ಬೆಂಗಳೂರು: ಲೋಕಾಯುಕ್ತ ತನಿಖೆಗೂ ಮೊದಲೇ ಪತ್ರಕರ್ತರು ಉಡುಗೊರೆ ಪಡೆದುಕೊಂಡಿದ್ದಾರೆ ಎಂದು ತೀರ್ಪು ನೀಡಿರುವ ರಾಜ್ಯ ಕಾಂಗ್ರೆಸ್ ನಾಯಕರು ಕೂಡಲೇ ರಾಜ್ಯದ ಜನತೆಯ ಮತ್ತು ಪತ್ರಕರ್ತರ ಕ್ಷಮೆ ಯಾಚಿಸಬೇಕು ಎಂದು ಕಂದಾಯ ಸಚಿವ ಆರ್ ಅಶೋಕ್ ಆಗ್ರಹಿಸಿದ್ದಾರೆ.
ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಪತ್ರಕರ್ತರನ್ನು ಗುರಿಯಾಗಿಟ್ಟುಕೊಂಡು ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ಬೆದರಿಕೆ ಹಾಕುತ್ತಿದೆ. ಇಂದಿರಾ ಗಾಂಧಿಯವರಿಗೆ ಬಹಳ ಗುರಿಯಾಗಿದದ್ದು ಮಾಧ್ಯಮ. ದೇಶದಲ್ಲಿ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಇಡೀ ಪತ್ರಕರ್ತರನ್ನು ಜೈಲಿಗಟ್ಟಿದ ಕಳಂಕ ಕಾಂಗ್ರೆಸ್ಗಿದೆ. ಇವತ್ತು ಆ ಹಾದಿಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮಾಡುತ್ತಿರುವ ಹೇಡಿತನವಿದು. ಪತ್ರಕರ್ತರ ಆತ್ಮವಿಶ್ವಾಸ ಕುಗ್ಗಿಸುವ ಕೆಲಸ ನಡೆಯುತ್ತಿದೆ. ಗಿಫ್ಟ್ ಹೆಸರಲ್ಲಿ ಕಾಂಗ್ರೆಸ್ ಬ್ಲಾಕ್ ಮೇಲ್ ಮಾಡುತ್ತಿದೆ ಎಂದು ಆರೋಪಿಸಿದರು.
ಅಮೆರಿಕ, ರಷ್ಯಾ ಅಧ್ಯಕ್ಷರು ಮೋದಿ ಮಾಡಿರುವ ಕೆಲಸಗಳನ್ನು ಹೊಗಳುತ್ತಿದ್ದಾರೆ. ಇದು ಮಾಧ್ಯಮಗಳಲ್ಲಿ ಪ್ರಚಾರವಾಗುತ್ತಿದೆ. ಇದನ್ನು ಸಹಿಸಲು ಆಗದೆ ಹೀಗೆ ಮಾಡುತ್ತಿರಬಹುದು. 2ಜಿ ಹಗರಣ, ಬೆಂಗಳೂರಿನ ಸ್ಟೀಲ್ ಬ್ರಿಡ್ಜ್ ಯೋಜನೆಯನ್ನು ಭ್ರಷ್ಟಾಚಾರದಿಂದ ಅರ್ಧಕ್ಕೆ ನಿಲ್ಲಿಸಿದರು. ಒಂದು ವರ್ಗದ ಪತ್ರಕರ್ತರಿಗೆ ಮಾತ್ರ ಗಿಫ್ಟ್ ಕೊಡಬೇಕು. ಲ್ಯಾಪ್ ಟ್ಯಾಪ್ ಕೊಡಬೇಕು ಅಂತಾ ಸಿದ್ದರಾಮಯ್ಯ ಸರ್ಕಾರದಲ್ಲಿ ಆದೇಶ ಹೊರಡಿಸಿದ್ದರು.
ಪತ್ರಕರ್ತರಲ್ಲೂ ಕೂಡ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಬೇಧ ಭಾವದ ಒಡಕು ಮಾಡಿದ್ದಾರೆ. ಲಿಂಗಾಯುತ -ವೀರಶೈವ ಬೇರ್ಪಡಿಸೋಕೆ ಹೋದಂತೆ ಪತ್ರಕರ್ತರನ್ನು ಜಾತಿ, ಧರ್ಮಾಧಾರಿತವಾಗಿ ಬೇರೆ ಮಾಡುತ್ತಿದ್ದಾರೆ. ಸಿದ್ದರಾಮಯ್ಯನವರಿಗೆ ಈ ಅಂಟು ಬಂದುಬಿಟ್ಟಿದೆ. ಒಡೆದು ಆಳುವ ನೀತಿಯನ್ನು ಇವತ್ತು ಸಮಾಜದ ನಾಲ್ಕನೇ ಅಂಗ ಪತ್ರಿಕಾರಂಗದ ಮೇಲೆ ಮಾಡುತ್ತಿದ್ದಾರೆ.
ಜನರ ವಿಶ್ವಾಸವನ್ನ ಮಾಧ್ಯಮ ಗಳಿಸಿತ್ತು. ಸತ್ಯವನ್ನ ಹೇಳುವುದು ಮಾಧ್ಯಮ. ಆದರೆ ಅದನ್ನು ಕೂಡ ಇವತ್ತು ದಾಳವಾಗಿ ಮಾಡಿಕೊಳ್ಳುತ್ತಿದ್ದಾರೆ. 61 ಲಕ್ಷದ ಜಾಹೀರಾತನ್ನ ಉರ್ದು ಪತ್ರಿಕೆಗಳಿಗೆ ಮಾತ್ರ ಕೊಡಿ ಅಂತಾ ಸಿದ್ದರಾಮಯ್ಯ ಬರೆದಿದ್ದರು. ಮಾಧ್ಯಮವನ್ನು ಕೂಡ ಹೊಡೆಯುವ ಪ್ರಯತ್ನ ಕಾಂಗ್ರೆಸ್ ಮಾಡುತ್ತಿದೆ. ಇವತ್ತು ಕಾಂಗ್ರೆಸ್ ಪಕ್ಷದವರು ಪತ್ರಿಕಾರಂಗದ ಮೇಲೆ ಮಾಡಿರುವುದನ್ನ ಬಿಜೆಪಿ ಖಂಡಿಸುತ್ತಿದೆ ಎಂದರು.
ಡಿಕೆಶಿ ಐಪೋನ್ ಕೊಟ್ಟಿದ್ದಾರೆ: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಮಗೆ ಬೇಕಾದವರಿಗೆ ಈ ಹಿಂದೆ ಐಪೋನ್ ಕೊಟ್ಟಿದ್ದಾರೆ. ಚುನಾಯಿತ ಪ್ರತಿನಿಧಿಗಳಿಗೆ ಕೊಟ್ಟಿದ್ದಾರೆ. ಜಲಭಾಗ್ಯ ನಿಗಮದಿಂದ ಐಪೋನ್ ಖರೀದಿಸಿ ಪತ್ರಕರ್ತರಿಗೆ ಕೊಡಲಾಗಿತ್ತು. ಅಂದೇ ಅಂದಿನ ಮೈತ್ರಿ ಸರ್ಕಾರದಲ್ಲಿ ಸಿಎಂ ಆಗಿದ್ದ ಕುಮಾರಸ್ವಾಮಿಯವರು ಈ ರೀತಿಯ ಲಂಚಕೊಡುವ ಪ್ರವೃತ್ತಿ ಬಿಡು ಅಂತಾ ಡಿ ಕೆ ಶಿವಕುಮಾರ್ಗೆ ಹೇಳಿದ್ದರು ಎಂದರು.