ಬೆಂಗಳೂರು: ಭೂ ಸುಧಾರಣೆ ತಿದ್ದುಪಡಿ ಕಾಯ್ದೆಗೆ ವಿರೋಧಿಸುವ ಮೂಲಕ ಕಾಂಗ್ರೆಸ್ ಇಬ್ಭಗೆ ನೀತಿ ಅನುಸರಿಸುತ್ತಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಕಿಡಿಕಾರಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ದೇಶದಲ್ಲೇ ಇಲ್ಲದಂತಹ ಕಾನೂನು ರಾಜ್ಯದಲ್ಲೂ ಬೇಡ. ಕಾಶ್ಮೀರದಲ್ಲೂ ಜಮೀನು ತೆಗೆದುಕೊಳ್ಳಲು ಎಲ್ಲರಿಗೂ ಅವಕಾಶ ನೀಡಲಾಗಿದೆ. ಮಧ್ಯವರ್ತಿಗಳ ಹಿಡಿತದಲ್ಲಿ ರೈತರು ಸಿಲುಕುವಂತ ಪರಿಸ್ಥಿತಿ ತಂದಿದ್ದ ಕಾನೂನನ್ನು ನಾವು ತೆಗೆದುಹಾಕಿದ್ದೇವೆ ಎಂದು ಸಮರ್ಥಿಸಿಕೊಂಡರು.
ಹಿಂದೆ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ಮುಖಂಡರು ತಿದ್ದುಪಡಿ ಪರವಾಗಿ ಮಾತನಾಡಿದರು. ಹಳೆಯ ಕಾಯ್ದೆ ಲಂಚಕ್ಕೆ ದಾರಿ ಮಾಡಿಕೊಟ್ಟಿದೆ ಅಂತ ಹೇಳಿದ್ದರು. ಹೀಗಾಗಿ ಕಾಯ್ದೆಯಲ್ಲಿನ 79ಎ, ಬಿ ತೆಗೆದುಹಾಕಬೇಕೆಂದು ಅಂದೇ ಕಾಂಗ್ರೆಸ್ ಮುಖಂಡರು ಹೇಳಿದ್ದರು. ಈಗ ಕಾಂಗ್ರೆಸ್ ಇಬ್ಭಗೆ ನೀತಿ ತೋರಿಸುತ್ತಿದ್ದಾರೆ. ನಾಟಕ ಮಾಡುವುದಕ್ಕೆ ವಿಧಾನಪರಿಷತ್ನಲ್ಲಿ ವಿರುದ್ಧವಾಗಿ ಮಾತನಾಡಿದ್ದಾರೆ ಅಷ್ಟೇ ಎಂದು ಆರೋಪಿಸಿದರು.
ಕಾಂಗ್ರೆಸ್ ರೈತರ ಟವೆಲ್ಗಳನ್ನು ಹಾಕಿಕೊಂಡು ಬೀದಿಗೆ ಬಂದಿದೆ: ಹೆಚ್ಡಿಕೆ
ವಿಧಾನಸಭೆಯಲ್ಲಿ ಡಿಕೆಶಿ 79 ಎ, ಬಿ ತೆಗೆದು ಹಾಕಬೇಕು ಅಂತಾರೆ. ಪರಿಷತ್ನಲ್ಲಿ ವಿರೋಧ ವ್ಯಕ್ತಪಡಿಸುತ್ತಾರೆ. ಆ ಮೂಲಕ ಕಾಂಗ್ರೆಸ್ನವರು ಇಬ್ಭಗೆ ನೀತಿ ಮಾಡುತ್ತಿದ್ದಾರೆ. ಜೆಡಿಎಸ್ನವರು ಇಬ್ಭಗೆ ನೀತಿ ಮಾಡುತ್ತಿಲ್ಲ. ನಿನ್ನೆ ಪರಿಷತ್ನಲ್ಲಿ ಕಾಂಗ್ರೆಸ್ನ 9 ಮಂದಿ ಎಂಎಲ್‌ಸಿಗಳೂ ಗೈರಾಗಿದ್ದರು. ಜೆಡಿಎಸ್ನ್ನು ಮಾತ್ರ ಏಕೆ ತೆಗಳುತ್ತಿದ್ದೀರಾ?. ಈ ಭೂ ಸುಧಾರಣೆ ತಿದ್ದುಪಡಿ ಮಸೂದೆಯನ್ನು ಕಾಂಗ್ರೆಸ್ ಪ್ರಾರಂಭಿಸಿತ್ತು. ನಾವು ಅದಕ್ಕೆ ಅಂತ್ಯ ಹಾಡಿದ್ದೇವೆ ಎಂದು ಸಚಿವ ಅಶೋಕ್ ಸ್ಪಷ್ಟಪಡಿಸಿದರು.