ಬೆಂಗಳೂರು:ಎಷ್ಟೇ ದೊಡ್ಡವರು ಇದ್ದರೂ ತೆರವು ಮಾಡುತ್ತೇವೆ. ನೋಯ್ಡಾ ಮಾದರಿಯಲ್ಲಿ ಅಕ್ರಮ ಕಟ್ಟಡಗಳಿಗೆ ಸ್ಫೋಟಕ ಇಟ್ಟು ನೆಲಸಮಗೊಳಿಸುತ್ತೇವೆ ಎಂದು ಕಂದಾಯ ಸಚಿವ ಆರ್ ಅಶೋಕ್ ಖಡಕ್ ಎಚ್ಚರಿಕೆ ರವಾನಿಸಿದ್ದಾರೆ.
ವಿಧಾನಸೌಧದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಐಟಿಯ 30 ಕಂಪನಿಗಳು ಒತ್ತುವರಿ ಮಾಡಿವೆ. ಪ್ರತಿ ಸರ್ಕಾರಗಳು ಬಹಳ ನಾಟಕ ಮಾಡ್ತಾ ಇದ್ದವು. ಮಳೆ ನಿಂತ ಬಳಿಕ ಡೆಮಾಲಿಶ್ ನಿಂತು ಹೋಗುತ್ತಿತ್ತು. ನಮ್ಮ ಇಲಾಖೆ ಪಟ್ಟಿ ರೆಡಿ ಮಾಡಿ, ಬಿಬಿಎಂಪಿಗೆ ಕೊಟ್ಟಿದೆ. ಮುಲಾಜಿಲ್ಲದೆ ಒತ್ತುವರಿ ತೆರವು ಮಾಡುತ್ತೇವೆ ಎಂದು ಹೇಳಿದರು.
ಐಟಿಯ 30 ಕಂಪನಿಗಳು ಒತ್ತುವರಿ ಮಾಡಿವೆ. ದೊಡ್ಡವರು ಚಿಕ್ಕವರು ಅಂತ ನೋಡಲ್ಲ. ಕಂದಾಯ ಇಲಾಖೆ, ಬಿಬಿಎಂಪಿ, ಬಿಡಿಎ ಜಂಟಿ ಕಾರ್ಯಾಚರಣೆ ಮಾಡುತ್ತಿವೆ. ನೆರೆ ನಮಗೆ ಪಾಠ ಕಲಿಸಿದೆ. ಬಾಗಮನೆ ಪಾರ್ಕ್ಗೆ ಯಾವುದೇ ವಿನಾಯಿತಿ ಕೊಟ್ಟಿಲ್ಲ. ದೊಡ್ಡವರು ಚಿಕ್ಕವರು ಅಂತ ನೋಡಲ್ಲ ಎಂದು ಸಚಿವರು ಹೇಳಿದ್ದಾರೆ.
ಐಟಿ ಕಂಪನಿಗಳು ಒತ್ತುವರಿ ಮಾಡಿವೆ, ಬಿಲ್ಡರ್ಗಳು ಒತ್ತುವರಿ ಮಾಡಿದ್ದಾರೆ. ಬಡವರು, ಶ್ರೀಮಂತರು, ಸಾಹುಕಾರ, ಮಧ್ಯಮ ವರ್ಗ ಅಂತ ನೋಡಲ್ಲ. ಬಿಬಿಎಂಪಿ ಆಯುಕ್ತರ ಜೊತೆ ಮಾತಾಡಿದ್ದೀನಿ. ಯಾರಿಗೂ ಕಾಲಾವಕಾಶ ನೀಡಲ್ಲ. ಕೋರ್ಟ್ಗೂ ನಾವು ವಿನಂತಿ ಮಾಡ್ತೀವಿ. ಕೋರ್ಟ್ ರಾಜಕಾಲುವೆ ಒತ್ತುವರಿ ತೆರವಿಗೆ ಸೂಚಿಸಿದೆ. ಕೆವಿಯಟ್ ಹಾಕುವುದರ ಕುರಿತು ಸಿಎಂ ಜೊತೆ ಚರ್ಚೆ ಮಾಡ್ತೀವಿ. ಎಜಿ ಬಳಿಯೂ ಈ ಬಗ್ಗೆ ಚರ್ಚೆ ಮಾಡ್ತೇನೆ ಎಂದು ಎಂದರು.
ಇದನ್ನೂ ಓದಿ:ರಾಜಕಾಲುವೆ ಒತ್ತುವರಿ ವಿಚಾರ: ಸಿದ್ದರಾಮಯ್ಯ ಬಹಿರಂಗ ಚರ್ಚೆಗೆ ಬರಲಿ.. ಎನ್.ಆರ್.ರಮೇಶ್ ಸವಾಲು
ಮುಂದಿನ ವರ್ಷ ಮಳೆಗಾಲ ಬರುವುದರೊಳಗೆ ನಾವು ಬಾಕಿ ಇರುವ ಎಲ್ಲಾ ಅಕ್ರಮ ಕಟ್ಟಡಗಳನ್ನು ನೆಲಸಮ ಮಾಡಲಾಗುವುದು. ಅಧಿಕಾರಿಗಳು ಮತ್ತು ಬಿಲ್ಡರ್‌ಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಸಚಿವ ಆರ್ ಅಶೋಕ್ ಎಚ್ಚರಿಕೆ ನೀಡಿದರು.
ಇತ್ತೀಚೆಗೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ಬಹುಮಹಡಿ ಅಕ್ರಮ ಕಟ್ಟಡವನ್ನು ಸುಪ್ರೀಂ ಕೋರ್ಟ್ ಆದೇಶದ ಮೇರೆ ನೆಲಸಮ ಗೊಳಿಸಲಾಗಿತ್ತು.