ಕರ್ನಾಟಕ

karnataka

ETV Bharat / state

ಡೆಮಾಕ್ರಸಿಗೆ ಆದ ಅಪಮಾನದ‌ ಸೇಡನ್ನು ಈಗ ತೀರಿಸಿಕೊಂಡಿದ್ದೇವೆ: ಸಚಿವ ಆರ್. ಅಶೋಕ್

ಹಿಂದೆ ನಮ್ಮ ಸರ್ಕಾರವಿದ್ದಾಗ ಗೋಹತ್ಯೆ ನಿಷೇಧ ಕಾಯ್ದೆ ತಂದಿದ್ದೆವು. ಆಗ ಕಾಂಗ್ರೆಸ್ ಸರ್ಕಾರ ನೇಮಿಸಿದ್ದ ರಾಜ್ಯಪಾಲರ ಬಳಿ ಹೋಗಿ ಕಾಂಗ್ರೆಸ್ ನವರೇ ಅದಕ್ಕೆ ತಡೆಯಾಜ್ಞೆ ತಂದಿದ್ದರು. ಎರಡೂ ಸದನಗಳಲ್ಲಿ ಪಾಸ್ ಆದ ಬಿಲ್​ಗೆ ತಡೆಯಾಜ್ಞೆ ತಂದಿದ್ದು ಡೆಮಾಕ್ರಸಿಯಾ ಎಂದು ಸಚಿವ ಆರ್.ಅಶೋಕ್ ಪ್ರಶ್ನಿಸಿದ್ದಾರೆ.

Minister R. Ashok
ಕಂದಾಯ ಸಚಿವ ಆರ್.ಅಶೋಕ್

By

Published : Dec 10, 2020, 12:47 PM IST

ಬೆಂಗಳೂರು: ಡೆಮಾಕ್ರಸಿಗೆ ಆದ ಅಪಮಾನದ ಸೇಡನ್ನು ನಾವು ಈಗ ತೀರಿಸಿಕೊಂಡಿದ್ದೇವೆ ಎಂದು ಕಂದಾಯ ಸಚಿವ ಆರ್.ಅಶೋಕ್ ಅವರು ಕಾಂಗ್ರೆಸ್​​ಗೆ ತಿರುಗೇಟು ನೀಡಿದರು.

ವಿಧಾನಸೌಧದಲ್ಲಿ ಗೋ ಹತ್ಯೆ ನಿಷೇಧ ವಿಧೇಯಕ ಮಂಡನೆ ವಿಚಾರವಾಗಿ ಮಾತನಾಡಿದ ಅವರು, ಹಿಂದೆ ನಮ್ಮ ಸರ್ಕಾರವಿದ್ದಾಗ ಗೋಹತ್ಯೆ ನಿಷೇಧ ಕಾಯ್ದೆ ತಂದಿದ್ದೆವು. ಆಗ ಕಾಂಗ್ರೆಸ್ ಸರ್ಕಾರ ನೇಮಿಸಿದ್ದ ರಾಜ್ಯಪಾಲರ ಬಳಿ ಹೋಗಿ ಕಾಂಗ್ರೆಸ್ ನವರೇ ಅದಕ್ಕೆ ತಡೆಯಾಜ್ಞೆ ತಂದಿದ್ದರು. ಎರಡೂ ಸದನಗಳಲ್ಲಿ ಪಾಸ್ ಆದ ಬಿಲ್​ಗೆ ತಡೆಯಾಜ್ಞೆ ತಂದಿದ್ದು ಡೆಮಾಕ್ರಸಿಯಾ?. ಪ್ರಜಾಪ್ರಭುತ್ವ ಪಾಲನೆ ಮಾಡುವವರು ಮಾಡುವ ಕೆಲಸವೇ? ಅಂದು ನಮಗಾದ ಅಪಮಾನಕ್ಕೆ ನಾವು ಈಗ ಸೇಡು ತೀರಿಸಿಕೊಂಡಿದ್ದೇವೆ ಎಂದು ತಿಳಿಸಿದರು.

ಪರಿಷತ್​​ನಲ್ಲಿ ಈ ವಿಧೇಯಕ ಪಾಸ್ ಆಗುತ್ತದೆ. ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ ಪಾಸ್ ಆದಂತೆಯೇ ಈ ಕಾಯ್ದೆ ಕೂಡಾ ಪಾಸ್ ಆಗುತ್ತದೆ. ಜೆಡಿಎಸ್ ನವರು ಎರಡೂ ಪಕ್ಷಗಳ ಜೊತೆ ಸಮಾನ ಅಂತರ ಕಾಯ್ದುಕೊಂಡಿದ್ದಾರೆ. ಬಿಲ್ ವಿಚಾರದಲ್ಲಿ ನಮಗೆ ಬೆಂಬಲ ಕೊಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಓದಿ: ನೂರಕ್ಕೆ ನೂರರಷ್ಟು ಗೋಹತ್ಯೆ ತಡೆ ವಿಧೇಯಕ ಜಾರಿಗೆ ತರುತ್ತೇವೆ: ಸಚಿವ ಆರ್.ಅಶೋಕ್

ಕಾಂಗ್ರೆಸ್ ನವರಿಗೆ ನಿಲುವೇ ಇಲ್ಲ: ಕಾಂಗ್ರೆಸ್ ನವರು ಬೆದರಿಕೆ ಹಾಕ್ತಾರೇನು? ಒಂದು ಸಲ ಪಶ್ಚಾತಾಪ ಧ್ವನಿಯಲ್ಲಿ ಮಾತನಾಡುತ್ತಾರೆ. ಇನ್ನೊಂದು ಸಲ ಗೋ ಹತ್ಯೆ ನಿಷೇಧ ವಿಧೇಯಕವನ್ನು ವಿರೋಧಿಸುತ್ತಾರೆ. ಕಾಂಗ್ರೆಸ್ ನವರಿಗೆ ಒಂದು ನಿರ್ದಿಷ್ಟ ನಿಲುವೇ ಇಲ್ಲವೆಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಕಿಡಿ‌ಕಾರಿದರು.

ಕಾಂಗ್ರೆಸ್ ನವರದ್ದು ಯಾವ ಕಾಂಗ್ರೆಸು?..ಮಹಾತ್ಮಾ ಗಾಂಧಿ ಮರೆತ ಕಾಂಗ್ರೆಸ್: ದನಗಳ್ಳರ ಪರ, ದನ ಕಡಿಯುವವರ ಪರ ನಿಂತಿರುವ ಕಾಂಗ್ರೆಸ್ ಇದು. ಇವರು ಮಾತ್ರ ಬುದ್ಧಿವಂತರು, ಗಾಂಧೀಜಿ ಅಂಬೇಡ್ಕರ್ ಬುದ್ಧಿವಂತರಲ್ವಾ. ಮತೀಯ ಆಧಾರದ ರಾಜಕಾರಣ ಮಾಡುತ್ತಿರುವವರು ಕಾಂಗ್ರೆಸ್ ನವರು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಾಗ್ದಾಳಿ ನಡೆಸಿದರು.

ಕೃಷಿ ಸಂಸ್ಕೃತಿ ಎತ್ತಿ ಹಿಡಿಯಬೇಕಾಗಿದೆ. ಕೃಷಿ ಸಂಸ್ಕೃತಿಗೆ ಬೆನ್ನೆಲುಬಾದ ಗೋ ಸಮೂಹ ಎತ್ತಿ ಹಿಡಿಬೇಕಾದ್ದು ನಮ್ಮ ಕರ್ತವ್ಯ. ದನ ಕಾಯುವವರು ಯಾರೂ ದನ ಕೊಲ್ಲುವುದಕ್ಕೆ ಬೆಂಬಲ ನೀಡುವುದಿಲ್ಲ. ಕಾಂಗ್ರೆಸ್​ನವರು ಒಂದು ಸಲ ದನ ಕಾಯ್ತೀನಿ ಅಂತಾರೆ, ಇನ್ನೊಂದು ಸಲ ದನ ಕಡಿಯುವ ಬಗ್ಗೆಯೂ ಮಾತನಾಡ್ತಾರೆ‌ ಎಂದು ಅವರು ಕಿಡಿಕಾರಿದರು.

ರಾಜ್ಯದ ಜನರೇ ಕಾಂಗ್ರೆಸ್ ನವರನ್ನು ಬಹಿಷ್ಕಾರ ಮಾಡಿದ ಮೇಲೆ ಇವರೇನು ಕಲಾಪ ಬಹಿಷ್ಕಾರ ಮಾಡೋದು. ಕಲಾಪ ಬಹಿಷ್ಕಾರ ಮಾಡಿದರೆ ಇವರೇ ಇವರ ಮುಖದ ಮೇಲೆ ಉಗುಳಿಕೊಂಡಂತೆ ಎಂದು ಸಿ.ಟಿ.ರವಿ ಕಿಡಿಕಾರಿದರು.

ABOUT THE AUTHOR

...view details