ಬೆಂಗಳೂರು: ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆ ಇನ್ನು ಮುಂದೆ ರಾಜ್ಯದಲ್ಲಿ ಯಾವುದೇ ಜಾತ್ರೆ ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಜಾತ್ರೆಗಳು ನಡೆದರೆ ಆಯಾ ಜಿಲ್ಲಾಧಿಕಾರಿಗಳೇ ಹೊಣೆ ಎಂದು ಕಂದಾಯ ಸಚಿವ ಆರ್ ಅಶೋಕ್ ತಿಳಿಸಿದ್ದಾರೆ.
ಕೋವಿಡ್ ಪರಿಸ್ಥಿತಿ ಕುರಿತು ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು ಹಾಗೂ ಹಿರಿಯ ಅಧಿಕಾರಿಗಳ ಜತೆ ವಿಕಾಸಸೌಧದಲ್ಲಿ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಚಿವರು, ಕೊರೊನಾ ಸೋಂಕು ಉಲ್ಬಣವಾಗುತ್ತಿರುವ ಹಿನ್ನೆಲೆ ಯಾವುದೇ ಕಾರಣಕ್ಕೂ ಜಾತ್ರೆಗಳಿಗೆ ಅವಕಾಶವಿಲ್ಲ. ಒಂದು ವೇಳೆ ಅವಕಾಶ ಕೊಟ್ಟರೆ ಡಿಸಿ, ಎಸ್ಪಿ ಅವರನ್ನು ಡಿಸ್ಮಿಸ್ ಮಾಡುತ್ತೇವೆ ಎಂದು ಎಚ್ಚರಿಸಿದರು.
ಪಾಸ್ ಕಡ್ಡಾಯ :ಜನಸಂದಣಿ ಆಗದಂತೆ ಎಲ್ಲಾ ರೀತಿಯ ಕಟ್ಟು ನಿಟ್ಟಿನ ಕ್ರಮಕೈಗೊಳ್ಳುತ್ತಿದ್ದು, ಇನ್ನು ಮುಂದೆ ಮದುವೆ ಸಮಾರಂಭಗಳಿಗೆ ಪಾಸ್ ಕಡ್ಡಾಯವಾಗಿದೆ. ಒಳಾಂಗಣದಲ್ಲಿ 100 ಜನರಿಗೆ ಅವಕಾಶವಿದೆ. ಹೊರಾಂಗಣದಲ್ಲಿ 200 ಜನರಿಗೆ ಮಾತ್ರ ಅವಕಾಶ ನೀಡಲಾಗುವುದು. ಮದುವೆಗೆ ಮುನ್ನ ಸಮೀಪದ ಠಾಣೆಯಲ್ಲಿ ಪಾಸ್ ಪಡೆಯಬೇಕು ಎಂದು ತಿಳಿಸಿದರು.
ಈಗಾಗಲೇ ಬುಕ್ ಆಗಿರುವ ಮದುವೆಗಳಿಗೆ ಪಾಸ್ ನಿಯಮ ಅನ್ವಯವಿಲ್ಲ. ಮುಂದಿನ ದಿನಗಳಲ್ಲಿ ಬುಕ್ ಆಗುವ ಮದುವೆಗಳಿಗೆ ಪಾಸ್ ಕಡ್ಡಾಯ. ಹೊಸದಾಗಿ ನಡೆಯುವ ಮದುವೆಗಳಿಗೆ ಪಾಸ್ ಅಗತ್ಯ. ರಾಜಕೀಯ ಸಭೆ, ಸಮಾರಂಭಗಳಿಗೂ ಇದು ಅನ್ವಯ ಎಂದು ಹೇಳಿದರು.
ರಾಜ್ಯದಲ್ಲಿ ಎಲ್ಲಿಯೂ ಆ್ಯಕ್ಸಿಜನ್ ಸಮಸ್ಯೆ ಆಗಬಾರದು. ಯಾವುದೇ ಕಾರಣಕ್ಕೂ ಕೋವಿಡ್ ಸೋಂಕಿರಿಗೆ ಬೆಡ್ ಕೊರತೆ ಆಗಬಾರದು. ಎಲ್ಲಾ ಕಡೆ ಈಗಿನಿಂದಲೇ ಬೆಡ್ ವ್ಯವಸ್ಥೆ ಆಗಬೇಕು. ಕೊವೀಡ್ ನಿರ್ವಹಣೆಗೆ ಡಿಸಿಗಳು ಕೇಳಿದ್ದ ಹಣ ಬಿಡುಗಡೆ ಮಾಡಲಾಗುವುದು. ಕೋವಿಡ್ನಿಂದ ಮೃತಪಟ್ಟವರನ್ನು ಗೌರವ ಯುತವಾಗಿ ಅಂತ್ಯ ಸಂಸ್ಕಾರ ಮಾಡಬೇಕು ಎಂದು ತಿಳಿಸಿದರು.
ಜಿಲ್ಲಾ ಡಿಸಿಗಳೊಂದಿಗೆ ಇಂದು ಚರ್ಚೆ ನಡೆಸಲಾಗಿದೆ. ಬೆಂಗಳೂರಿಗೆ ಸಂಬಂಧಿಸಿ ಸೋಮವಾರ ಸಭೆ ನಡೆಸಲಾಗುವುದು. ರಾಜಧಾನಿಯಲ್ಲಿ ಸೋಂಕು ಹೆಚ್ಚಳ ಸಂಬಂಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಇದಕ್ಕೂ ಮುನ್ನ ಶಾಸಕರು, ಸಂಸದರ ಜತೆ ಚರ್ಚಿಸಿ ಕಠಿಣಕ್ರಮ ಜಾರಿ ಮಾಡಲಾಗುವುದು ಎಂದು ತಿಳಿಸಿದರು.