ಬೆಂಗಳೂರು :ಶಾಲೆಗಳಲ್ಲಿ ಕೇಸರಿ ಬಾವುಟ ಹಾಕೋದು ತಪ್ಪು. ಹಾಗೆ ಹಿಜಾಬ್ ಹಾಕೋದು ತಪ್ಪು. ಹಿಜಾಬ್ ಹಾಕಿ ಬರೋದಕ್ಕೆ ಇದು ಆಫ್ಘಾನಿಸ್ತಾನ ಅಲ್ಲ ಎಂದು ಸಚಿವ ಆರ್.ಅಶೋಕ್ ಕಿಡಿಕಾರಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಹಿಜಾಬ್ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಶಾಲೆಗೆ ಬರಬೇಕಾದರೆ ಯಾವುದೇ ವ್ಯಕ್ತಿ ಧರ್ಮ ಪ್ರಚಾರ ಮಾಡಬಾರದು. ಎಲ್ಲರೂ ಅಲ್ಲಿ ಸಾಮಾನ್ಯನೇ. ಯೂನಿಫಾರಂ ಧರಿಸಿ ಬರಬೇಕಾದದ್ದು ಕಡ್ಡಾಯ.
ಹಿಜಾಬ್ ವಿವಾದ ಕುರಿತು ಸಚಿವ ಆರ್ ಅಶೋಕ್ ಮಾತನಾಡಿರುವುದು.. ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ, ಇಲ್ಲಿ ಕಾನೂನು ಪಾಲನೆ ಮಾಡಬೇಕು. ಸರ್ಕಾರಿ ಶಾಲೆಗಳಲ್ಲಿ ಏನು ಕಾನೂನು ಇದೆ ಅದು ಪಾಲನೆ ಮಾಡಬೇಕು. ಆಫ್ಘಾನಿಸ್ತಾನದಲ್ಲಿ ಹೆಣ್ಮಕ್ಕಳು ಶಾಲೆಗೆ ಹೋಗುವುದಕ್ಕೆ ಪರ್ಮಿಶನ್ ಇಲ್ಲ. ಇದು ಭಾರತ, ಇಲ್ಲಿ ಪ್ರಜಾಪ್ರಭುತ್ವ ಇದೆ. ಹಿಜಾಬ್ ಹಾಕೋದು ತಪ್ಪು ಎಂದು ಕೇರಳ ಹೈಕೋರ್ಟ್ ಕೂಡ ಹೇಳಿದೆ ಎಂದರು.
ಸಿದ್ದರಾಮಯ್ಯಗೂ ಅಲ್ಪಸಂಖ್ಯಾತರಿಗೂ ಭಾರೀ ನಂಟು. ಶಾಲೆಗಳಲ್ಲಿ ಹಿಜಾಬ್ ಕಾನೂನಿಗೆ ವಿರುದ್ಧ ಎಂದು ಸರ್ಕಾರ ಹೇಳಿದೆ. ಅಲ್ಪಸಂಖ್ಯಾತರೆಂದರೆ ಓಡಿ ಹೋಗಿ ಸ್ಟೇಟ್ಮೆಂಟ್ ಕೊಡುತ್ತಾರೆ ಸಿದ್ದರಾಮಯ್ಯ. ಶಾದಿ ಭಾಗ್ಯ ಮಾಡಿದ್ರು, ಮುಸ್ಲಿಮರಿಗೆ ಮಾತ್ರ. ಹಿಂದೂಗಳಲ್ಲಿ ಎಸ್ಸಿಗಳಲ್ಲಿ ಬಡವರು ಇಲ್ಲವೇ?. ಟಿಪ್ಪು ಜಯಂತಿ ಮಾಡಿದರು. ಹಿಜಾಬ್ ವಿವಾದ ಕಾಂಗ್ರೆಸ್ ಪ್ರೇರಿತವಾದ ಘಟನೆ.
ಕಾಂಗ್ರೆಸ್ ಇದನ್ನು ಖಂಡಿಸಬೇಕಿತ್ತು. ಡಿಕೆಶಿ ಖಂಡಿಸಿದ್ದಾರೆ, ಕಾಂಗ್ರೆಸ್‌ನವರು ಖಂಡಿಸಿಲ್ಲ. ಶಾಲೆಯಲ್ಲಿ ಕೇಸರಿ ಶಾಲು ಹಾಗೂ ಹಿಜಾಬ್ ಹಾಕುವುದು ತಪ್ಪು. ಆಫ್ಘಾನಿಸ್ತಾನ, ಪಾಕಿಸ್ತಾನ ಇದಲ್ಲ, ಮನಸ್ಸಿಗೆ ಬಂದಂತೆ ಹಾಕಲು. ಶಾಲೆಯಲ್ಲಿ ಡ್ರೆಸ್ ಕೋಡ್ ಇದೆ. ಅದನ್ನು ಪಾಲನೆ ಮಾಡುವುದು ಕರ್ತವ್ಯ. ಮನೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಹಾಕಲಿ ಎಂದು ತಿಳಿಸಿದರು.
ಮುಸ್ಲಿಮರ ಸಂಖ್ಯೆ 50%. ಆದರೆ, ಹಿಂದೂಗಳ ಪರಿಸ್ಥಿತಿ ಏನಾಗಬಹುದು ಎಂಬ ಯತ್ನಾಳ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಭವಿಷ್ಯ ಹೇಳಲು ಸಾಧ್ಯವಿಲ್ಲ. ಹೆಣ್ಣು ಮಕ್ಕಳ ಶೋಷಣೆ ಆಫ್ಘಾನಿಸ್ತಾನದಲ್ಲಿ ಆಗುತ್ತದೆ. ಶಾಲೆಗೆ ಕಳಿಸಿ ಎಂದು ಬೇಡಿಕೊಳ್ಳುತ್ತಾರೆ ಹೆಣ್ಣು ಮಕ್ಕಳು ಅಲ್ಲಿ. ಆ ಪರಿಸ್ಥಿತಿ ಭಾರತಕ್ಕೆ ಬರುವುದು ಬೇಡ ಎಂದಾದರೆ ಈ ರೀತಿ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ. ಕೇಸರಿ ಶಾಲು ಧರಿಸುವ ಹಿಂದೆ ಸಂಘಪರಿವಾದ ಕುಮ್ಮಕ್ಕು ಇಲ್ಲ. ಅವರು ಹಾಕಿದ್ದಕ್ಕೆ ಇವರು ಹಾಕಿಕೊಂಡು ಬಂದಿದ್ದಾರೆ ಎಂದು ಸ್ಪಷ್ಟಪಡಿಸಿದರು.