ಬೆಂಗಳೂರು: ನಾನು ನಾನು ಎಂದು ಹೇಳುವವರು ಯಾರೂ ಸಿಎಂ ಆಗುವುದಿಲ್ಲ, ಈ ಬಗ್ಗೆ ಹೈಕಮಾಂಡ್ ತೀರ್ಮಾನ ಕೈಗೊಳ್ಳುತ್ತದೆ ಎಂದು ಸಚಿವ ಆರ್.ಅಶೋಕ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಸಿಎಂ ರೇಸ್‌ನಲ್ಲಿ ಸುಮ್ಮನೇ ನಾನು ನಾನು ಅಂದ್ರೆ ಆಗಲ್ಲ. ಅದರಿಂದ ಉಪಯೋಗವಿಲ್ಲ. ನಮ್ಮ ಪಾರ್ಟಿಯಲ್ಲಿ ಆ ಸಿಸ್ಟಮ್ ಇಲ್ಲ. ನಾನು ಎಂದವರು ಆಗುವುದೂ ಇಲ್ಲ. ನಮ್ಮದು ರಾಷ್ಟ್ರೀಯ ಪಕ್ಷ. ಆ ಬಗ್ಗೆ ಪಕ್ಷದ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಹೈಕಮಾಂಡ್ ಕೂಡ ಮಾಹಿತಿ ಪಡೆಯುತ್ತಿದೆ ಎಂದರು.
ಸಿಎಂ ಬದಲಾವಣೆ ಕುರಿತು ವಿಧಾನಸೌಧದಲ್ಲಿ ಸಚಿವ ಆರ್.ಅಶೋಕ್ ಹೇಳಿಕೆ ಮಂತ್ರಿ ಮಂಡಲದಲ್ಲಿ ಯಾರು ಆ್ಯಕ್ಟಿವ್ ಆಗಿದ್ದಾರೆ. ಯಾವ ಶಾಸಕರು ಆ್ಯಕ್ಟಿವ್ ಆಗಿ ಕೆಲಸ ಮಾಡಿದ್ದಾರೆ. ಅವರುಗಳ ಹೆಸರುಗಳು ಸಿಎಂ ರೇಸ್ನಲ್ಲಿವೆ. ಸದ್ಯಕ್ಕೆ ಸಿಎಂ ಕುರ್ಚಿ ಖಾಲಿ ಇಲ್ಲ. ಖಾಲಿ ಆದ ಮೇಲೆ ಹೈಕಮಾಂಡ್ ನವರು ಮಾತನಾಡುತ್ತಾರೆ.
ಹೈಕಮಾಂಡ್ ತೀರ್ಮಾನವೇ ಅಂತಿಮ. ಹೈಕಮಾಂಡ್ ನಾಯಕರು ಹೇಳಿದಂತೆ ಯಡಿಯೂರಪ್ಪ ಕೇಳುತ್ತಾರೆ. ಜುಲೈ 25ಕ್ಕೆ ಸಂದೇಶ ಬರಲಿದೆ ಎಂದು ಸಿಎಂ ಹೇಳಿದ್ದಾರೆ. ಮುಂದಿನ ಸಿಎಂ ಯಾರಾಗ್ತಾರೆ ಅನ್ನೋದು ಗೊತ್ತಿಲ್ಲ. ಯಾವ ಸಚಿವರು, ಶಾಸಕರು ಕೆಲಸ ಮಾಡುತ್ತಿದ್ದಾರೆ ಎಂದು ಹೈಕಮಾಂಡ್ ಗೊತ್ತಿದೆ ಎಂದು ಆರ್ ಅಶೋಕ್ ಸೂಚ್ಯವಾಗಿ ತಿಳಿಸಿದರು.
ಇದನ್ನೂ ಓದಿ: ಹೈಕಮಾಂಡ್ ಜೊತೆಗಿನ ಒಪ್ಪಂದದಂತೆ ಬಿಎಸ್‌ವೈ ರಾಜೀನಾಮೆ : ಸಂಸದ ಶ್ರೀನಿವಾಸಪ್ರಸಾದ್ ಹೇಳಿಕೆ
ಹಿಂದುಳಿದ ವರ್ಗಕ್ಕೆ ಸಿಎಂ ಸ್ಥಾನ ಕೇಳಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸದ್ಯಕ್ಕೆ ಸಿಎಂ ಕುರ್ಚಿ ಖಾಲಿ ಆಗಿಲ್ಲ. ಈಗಲೇ ಟವಲ್ ಹಾಕೋದು ಬೇಡ ಎಂದರು. ವಲಸಿಗರು ಸಭೆಗೆ ನಡೆಸಿರುವ ವಿಚಾರವಾಗಿ ಮಾತನಾಡುತ್ತಾ, ವಲಸಿಗ ಸಚಿವರು ಯಾರು ಸಹ ಸಭೆ ನಡೆಸಿಲ್ಲ. ವಲಸಿಗರಿಗೆ ಆತಂಕವಿಲ್ಲ. ನಿನ್ನೆ ಸಿಎಂ ಚೇಂಬರ್ ನಲ್ಲಿ ಸೇರಿದ್ದು ನಿಜ. ರಾಜಕೀಯ ಸ್ಥಿತಿ ಗತಿಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ನಮ್ಮ ಪಕ್ಷಕ್ಕೆ ಬಂದರನ್ನು ಚೆನ್ನಾಗಿ ನೋಡಿಕೊಳ್ಳತ್ತೇವೆ ಎಂದು ಸ್ಪಷ್ಟಪಡಿಸಿದರು.