿವೃದ್ಧಿ ಮಾಡಿದ ಮೇಲೆ ಈಗ ಬಂದು ಇವರು ಹಾರಾಟ ಮಾಡ್ತಾರೆ. ಭಾವನಾತ್ಮಕ ವಿಷಯ ಸೇರಿಸಿ ಮಾತನಾಡ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ದಾರಿ ತಪ್ಪಿಸುವ ಕೆಲಸ ಆಗಬಾರದು: ಸಂಸದ ಪ್ರತಾಪ್ ಸಿಂಹ ಸಹೋದರ ವಿಕ್ರಂ ಸಿಂಹ ಶುಂಠಿ ಬೆಳೆಯುತ್ತೇನೆ ಎಂದು ಮರ ಕಡಿಯುವ ಉಪಕರಣ ಇಟ್ಟಿದ್ದಾರೆ. ಅದು ಬಿಟ್ಟು ಎಫ್ಐಆರ್ನಲ್ಲಿ ಹೆಸರಿಲ್ಲ ಎಂದು ಹೇಳಿ, ಜನರ ದಾರಿ ತಪ್ಪಿಸುವ ಕೆಲಸ ಮಾಡಬಾರದು. ವಿಕ್ರಂ ಸಿಂಹ ಹೆಸರು ಎಫ್ ಐ ಆರ್ನಲ್ಲಿ ಇಲ್ಲ ಅಂದ್ರೂ ಅವರ ಜಮೀನು ಅಗ್ರಿಮೆಂಟ್ ಇದೆಯಲ್ಲ. ಶುಂಠಿ ಬೆಳೆಯುತ್ತೇವೆ ಎಂದು ಅಗ್ರಿಮೆಂಟ್ ಮಾಡಿಕೊಂಡಿದ್ರಲ್ಲ. ಅಲ್ಲಿ ಮರ ಕಡಿದರೆ ಅದು ಸರಿಯಾ? ಅದರ ವಿರುದ್ಧ ಕ್ರಮ ಆಗಬಾರದಾ? ಎಂದು ಪ್ರಶ್ನಿಸಿದರು.
ಮಧು ಮಾದೇಗೌಡ ಮರ ಕಡಿದಿರುವ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮಧು ಮಾದೇಗೌಡ ವಿರುದ್ಧ ದೂರು ಈವರೆಗೆ ಬಂದಿಲ್ಲ, ಆಯಾ ರೇಂಜ್ ಆಫೀಸರ್ಗಳು ಅಕಸ್ಮಾತ್ ಕ್ರಮ ಜರುಗಿಸಿಲ್ಲ ಎಂದ್ರೆ ಅದಕ್ಕೆ ಅಧಿಕಾರಿಗಳು ಹೊಣೆ ಆಗಬೇಕಾಗುತ್ತದೆ ಎಂದು ತಿಳಿಸಿದರು.
ಸಾಗುವಳಿ ಹಕ್ಕುಪತ್ರ: 1978 ಪೂರ್ವದಲ್ಲಿ ಅರಣ್ಯ ಭೂಮಿಯಲ್ಲಿ ಬೇಸಾಯ ಮಾಡುವ ರೈತರಿಗೆ ಹಕ್ಕು ಪತ್ರ ನೀಡುವ ಕೆಲಸವನ್ನು ತ್ವರಿತ ಗತಿಯಲ್ಲಿ ಮಾಡಲು ಸೂಚನೆ ನೀಡಲಾಗಿದೆ. 1996ರಲ್ಲಿ ಮಂಜೂರಾತಿ ಕೊಟ್ಟರೂ ಈಗಲೂ ಹಕ್ಕುಪತ್ರ ನೀಡಿಲ್ಲ. ಈ ತಿಂಗಳೊಳಗೆ ಈ ಸಂಬಂಧ ಪ್ರಕ್ರಿಯೆ ಆರಂಭವಾಗಲಿದೆ ಎಂದರು.
ಅರಣ್ಯ ಭೂಮಿಯಲ್ಲಿ 1978 ಪೂರ್ವದಲ್ಲಿ ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡಿದ 13,155 ಪ್ರಕರಣಗಳಿವೆ. ಮಾನದಂಡದ ಪ್ರಕಾರ ಡಿಸಿಗಳ ಪರಿಶೀಲನೆ ಬಳಿಕ ಸುಮಾರು 7,000 ಪ್ರಕರಣಗಳಲ್ಲಿ ಮಂಜೂರಾಗಿದೆ. ಅದಕ್ಕೆ ಹಕ್ಕು ಪತ್ರ ನೀಡುವ ಕೆಲಸ ಬಾಕಿ ಇದೆ. ಈ ಸಂಬಂಧ ಹಿರಿಯ ಅಧಿಕಾರಿಯನ್ನು ನೇಮಕ ಮಾಡಲಾಗಿದೆ. 31,864 ಎಕರೆ ಅರಣ್ಯ ಪ್ರದೇಶದಲ್ಲಿ ಸಾಗುವಳಿ ಮಾಡುತ್ತಿದ್ದಾರೆ ಎಂದು ವಿವರಿಸಿದರು.
ಹುಲಿ ಆನೆಗಳ ಸಂಖ್ಯೆ ಹೆಚ್ಚಳ:ಅರಣ್ಯ ಇಲಾಖೆಗೆ ಹೊಸ ಕಾಯಕಲ್ಪ ನೀಡುತ್ತಿದ್ದೇವೆ. 5 ಕೋಟಿಗೂ ಹೆಚ್ಚು ಸಸಿಗಳನ್ನು ನೆಟ್ಟು ದಾಖಲೆ ಮಾಡಿದ್ದೇವೆ. ವನ್ಯ ಪ್ರಾಣಿಗಳ ಸಂಘರ್ಷ ಸಂಖ್ಯೆ ಕೂಡ ಜಾಸ್ತಿ ಆಗಿದೆ. ಹುಲಿ ಆನೆಗಳ ಸಂಖ್ಯೆ ಹೆಚ್ಚಾಗ್ತಿದೆ. ಅರಣ್ಯ ಕ್ಷೇತ್ರ ಜಾಸ್ತಿ ಮಾಡುವುದೂ ಕೂಡ ಅನಿವಾರ್ಯ ಇದೆ. ಕಳೆದ ವರ್ಷ 51 ಮಂದಿ ಮಾನವ ಪ್ರಾಣಿ ಸಂಘರ್ಷದಲ್ಲಿ ಮೃತಪಟ್ಟಿದ್ದರು. ಆನೆ ತುಳಿತ, ಹುಲಿ ದಾಳಿಗಳಿಗೆ ಈಡಾಗಿದ್ದರು. ಆನೆ ಕಾರ್ಯಪಡೆ, ಚಿರತೆ ಕಾರ್ಯಪಡೆಗೆ ಹೆಚ್ಚಿನ ಸೌಲಭ್ಯ ನೀಡುತ್ತಿದ್ದೇವೆ ಎಂದರು.
ಪ್ರಾಣಿಗಳ ಅಂಗಾಂಗ: ಮನೆಯಲ್ಲಿ ಸಂಗ್ರಹಿಸಿರುವ ಪ್ರಾಣಿಗಳ ಅಂಗಾಂಗಗಳನ್ನು ಅರಣ್ಯ ಇಲಾಖೆಗೆ ಮರಳಿಸುವಂತೆ ಕರೆ ನೀಡಲಾಗಿತ್ತು. ಆದರೆ, ಕೆಲವರು ಪ್ರಾಣಿಗಳ ಅಂಗಾಂಗಗಳನ್ನು ಬಾವಿಗೆ ಹಾಕಿ, ಸುಟ್ಟು ನಾಶ ಮಾಡಿದ್ದಾರೆ. ಯಾವುದೇ ರೀತಿಯ ಪ್ರಕರಣ ದಾಖಲು ಮಾಡುವುದಿಲ್ಲ. ಸ್ವಯಂ ಪ್ರೇರಿತವಾಗಿ ವಾಪಸು ಕೊಡಲು ಹೇಳಲಾಗಿತ್ತು. ಆದರೆ ಅಂಗಾಂಗಗಳನ್ನು ನಾಶ ಮಾಡಿದ್ದಾರೆ ಎಂದರು.
ಇದನ್ನೂಓದಿ:ಹುಬ್ಬಳ್ಳಿಯಲ್ಲಿ ಕರಸೇವಕರ ಬಂಧನ ಖಂಡಿಸಿ ನಾಳೆ ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ - ವಿಜಯೇಂದ್ರ