ಬೆಂಗಳೂರು: ಜಾತ್ಯತೀತ ಜನತಾ ದಳ (ಜೆಡಿಎಸ್) ಅಭ್ಯರ್ಥಿಗಳ ಮೊದಲ ಪಟ್ಟಿ, ಕಾಂಗ್ರೆಸ್ ಪಕ್ಷ ಎರಡು ಪಟ್ಟಿಗಳನ್ನು ಘೋಷಣೆ ಮಾಡಿದ್ದವು. ಬಳಿಕ ತೀವ್ರ ಕುತೂಹಲ ಮೂಡಿಸಿದ್ದ ಮತ್ತು ಆಕಾಂಕ್ಷಿಗಳು ಕಾತರದಿಂದ ಕಾಯುತ್ತಿದ್ದ ಬಿಜೆಪಿಯ ಮೊದಲ ಪಟ್ಟಿ ಕೊನೆಗೂ ಬಿಡುಗಡೆ ಆಗಿದೆ. ಈ ಪಟ್ಟಿಯಲ್ಲಿ 189 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದರೆ, ಇನ್ನೂ 35 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿಲ್ಲ.
ಕಂದಾಯ ಸಚಿವ ಆರ್ ಅಶೋಕ್ ಮತ್ತು ವಸತಿ ಸಚಿವ ವಿ. ಸೋಮಣ್ಣ ಅವರು ನಿರೀಕ್ಷಿಸದ ರೀತಿ ಉಭಯ ನಾಯಕರಿಗೆ ತಲಾ ಕ್ಷೇತ್ರಗಳಲ್ಲಿ ಟಿಕೆಟ್ ನೀಡಿರುವುದು ಕುತೂಹಲಕ್ಕೆ ಕಾರಣವಾಗಿದೆ. ಈ ಕುರಿತು ಮಾತನಾಡಿರುವ ಸಚಿವ ಅಶೋಕ್ ಅವರು, ಕನಕಪುರದಲ್ಲಿ ಸ್ಪರ್ಧೆ ಮಾಡಬೇಕು ಎನ್ನುವುದು ನನ್ನ ತೀರ್ಮಾನವಲ್ಲ, ಪಕ್ಷದ ತೀರ್ಮಾನ, ನಾನು ಪಕ್ಷದ ಸೈನಿಕ, ನಮ್ಮ ಕಮಾಂಡರ್ ಮೋದಿ, ಅಮಿತ್ ಶಾ, ಅವರು ಹೇಳಿದಂತೆ ಮಾಡುತ್ತೇನೆ ಎಂದು ಕಂದಾಯ ಸಚಿವ ಆರ್.ಅಶೋಕ್ ಸ್ಪಷ್ಟಪಡಿಸಿದ್ದಾರೆ. ಬಿಜೆಪಿ ಮೊದಲ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಮೊದಲನೇದಾಗಿ ಬಿಜೆಪಿಯ ಸೈನಿಕ. ನಮ್ಮ ಕಮಾಂಡರ್ ಮೋದಿ, ಅಮಿತ್ ಶಾ ಅವರು ಏನು ಹೇಳುತ್ತಾರೋ ಹಾಗೆ ಮಾಡಬೇಕು. ನಾನು ತುರ್ತು ಪರಿಸ್ಥಿತಿಯಲ್ಲಿ ಜೈಲಿಗೆ ಹೋಗಿದ್ದೆ. ಬಾಬರಿ ಮಸೀದಿ ಧ್ವಂಸ ಸಮಯದಲ್ಲೂ ಹೋರಾಟ ಮಾಡಿದ್ದೆ. ಹಾಗೆ ಈಗ ನಮ್ಮ ನಾಯಕರು ಎರಡು ಕಡೆ ಸ್ಪರ್ಧೆ ಮಾಡಿ ಅಂತ ಹೇಳಿದ್ದಾರೆ. ಕನಕಪುರದಲ್ಲಿ ಸ್ಪರ್ಧೆ ಮಾಡಬೇಕು ಅನ್ನೋದು ಪಕ್ಷದ ತೀರ್ಮಾನವೇ ಹೊರತು ನನ್ನ ತೀರ್ಮಾನ ಅಲ್ಲ ಎಂದರು.