ಬೆಂಗಳೂರು : ತಜ್ಞರ ವರದಿ ಆಧರಿಸಿ ರಾಜ್ಯದಲ್ಲಿ ಲಾಕ್ಡೌನ್ ವಿಸ್ತರಣೆ ಮಾಡಬೇಕೆ, ಬೇಡವೇ ಎಂಬುದರ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದಲ್ಲಿ ಪಾಸಿಟಿವಿಟಿ ರೇಟ್ ಆಧಾರದ ಮೇಲೆ ತೀರ್ಮಾನ ಮಾಡಿದ್ದೇವೆ.
ಬೆಂಗಳೂರಿನಲ್ಲಿ 500ಕ್ಕಿಂತ ಕಡಿಮೆ ಬರಬೇಕು, ರಾಜ್ಯದಲ್ಲಿ 2 ಸಾವಿರ, ಮೂರು ಸಾವಿರಕ್ಕೂ ಕಡಿಮೆ ಬರಬೇಕು. ಆಗ ಮಾತ್ರ ಲಾಕ್ಡೌನ್ ಕೈ ಬಿಡುವ ಬಗ್ಗೆ ತೀರ್ಮಾನ ಮಾಡಬಹುದು ಎಂದು ಹೇಳಿದರು.
ಕೋವಿಡ್ ಸಂಬಂಧಿತ ಸಚಿವರ ಸಭೆ ನಾಳೆ ಇದೆ. ಎರಡು ದಿನಕ್ಕೊಮ್ಮೆ ಚರ್ಚೆ ಮಾಡುತ್ತೇವೆ. ಜೂನ್ 5 ಅಥವಾ 6 ರೊಳಗೆ ಸಿಎಂ ನೇತೃತ್ವದಲ್ಲಿ ಸಭೆ ನಡೆಸಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.
'ಮೇಕ್ ಶಿಫ್ಟ್' ಆಸ್ಪತ್ರೆ :ಕರ್ನಾಟಕದಲ್ಲಿ ಮೊದಲ ಬಾರಿಗೆ ದೊಡ್ಡಬಳ್ಳಾಪುರದಲ್ಲಿ 'ಮೇಕ್ ಶಿಫ್ಟ್' ಆಸ್ಪತ್ರೆಗೆ ತಯಾರಿ ಮಾಡುತ್ತಿದ್ದೇವೆ. ಪೂರ್ತಿ ವೈದ್ಯಕೀಯ ಸಲಕರಣೆಗಳು ಸೇರಿ ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತಿದೆ.
ಸೋಂಕಿತರಿಗೆ ತುರ್ತು ಚಿಕಿತ್ಸಾ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಸಿ.ಎಸ್.ಆರ್ ನಿಧಿಯಡಿ ಒದಗಿಸಿರುವ ಅನುದಾನದಲ್ಲಿ ಅಂದಾಜು ಕೋಟಿ ರೂ.ಗಳ ವೆಚ್ಚದಲ್ಲಿ 100 ಆಕ್ಸಿಜನೇಟೆಡ್ ಬೆಡ್ಗಳ ವ್ಯವಸ್ಥೆಯನ್ನ ಮೇಕ್ ಶಿಫ್ಟ್ ಆಸ್ಪತ್ರೆಯಲ್ಲಿ ಮಾಡಲಾಗುತ್ತದೆ.
ಹಡಗಿನಲ್ಲಿ ಬೆಡ್ ಮತ್ತಿತರ ಸಲಕರಣೆ ರೆಡಿಮೇಡ್ ಆಗಿ ಬರುತ್ತದೆ. ವಾಟರ್ ಮತ್ತು ಸ್ಯಾನಿಟೈಸರ್ ಕನೆಕ್ಷನ್ ಅಷ್ಟೇ ಮಾಡುತ್ತೇವೆ. 100 ಬೆಡ್ ಆಸ್ಪತ್ರೆ ಇದಾಗಿದ್ದು, 70 ಐಸಿಯು, 10 ವೆಂಟಿಲೇಟರ್ ಇರಲಿದೆ ಎಂದು ಹೇಳಿದರು. 15 ದಿನಗಳಲ್ಲಿಈ ಆಸ್ಪತ್ರೆ ರೆಡಿ ಮಾಡುತ್ತೇವೆ. ದೊಡ್ಡಬಳ್ಳಾಪುರ ಭಾಗದ ಜನರಿಗೆ ಈ ಆಸ್ಪತ್ರೆಯಿಂದ ಉಪಯೋಗ ಆಗುತ್ತದೆ ಎಂದರು.