ಬೆಂಗಳೂರು:ದೆಹಲಿ, ಮಹಾರಾಷ್ಟ್ರ ಬಾರ್ಡರ್ ಲೈನ್ಗೆ ಬಂದಿವೆ. ಮೂರನೇ ಅಲೆ ಬರುವುದು ನಿಶ್ಚಿತ ಎಂಬ ವಾತಾವರಣ ನಿರ್ಮಾಣವಾಗಿದೆ. ಕೇಂದ್ರ ಸರ್ಕಾರವು ಬೆಂಗಳೂರನ್ನು ರೆಡ್ ಜೋನ್ ಎಂದು ಗುರುತಿಸಿದೆ. ನೈಟ್ ಕರ್ಫ್ಯೂ ಮುಗಿಯುವ ಮುನ್ನವೇ ಸಭೆ ನಡೆಸಿ, ತಜ್ಞರ ಕಮಿಟಿ ಸಲಹೆ ಮೇರೆಗೆ ಟಫ್ ರೂಲ್ಸ್ ಜಾರಿಗೊಳಿಸುತ್ತೇವೆ ಎಂದು ಕಂದಾಯ ಸಚಿವ ಆರ್.ಅಶೋಕ್ ಪರೋಕ್ಷವಾಗಿ ಲಾಕ್ಡೌನ್ ಸುಳಿವು ನೀಡಿದ್ದಾರೆ.
ಪರೋಕ್ಷವಾಗಿ ಲಾಕ್ಡೌನ್ ಸುಳಿವು ನೀಡಿದ ಕಂದಾಯ ಸಚಿವ ಅಶೋಕ್ ಸಿಎಂ ಬೊಮ್ಮಾಯಿಯವರ ಗೃಹ ಕಚೇರಿ ಕೃಷ್ಣಾದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸದ್ಯ ಜನವರಿ 07ರ ವರೆಗೆ ರಾಜ್ಯದಲ್ಲಿ ನೈಟ್ ಕರ್ಫ್ಯೂ ಜಾರಿಯಲ್ಲಿದೆ. ಇದಕ್ಕೆ ಮುಂಚಿತವಾಗಿ ಸಭೆ ನಡೆಸುತ್ತೇವೆ. ಬಳಿಕ ಹೆಲ್ತ್ ಎಕ್ಸ್ಪರ್ಟ್ ಕಮಿಟಿ ಜೊತೆ ಮಾತನಾಡಿ ಕಠಿಣ ನಿಯಮಗಳನ್ನು ಯಥಾವತ್ತಾಗಿ ಜಾರಿ ಮಾಡಲಾಗುತ್ತದೆ. ಕಳೆದ ಬಾರಿ ಸಂಭವಿಸಿದ ಸಾವು-ನೋವುಗಳನ್ನು ನೋಡಿದ್ದೇವೆ. ಮತ್ತೊಮ್ಮೆ ಸನ್ನಿವೇಶ ಮರುಕಳಿಸದಂತೆ ಎಚ್ಚರಿಕೆ ವಹಿಸುವುದು ತುಂಬಾ ಅಗತ್ಯ. ಸಿಎಂ ನೇತೃತ್ವದಲ್ಲಿ ಸಭೆ ನಡೆಸಿ ಮುಂದಿನ ತೀರ್ಮಾನ ಮಾಡುತ್ತೇವೆ. ಸರ್ಕಾರ ಜಾರಿ ಮಾಡುವ ನಿಯಮಗಳಿಗೆ ಜನರು ಸಹಕಾರ ನೀಡಬೇಕು. ಇಲ್ಲದ್ದಿದ್ದರೆ ದೆಹಲಿ, ಮುಂಬೈ, ಪಶ್ಚಿಮ ಬಂಗಾಳದ ರೀತಿಯಲ್ಲಿ ಕಠಿಣ ನಿರ್ಬಂಧಗಳನ್ನು ಹೇರಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಗುಂಡಿ ಮುಚ್ಚಲು ಸಿಎಂ ಸೂಚನೆ:
730 ಕಿ.ಮೀ ರಸ್ತೆಗಳಲ್ಲಿ ಗುಂಡಿಗಳಿವೆ. ಮಾರ್ಚ್.31 ರೊಳಗೆ ಗುಂಡಿ ಮುಚ್ಚಲು ಸಿಎಂ ಸೂಚನೆ ನೀಡಿದ್ದಾರೆ. ಟೆಂಡರ್ ಶ್ಯೂರ್ ಕಾಮಗಾರಿಯನ್ನು ಮುಗಿಸಲು ಸೂಚಿಸಿದ್ದಾರೆ. ಇದರ ಜೊತೆಗೆ ರಾಜಕಾಲುವೆ ನಿರ್ವಹಣೆಗೆ 1,500 ಕೋಟಿ ರೂ. ಹೆಚ್ಚುವರಿವಾಗಿ ನೀಡಲು ತಿಳಿಸಿದ್ದು, ಮಳೆನೀರು, ಕಾಲುವೆಗಳ ದುರಸ್ತಿ, ಮಳೆ ಬಿದ್ದರೆ ಉಂಟಾಗುವ ಅನಾಹುತ ತಪ್ಪಿಸಲು ಈ ಹಣ ಬಳಕೆ ಮಾಡಲಾಗುತ್ತದೆ. ಜನವರಿ 31ರೊಳಗೆ ಬಿಬಿಎಂಪಿಯಿಂದ ನಗರದಲ್ಲಿ ಎಲ್ಇಡಿ ಬೀದಿದೀಪಗಳನ್ನು ಅಳವಡಿಸಲು ಸೂಚಿಸಲಾಗಿದೆ ಸಚಿವ ಅಶೋಕ್ ತಿಳಿಸಿದರು.
ಸಿಎಂ ಜೊತೆಗಿನ ಸಭೆ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ ಕಂದಾಯ ಸಚಿವರು ಇಂಜಿನಿಯರ್ಗಳ ನೇಮಕಾತಿ:
ನಿರ್ಭಯ ಯೋಜನೆಯಡಿ ಬೆಂಗಳೂರಿನಲ್ಲಿ 7 ಸಾವಿರ ಸಿಸಿಟಿವಿ ಅಳವಡಿಸಲು ನಿರ್ಧರಿಸಲಾಗಿದೆ. ಬಿಬಿಎಂಪಿ ವಾರ್ಡ್ಗಳಲ್ಲಿ 150 ಇಂಜಿನಿಯರ್ಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಲಾಗುತ್ತದೆ. ಸದ್ಯಕ್ಕೆ ಗುತ್ತಿಗೆ ಆಧಾರದಲ್ಲಿ ಇಂಜಿನಿಯರ್ಗಳ ನೇಮಕ ಮಾಡಿ ಮೂರ್ನಾಲ್ಕು ತಿಂಗಳ ಬಳಿಕ ಇಂಜಿನಿಯರ್ಗಳ ನೇಮಕಾತಿಗೆ ಕ್ರಮ ವಹಿಸಲಾಗುತ್ತದೆ ಎಂದು ಬಿ ಇ ಪದವಿಧರರಿಗೆ ಸಿಹಿ ಸುದ್ದಿ ನೀಡಿದರು.
ಟಿಡಿಆರ್ ಪಾಲಿಸಿ ನೆನೆಗುದ್ದಿಗೆ ಬಿದ್ದಿದೆ. ಹೀಗಾಗಿ ಟಿಡಿಆರ್ ಹೊಸ ಪಾಲಿಸಿಯನ್ನು ಒಂದು ವಾರದೊಳಗೆ ಮಾಡಲಾಗುತ್ತದೆ. ಅಮೃತ ನಗರೋತ್ಥಾನವನ್ನು ಮುಂದಿನ ಕ್ಯಾಬಿನೆಟ್ನಲ್ಲಿ ಅನುಮೋದನೆ ಮಾಡಲಿದ್ದಾರೆ. ಜಲಮಂಡಳಿ ಹಾಗೂ ಬಿಬಿಎಂಪಿ ನಡುವೆ ಸಿಎಂ ಹಾಗೂ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಕೋ ಆರ್ಡಿನೇಷನ್ ಕಮಿಟಿ ಮಾಡಲಾಗುತ್ತದೆ ಎಂದು ಸಚಿವರು ಮಾಹಿತಿ ನೀಡಿದರು.
ಎ ಹಾಗೂ ಬಿ ಖಾತಾ ಬಗ್ಗೆ ಚರ್ಚಿಸಲು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಬಂದಿದ್ದರು. ಇದಕ್ಕೆ ಮುಕ್ತಿ ಸಿಗಲು ಸರ್ಕಾರ ಚಿಂತನೆ ನಡೆಸಿದೆ. ಅಕ್ರಮ ಸಕ್ರಮದಡಿ ಬಿ ಖಾತೆ ಇರುವುದನ್ನು ಎ ಖಾತೆ ಮಾಡಿಕೊಡಲಾಗುತ್ತದೆ. ಇದರ ಬಗ್ಗೆ ರಾಜೀವ್ ಚಂದ್ರಶೇಖರ್ ಜೊತೆ ಸಿಎಂ ಮಾತನಾಡಿದ್ದಾರೆ. ಸದ್ಯ ಸುಪ್ರೀಂಕೋರ್ಟಿನಲ್ಲಿ ಕೇಸ್ ನಡೆಯುತ್ತಿದೆ. ಪ್ರಕರಣದ ಶೀಘ್ರ ಇತ್ಯರ್ಥಕ್ಕೆ ಕೋರ್ಟಿಗೆ ಮನವಿ ಮಾಡಿಕೊಳ್ಳುತ್ತೇವೆ ಎಂದು ಹೇಳಿದರು.
ಕೋವಿಡ್ ತೆಡೆಗೆ ಕಠಿಣ ಕ್ರಮ ಅಗತ್ಯ:
ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆಗೆ ಸೇರುವ ಜನರಿಗೆ ಸರ್ಕಾರದಿಂದ ಕಡಿವಾಣ ಹಾಕಲಾಗುತ್ತಾ ಎಂಬುದಕ್ಕೆ ಪ್ರತಿಕ್ರಿಯಿಸಿ, ಕಾಂಗ್ರೆಸ್, ಜೆಡಿಎಸ್ ನವರು ಏನು ಮಾಡುತ್ತಾರೆ ಅನ್ನೋದು ನಮಗೆ ಮುಖ್ಯವಲ್ಲ. ರಾಜ್ಯದ ಜನರ ಜೀವ ಕಾಪಾಡೋದು ಮುಖ್ಯ. ಯಾವುದೇ ರ್ಯಾಲಿ, ಸಭೆ ಬಗ್ಗೆ ತಲೆಯಲ್ಲಿ ಇಲ್ಲ. ಹೀಗಾಗಿ ಜನವರಿ 4 ಅಥವಾ 5ರಂದು ಸಭೆ ಮಾಡಿ ಕೋವಿಡ್ ತಡೆಗೆ ಬಿಗಿ ಕ್ರಮ ಕೈಗೊಳ್ಳಲಿದ್ದೇವೆ ಎಂದು ಸಚಿವ ಅಶೋಕ್ ಲಾಕ್ಡೌನ್ ಸುಳಿವು ನೀಡಿದರು.
ಇದನ್ನೂ ಓದಿ: ತಜ್ಞರ ಸಲಹಾ ಸಮಿತಿ ವರದಿಯಲ್ಲಿ ಲಾಕ್ಡೌನ್ ಪ್ರಸ್ತಾಪ.. ರಾಜ್ಯಕ್ಕೆ ಮತ್ತೊಮ್ಮೆ ಬೀಳುತ್ತಾ ಬೀಗ?