ಬಿಜೆಪಿ ಸೇರುವ 10 ಕಾಂಗ್ರೆಸ್ ಶಾಸಕರ ಲಿಸ್ಟ್ ಇದೆ: ಸಚಿವ ಅಶೋಕ್ ಬೆಂಗಳೂರು: 10 ಜನ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಬರುವವರಿದ್ದಾರೆ. ಅವರ ಲಿಸ್ಟ್ ನಾನು ಮಾತನಾಡಿರುವವರ ಬಳಿ ಇದೆ. ಪಕ್ಷ ಸೇರ್ಪಡೆಯಾದಾಗ ಈ ಬಗ್ಗೆ ಗೊತ್ತಾಗುತ್ತದೆ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ಸಿನ ಬೀದಿ ಜಗಳ ಬೆಂಗಳೂರಿನಲ್ಲಿ ಪರಿಹಾರವಾಗಲ್ಲ ಅಂತಾನೇ ದೆಹಲಿಗೆ ಶಿಫ್ಟ್ ಆಗಿದೆ. ಡಿಕೆಶಿ ಸಿದ್ದರಾಮಯ್ಯ ಬೀದಿ ಜಗಳ ಆಡ್ತಿದ್ರು. ಇಬ್ಬರನ್ನು ಕಾಂಪ್ರಮೈಸ್ ಮಾಡೋಕೆ ಖರ್ಗೆ ದೆಹಲಿಗೆ ಕರೆದಿದ್ದಾರೆ ಎಂದು ದೆಹಲಿಯಲ್ಲಿ ಕಾಂಗ್ರೆಸ್ ಆಂತರಿಕ ಸಭೆ ವಿಚಾರವಾಗಿ ಪ್ರತಿಕ್ರಿಯಿಸಿದರು.
ಮೋದಿ, ಅಮಿತ್ ಶಾ ರಾಜ್ಯಕ್ಕೆ ಬರ್ತಾರೆ ಹುಷಾರಾಗಿರಿ ಅಂತ ಖರ್ಗೆ ಕಾಂಗ್ರೆಸ್ಸಿಗರಿಗೆ ಹೇಳಿದ್ದಾರೆ. ಕಾಂಗ್ರೆಸ್ಸಿಗರಿಗೆ ಈಗಾಗಲೇ ಸೋಲಿನ ಭೀತಿ ಶುರುವಾಗಿದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಪ್ರಚಂಡ ಬಹುಮತದಲ್ಲಿ ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ದೇಶದಲ್ಲಿ ಮೂಲೆ ಗುಂಪಾಗಿರುವ ಪಕ್ಷ. ಕರ್ನಾಟಕದಲ್ಲಿ ಅಧಿಕಾರದಲ್ಲಿದ್ದವರು 77 ಸ್ಥಾನಕ್ಕೆ ಕುಸಿದರು. ಕಾಂಗ್ರೆಸ್ಸಿನ 15 ಮಂದಿ ಪಕ್ಷವನ್ನೇ ಬಿಟ್ಟು ಹೋದರು. ಅವರ ಪಕ್ಷದಲ್ಲಿನ ಶಾಸಕರನ್ನೇ ಅವರಿಗೆ ಉಳಿಸಿಕೊಳ್ಳೋಕೆ ಯೋಗ್ಯತೆ ಇಲ್ಲ, ಇನ್ನು ಅಧಿಕಾರಕ್ಕೆ ಬರ್ತಾರಾ ಎಂದು ಪ್ರಶ್ನಿಸಿದರು. ಅಲ್ಲದೇ ಗೋವಾದ ರೀತಿಯಲ್ಲಿ ಇಲ್ಲೂ ಕೂಡ ಆಣೆ, ಪ್ರಮಾಣ ಮಾಡಿಸಿಕೊಳ್ಳುತ್ತೇನೆ ಎಂದಿದ್ದಾರೆ. ಕಾಂಗ್ರೆಸ್ಸಿಗೆ ಬಿಜೆಪಿಯ ಭಯವಿದೆ ಎಂದರು.
ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಇದಕ್ಕೆ ಮುಖ್ಯಮಂತ್ರಿಗಳು ಉತ್ತರ ನೀಡುತ್ತಾರೆ. ಇದು ಅವರಿಗೆ ಬಿಟ್ಟ ವಿಚಾರ. ಸಚಿವ ಸಂಪುಟ ವಿಸ್ತರಣೆ ಬಗ್ಗೆ ಸಿಎಂ ನಿರ್ಧಾರ ಮಾಡುತ್ತಾರೆ ಎಂದು ತಿಳಿಸಿದರು.
ಇದನ್ನೂ ಓದಿ:ಪ್ರಧಾನಿ ಮೋದಿ ವಿರುದ್ಧ ಮಧ್ಯಪ್ರದೇಶ ಕಾಂಗ್ರೆಸ್ ನಾಯಕನ ವಿವಾದಾತ್ಮಕ ಹೇಳಿಕೆ!