ಕರ್ನಾಟಕ

karnataka

ETV Bharat / state

ತುರ್ತುಪರಿಸ್ಥಿತಿ ಹೇರಿದ್ದನ್ನು ವಿರೋಧಿಸಿ ಬಿಜೆಪಿ ಕರಾಳ ದಿನ ಆಚರಣೆ : ಜೈಲುವಾಸ ನೆನೆದ ಸಚಿವ ಅಶೋಕ್ - emergency time

ಅಂದು ಕೇಂದ್ರ ಕಾರಾಗೃಹವನ್ನ ಸ್ಥಳಾಂತರಿಸಿ, ಫ್ರೀಡಂ ಪಾರ್ಕ್ ಎಂದು ಪರಿವರ್ತನೆ ಮಾಡಿದಾಗ ನಾನು ಗೃಹ ಸಚಿವ ಹಾಗೂ ಬೆಂಗಳೂರು ಉಸ್ತುವಾರಿ ಸಚಿವನಾಗಿದ್ದೆ. ಆ ನೆನಪಿಗಾಗಿ ಅಂದು ನಾವು ವಾಸವಿದ್ದ ಕೆಲ ಬಂಧಿಖಾನೆಗಳನ್ನ ಹಾಗೆಯೇ ಉಳಿಸಿಕೊಳ್ಳುವಂತೆ ಕೋರಿಕೊಂಡಿದ್ದೆ..

ashok
ashok

By

Published : Jun 25, 2021, 8:06 PM IST

ಬೆಂಗಳೂರು :ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ದೇಶದ ಮೇಲೆ ಹೇರಿದ್ದ ತುರ್ತುಪರಿಸ್ಥಿತಿಯನ್ನ ರಾಜ್ಯ ಬಿಜೆಪಿ ವಿರೋಧಿಸಿ ಇಂದು ಫ್ರೀಡಂ ಪಾರ್ಕ್‍ನಲ್ಲಿ ಕರಾಳ ದಿನ ಆಚರಣೆ ಮಾಡಿತು. ಈ ವೇಳೆ ಜೈಲುವಾಸದ ದಿನಗಳನ್ನು ಕಂದಾಯ ಸಚಿವ ಆರ್​ ಅಶೋಕ್​ ಸ್ಮರಿಸಿಕೊಂಡರು.

ಜಯಪ್ರಕಾಶ್ ನಾರಾಯಣ್ ಕರೆಯ ಮೇರೆಗೆ ನಾನು ಮತ್ತು ನಮ್ಮ ಕಾಲೇಜಿನ ವಿದ್ಯಾರ್ಥಿ ನಾಯಕರು ಯಶವಂತಪುರ ವೃತ್ತದ ಬಳಿ ತುರ್ತುಪರಿಸ್ಥಿತಿ ವಿರೋಧಿಸಿ ಹೋರಾಟ ಮಾಡಿದ್ದೆವು. ಆ ವೇಳೆ ನಮ್ಮನ್ನ ಬಂಧಿಸಿ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿತ್ತು. ನಮ್ಮನ್ನ ಜೈಲಿಗೆ ಕರೆದುಕೊಂಡು ಬಂದ ನಂತರ ಕಂಬಳಿ ಹಾಗೂ ಅಲ್ಯೂಮಿನಿಯಂ ತಟ್ಟೆ ನೀಡಲಾಗಿತ್ತು.

ನೆಲದ ಮೇಲೆ ಮಲಗುತ್ತಿದ್ದೆವು. ತಿನ್ನಲು ಅಲ್ಪ ಆಹಾರವಾಗಿ ರಾಗಿ ಮುದ್ದೆ ನೀಡುತ್ತಿದ್ದರು. ನಮಗೆಲ್ಲಾ ಒಂದೇ ಶೌಚಾಲಯವಿತ್ತು. ತುರ್ತುಪರಿಸ್ಥಿತಿಯಲ್ಲಿ ಗರ್ಭಿಣಿಯರನ್ನು ಕೂಡ ಶಿಕ್ಷಿಸಲಾಗಿತ್ತು. ನಮಗೆಲ್ಲಾ ಭವಿಷ್ಯವೇ ಮಸುಕಾಗಿತ್ತು. ಆ ವೇಳೆ 5 ರಿಂದ 6 ಸಾವಿರ ಜನ ಪ್ರಾಣ ಕಳೆದುಕೊಂಡರು ಎಂದ್ರು.

ಎಲ್ ಕೆ ಅಡ್ವಾಣಿ, ವಾಜಪೇಯಿ, ದೇವೇಗೌಡರಂಥ ಹಿರಿಯ ನಾಯಕರು ಜೈಲುವಾಸ ಅನುಭವಿಸಿದರು. ಅವರಿಂದೆಲ್ಲಾ ನಾವು ಸ್ಫೂರ್ತಿ ಪಡೆದೆವು. ಅಧಿಕಾರದಿಂದ ಕಾಂಗ್ರೆಸ್ ಅನ್ನು ಉಚ್ಛಾಟಿಸಿದ ನಂತರವಷ್ಟೇ ಜೈಲಿನಿಂದ ಬಿಡುಗಡೆ ಮಾಡಲಾಯಿತು. ನನ್ನ ಪ್ರಕಾರ ಆ ಹೋರಾಟ ಎರಡನೇ ಸ್ವಾತಂತ್ರ ಸಂಗ್ರಾಮ. ನಂತರ ಮತ್ತೊಮ್ಮೆ ಪ್ರಜಾಪ್ರಭುತ್ವವನ್ನ ಮರುಸ್ಥಾಪನೆ ಮಾಡಲಾಯಿತು ಎಂದು ಹೇಳಿದರು.

ಅಂದು ಕಳೆದಿದ್ದ ಬಂಧಿಖಾನೆಗೆ ಭೇಟಿ ನೀಡಿದ ಸಚಿವ ಅಶೋಕ್​, ತುರ್ತುಪರಿಸ್ಥಿತಿಯ ದಿನಗಳಲ್ಲಿ ಪೊಲೀಸರ ಅಮಾನವೀಯವಾಗಿ ವರ್ತನೆಗೆ ಪ್ರಾಣ ತೆತ್ತ ಸಾವಿರಾರು ಜನರಿಗೆ ಇಂದು ಮತ್ತೊಮ್ಮೆ ಶ್ರದ್ಧಾಂಜಲಿ ಅರ್ಪಿಸುತ್ತೇನೆ ಎಂದ್ರು.

ಅಂದು ಕೇಂದ್ರ ಕಾರಾಗೃಹವನ್ನ ಸ್ಥಳಾಂತರಿಸಿ, ಫ್ರೀಡಂ ಪಾರ್ಕ್ ಎಂದು ಪರಿವರ್ತನೆ ಮಾಡಿದಾಗ ನಾನು ಗೃಹ ಸಚಿವ ಹಾಗೂ ಬೆಂಗಳೂರು ಉಸ್ತುವಾರಿ ಸಚಿವನಾಗಿದ್ದೆ. ಆ ನೆನಪಿಗಾಗಿ ಅಂದು ನಾವು ವಾಸವಿದ್ದ ಕೆಲ ಬಂಧಿಖಾನೆಗಳನ್ನ ಹಾಗೆಯೇ ಉಳಿಸಿಕೊಳ್ಳುವಂತೆ ಕೋರಿಕೊಂಡಿದ್ದೆ.

ಇವುಗಳು ನಮ್ಮ ಮುಂದಿನ ಪೀಳಿಗೆಗೆ ಇತಿಹಾಸದಲ್ಲಿ ನಡೆದಿದ್ದ ಘೋರ ಘಟನೆಗಳಿಗೆ ಸಾಕ್ಷಿಯಾಗಿ ಉಳಿಯಲಿವೆ ಎಂಬುದು ನನ್ನ ಭಾವ ಎಂದರು. ನಂತರದಲ್ಲಿ ಸಚಿವ ಆರ್ ಅಶೋಕ ಸೇರಿದಂತೆ ಬಿಜೆಪಿ ವತಿಯಿಂದ ಅಂದು ಜೈಲುವಾಸ ಅನುಭವಿಸಿದವರಿಗೆ ಸನ್ಮಾನಿಸಿ ಗೌರವಿಸಲಾಯಿತು.

ABOUT THE AUTHOR

...view details