ಬೆಂಗಳೂರು : ಮಂಡ್ಯ ಜಿಲ್ಲೆ ಉಸ್ತುವಾರಿ ಸಚಿವರನ್ನಾಗಿ ಆರ್. ಅಶೋಕ್ ಅವರನ್ನು ನೇಮಿಸಿ ಆದೇಶ ಹೊರಡಿಸಲಾಗಿದೆ. ಇಲ್ಲಿಯವರೆಗೆ ಮಂಡ್ಯ ಜಿಲ್ಲೆಗೆ ಸಚಿವ ಕೆ ಗೋಪಾಲಯ್ಯ ಉಸ್ತುವಾರಿ ವಹಿಸಿದ್ದರು. ಇದೀಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡ್ಯ ಜಿಲ್ಲೆ ಉಸ್ತುವಾರಿಯನ್ನು ಸಚಿವ ಆರ್. ಅಶೋಕ್ ಅವರಿಗೆ ವಹಿಸಿದ್ದಾರೆ. ಕೆ. ಗೋಪಾಲಯ್ಯ ಹಾಸನ ಜಿಲ್ಲೆ ಜೊತೆಗೆ ಮಂಡ್ಯ ಜಿಲ್ಲೆಯ ಉಸ್ತುವಾರಿಯನ್ನು ನಿಭಾಯಿಸುತ್ತಿದ್ದರು.
ಆರ್. ಅಶೋಕ್ ಅವರನ್ನು ಮಂಡ್ಯ ಜಿಲ್ಲೆಯ ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ: ಈ ಮುಂಚೆ ಸಚಿವ ಆರ್. ಅಶೋಕ್ ಗೆ ಯಾವುದೇ ಜಿಲ್ಲೆಯ ಉಸ್ತುವಾರಿಯ ಹೊಣೆ ನೀಡಿರಲಿಲ್ಲ. ಚುನಾವಣೆಗೆ ಇನ್ನು ಮೂರು ನಾಲ್ಕು ತಿಂಗಳ ಇರುವ ಹಿನ್ನೆಲೆ ಆರ್. ಅಶೋಕ್ ಅವರನ್ನು ಮಂಡ್ಯ ಜಿಲ್ಲೆಯ ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ. ಆ ಮೂಲಕ ಮಂಡ್ಯದಲ್ಲಿ ಚುನಾವಣಾ ರಣತಂತ್ರದ ಜವಾಬ್ದಾರಿಯೂ ಸಚಿವ ಆರ್. ಅಶೋಕ್ ಅವರ ಹೆಗಲಿಗೇರಿದೆ.
ಇದನ್ನೂ ಓದಿ:ಬಿಜೆಪಿಯೇ ಭ್ರಷ್ಟಾಚಾರದ ಗಂಗೋತ್ರಿ: ಸಿಎಂಗೆ ಮಾಜಿ ಸಿಎಂ ಸಿದ್ದರಾಮಯ್ಯ ತಿರುಗೇಟು
ಮಂಡ್ಯದಲ್ಲಿ ಪಕ್ಷ ಸಂಘಟನೆ ಮಾಡುವ ಜವಾಬ್ದಾರಿ ಸಚಿವ ಆರ್ ಅಶೋಕ್ ಹೆಗಲಿಗೆ:ಮಂಡ್ಯದಲ್ಲಿ ಪಕ್ಷ ಸಂಘಟನೆ ದೃಷ್ಟಿಯಲ್ಲಿಟ್ಟುಕೊಂಡು ಬಿಜೆಪಿ ಸಚಿವ ಆರ್. ಅಶೋಕ್ ಅವರಿಗೆ ಉಸ್ತುವಾರಿ ಜವಾಬ್ದಾರಿ ವಹಿಸಲಾಗಿದೆ. ಸ್ವತ: ಹೈಕಮಾಂಡ್ ಸಚಿವ ಆರ್. ಅಶೋಕ್ಗೆ ಮಂಡ್ಯ ಉಸ್ತುವಾರಿ ನೀಡುವಂತೆ ಸೂಚನೆ ನೀಡಿತ್ತು ಎನ್ನಲಾಗಿದೆ. ಚುನಾವಣೆ ಹೊಸ್ತಿಲಲ್ಲಿ ಮಂಡ್ಯದಲ್ಲಿ ಪಕ್ಷ ಸಂಘಟನೆ ಮಾಡುವುದಕ್ಕಾಗಿ ಸಚಿವ ಆರ್. ಅಶೋಕ್ಗೆ ಈ ಹೊಣೆಯನ್ನು ಹೈಕಮಾಂಡ್ ನೀಡಿದೆ ಎಂಬುದು ತಿಳಿದುಬಂದಿದೆ. ಇದು ಸಚಿವ ಆರ್. ಅಶೋಕ್ ಗೂ ದೊಡ್ಡ ಸವಾಲಾಗಲಿದೆ. ಮಂಡ್ಯದಲ್ಲಿ ಪಕ್ಷವನ್ನು ಬಲಪಡಿಸಿ ಹೆಚ್ಚಿನ ಸ್ಥಾನವನ್ನು ಗೆಲ್ಲಿಸಿಕೊಡುವ ಜವಾಬ್ದಾರಿಯೂ ಇದೀಗ ಆರ್. ಅಶೋಕ್ ಹೆಗಲಿಗೇರಿಸಲಾಗಿದೆ. ಆ ಮೂಲಕ ಪಕ್ಷವು ಆರ್. ಅಶೋಕ್ ನಾಯಕತ್ವವನ್ನು ಓರೆಗೆ ಹಚ್ಚಲಿದೆ.