ಬೆಂಗಳೂರು: ನಂಜನಗೂಡು ಪುರಾತನ ದೇವಸ್ಥಾನ ತೆರವು ವಿಚಾರವಾಗಿ ವಿವಾದ ತೀವ್ರಗೊಂಡಿದ್ದು, ಇದೀಗ ಸರ್ಕಾರ ಕೊನೆಗೂ ಎಚ್ಚೆತ್ತುಕೊಂಡಿದೆ. ಜಿಲ್ಲಾಧಿಕಾರಿಗಳು ಯಾವುದೇ ಪಾರ್ಥನಾ ಮಂದಿರ ತೆರವು ಮುನ್ನ ಸಾರ್ವಜನಿಕರ ಭಾವನೆ, ಸುಪ್ರೀಂಕೋರ್ಟ್ ಆದೇಶ ಪರಿಗಣಿಸಿ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲು ಸರ್ಕಾರ ಮುಂದಾಗಿದೆ.
ಈ ಕುರಿತಾಗಿ ವಿಧಾನಸೌಧದಲ್ಲಿ ಮಾತನಾಡಿದ ಸಚಿವ ಆರ್.ಅಶೋಕ್, ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಜಿಲ್ಲಾಡಳಿತ ಕ್ರಮ ಕೈಗೊಳ್ಳುತ್ತಿದೆ. ಆದರೆ, ಜನರ ಭಾವನೆಗಳಿಗೆ ಮನ್ನಣೆ ನೀಡಬೇಕು. ಸುಪ್ರೀಂಕೋರ್ಟ್ ಎಲ್ಲೂ ಏಕಾಏಕಿ ಧಾರ್ಮಿಕ ಕಟ್ಟಡಗಳನ್ನು ಒಡೆಯಬೇಕು ಎಂದು ಹೇಳಲಿಲ್ಲ. ಆದೇಶದಲ್ಲಿ ದೇವಾಲಯಗಳ ಸ್ಥಳಾಂತರಕ್ಕೆ ಅವಕಾಶ ಇದೆ ಹಾಗೂ ಜನರ ಮನವವೊಲಿಕೆಗೂ ಅವಕಾಶ ಇದೆ. ಏಕಾಏಕಿ ದೇವಸ್ಥಾನ ಒಡೆಯುವುದು ಸರಿಯಲ್ಲ ಎಂಬುದು ಸರ್ಕಾರದ ಭಾವನೆಯಾಗಿದೆ ಎಂದು ತಿಳಿಸಿದರು.