ಬೆಂಗಳೂರು: ಎಂಟಿಬಿ ನಾಗರಾಜ್ ಅವರನ್ನು ಪಕ್ಷಕ್ಕೆ ಕರೆತಂದಿದ್ದೇ ನಾನು. ಅವರಿಗೆ ನನ್ನ ಬಳಿ ಇದ್ದ ಉಸ್ತುವಾರಿ ಸ್ಥಾನ ಕೊಡುವಂತೆ ಸಿಎಂಗೆ ಪತ್ರ ಬರೆದಿದ್ದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಎಂಟಿಬಿ ಬೆಂಗಳೂರು ಗ್ರಾಮಾಂತರ ಉಸ್ತುವಾರಿ ಸ್ಥಾನ ಕೊಡಿ ಎಂದು ಮನವಿ ಮಾಡಿದ್ದರು. ನನ್ನ ವಿನಂತಿಯಂತೆ ಸಿಎಂ ಅವರಿಗೆ ಉಸ್ತುವಾರಿ ಕೊಟ್ಟಿದ್ದಾರೆ. ಇದನ್ನು ನಾನು ಸ್ವಾಗತಿಸುತ್ತೇನೆ. ಇದರಲ್ಲಿ ನನ್ನ ತ್ಯಾಗದ ಪ್ರಶ್ನೆ ಬರುವುದಿಲ್ಲ. ನಿಮಗೆ ಬೇರೆ ಉಸ್ತುವಾರಿಯ ಬೇಡಿಕೆ ಇದೆಯಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಸಿದ ಅವರು, ನಾನು ಕಂದಾಯ ಸಚಿವನಾಗಿದ್ದೇನೆ. ಇದರಲ್ಲೇ ಕೈ ತುಂಬಾ ಕೆಲಸ ಇದೆ. ಸಿಎಂ ಅವರು ಬೆಂಗಳೂರು ಉಸ್ತುವಾರಿ ಇದ್ದಾರೆ. ಅವರೇ ಮುಂದುವರಿಯಲಿ ಎಂದರು.
ಎಂಟಿಬಿಗೆ ಬೆಂಗ್ರಾ ಉಸ್ತುವಾರಿ ಕೊಡುವಂತೆ ಸಿಎಂಗೆ ಮನವಿ ಮಾಡಿದ್ದೆ: ಸಚಿವ ಆರ್.ಅಶೋಕ್ ದೇಶದಲ್ಲಿ ಎಬಿಸಿ ಕಾಂಗ್ರೆಸ್ ಇದೆ
ದೇಶದಲ್ಲಿ ಎ ಯಿಂದ ಝಡ್ ತನಕ ಕಾಂಗ್ರೆಸ್ ಇದೆ. ಕರ್ನಾಟಕದಲ್ಲಿ ಇದೀಗ ಡಿ ಮತ್ತು ಎಸ್ ಕಾಂಗ್ರೆಸ್ ಆರಂಭ ಆಗಿದೆ ಎಂದು ಕಾಂಗ್ರೆಸ್ ಮುಂದಿನ ಸಿಎಂ ಹೇಳಿಕೆಯ ಕುರಿತು ವ್ಯಂಗ್ಯವಾಡಿದರು.
ಕಾಂಗ್ರೆಸ್ನಲ್ಲಿನ ಸಿಎಂ ಸ್ಥಾನ ಚರ್ಚೆ, ಕೂಸು ಹುಟ್ಟುವ ಮೊದಲೇ ಕುಲಾವಿ ಎಂಬಂತಾಗಿದೆ. ಯಾರ ಕೈ ಮೇಲೆ, ಯಾರದ್ದು ಕೆಳಗಡೆ ಎಂದು ನಿರ್ಧಾರ ಆಗುವ ಸಮಯ ಬಂದಿದೆ. ಕಾಂಗ್ರೆಸ್ ಹೈಕಮಾಂಡ್ ವೀಕ್ ಆಗಿದೆ, ಆ ಕಾರಣಕ್ಕೆ ಸಿದ್ದರಾಮಯ್ಯ ಮುಂದಿನ ಸಿಎಂ ಹೌದೋ ಅಲ್ಲವೋ ಎಂದು ಹೇಳಲು ಆಗುತ್ತಿಲ್ಲ. ಹಲವು ಶಾಸಕರು ಸಿದ್ದರಾಮಯ್ಯ ಆಗಲಿ ಎನ್ನುತ್ತಿದ್ದಾರೆ ಎಂದರು.
ಬಿಜೆಪಿಯಲ್ಲಿ ಮುಂದಿನ ಸಿಎಂ ಬಗ್ಗೆ ಹೈಕಮಾಂಡ್ ನಿರ್ಧಾರ ಮಾಡಲಿದೆ. ಪ್ರಧಾನಿ ಮೋದಿ ಬಲಿಷ್ಠ ನಾಯಕ. ಅವರೇ ಮುಂದಿನ ಸಿಎಂ ಯಾರು ಎಂಬುದನ್ನು ತೀರ್ಮಾನಿಸಲಿದ್ದಾರೆ. ಹಾಗಾಗಿ ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ ಎಂದು ಸ್ಪಷ್ಟಪಡಿಸಿದರು.
ಓದಿ:46 ಕೋಟಿ ಜನಧನ್ ಖಾತೆ ಮಾಡಿಸಿದ್ದು ಮೋದಿ ಸರ್ಕಾರದ ಸಾಧನೆ; ಪ್ರಹ್ಲಾದ ಜೋಶಿ