ಕರ್ನಾಟಕ

karnataka

ETV Bharat / state

ಸುಳ್ಳು ಸುದ್ದಿಗಳನ್ನು ಪತ್ತೆ ಹಚ್ಚಲು ಹೊಸ ಕಾನೂನು ಜಾರಿಗೆ ತರುತ್ತಿಲ್ಲ, ರಾಜಕೀಯ ಸುದ್ದಿಗಳಿಗೆ ಫೇಕ್ ಚೆಕ್ ಇರೋದಿಲ್ಲ : ಸಚಿವ ಪ್ರಿಯಾಂಕ್ ಖರ್ಗೆ - Minister Priyanka Kharge

ಸುಳ್ಳು ಸುದ್ಧಿಗಳನ್ನು ಪತ್ತೆ ಹಚ್ಚಲು ಮತ್ತು ಸುಳ್ಳು ಸುದ್ಧಿಗಳನ್ನು ಹರಡುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಓವರ್​ ಸೈಟ್​ ಕಮಿಟಿ ರಚಿಸಲಾಗುವುದು ಎಂದು ಸಚಿವ ಪ್ರಿಯಾಂಕ್​ ಖರ್ಗೆ ಹೇಳಿದ್ದಾರೆ.

ಸುಳ್ಳು ಸುದ್ದಿಗಳನ್ನು ಪತ್ತೆ ಹಚ್ಚಲು ಹೊಸ ಕಾನೂನು ಜಾರಿಗೆ ತರುತ್ತಿಲ್ಲ, ರಾಜಕೀಯ ಸುದ್ದಿಗಳಿಗೆ ಫೇಕ್ ಚೆಕ್ ಇರೋದಿಲ್ಲ : ಸಚಿವ ಪ್ರಿಯಾಂಕ್ ಖರ್ಗೆ
minister-priyanka-kharge-meeting-for-strict-action-against-fake-news-spreading

By ETV Bharat Karnataka Team

Published : Sep 14, 2023, 10:42 PM IST

ಬೆಂಗಳೂರು :ಸುಳ್ಳು ಸುದ್ದಿಗಳನ್ನು ಪತ್ತೆ ಹಚ್ಚಲು ನಾವು ಯಾವುದೇ ಹೊಸ ಕಾನೂನು ಜಾರಿಗೆ ತರುತ್ತಿಲ್ಲ. ಇರುವ ಕಾನೂನಿಗೆ ತಿದ್ದುಪಡಿ ಮಾಡುತ್ತಿಲ್ಲ. ಸದ್ಯ ಲಭ್ಯವಿರುವ ಕಾನೂನಿನ ಚೌಕಟ್ಟಿನಲ್ಲೇ ನಾವು ಕೆಲಸ ಮಾಡುತ್ತೇವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐಟಿ, ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ವಿಧಾನಸೌಧದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ‘ಸುಳ್ಳು ಸುದ್ದಿ’ ಪತ್ತೆಗೆ ಸಂಬಂಧಿಸಿದಂತೆ ರಚಿಸಲಾಗಿರುವ ವಿಧಾನದ ಕುರಿತು ಪ್ರಾತ್ಯಕ್ಷಿಕೆ ನೀಡಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ಉಳಿಸಲು ಸುಳ್ಳು ಸುದ್ದಿಗಳಿಗೆ ಕಡಿವಾಣ ಹಾಕಲೇಬೇಕಿದೆ. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ, ಭಾರತೀಯ ಚುನಾವಣಾ ಆಯೋಗದ ಆಯುಕ್ತರು ಹಾಗೂ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಸುಳ್ಳು ಸುದ್ದಿಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಹೇಳಿದ್ದಾರೆ. ಆದರೆ, ಬಿಜೆಪಿಯವರು ಈ ವಿಚಾರದಲ್ಲಿ ಸರ್ಕಾರದ ವಿರುದ್ಧ ಅನಗತ್ಯ ಟೀಕೆ, ಟಿಪ್ಪಣಿಗಳನ್ನು ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಸುಳ್ಳು ಸುದ್ದಿ ತಡೆಯಲು ಅಗತ್ಯ ಕ್ರಮ :ಸಾಮಾಜಿಕ ಜಾಲತಾಣಗಳಲ್ಲಿ ಸಮಾಜದ ಸ್ವಾಸ್ಥ್ಯ ಹಾಳು ಮಾಡುವ, ಉದ್ದೇಶ ಪೂರ್ವಕವಾಗಿ ಆತಂಕ ಸೃಷ್ಟಿಸುವಂತಹ ಹಾಗೂ ಸರ್ಕಾರದ ವಿರುದ್ಧದ ‘ಸುಳ್ಳು ಸುದ್ದಿ’ಗಳನ್ನು ಪತ್ತೆ ಹಚ್ಚಲು ಕೈಗೊಳ್ಳಲಿರುವ ಕ್ರಮವು ಯಾವುದೇ ರಾಜಕೀಯ ದ್ವೇಷ ಅಥವಾ ಮಾಧ್ಯಮಗಳ ಧ್ವನಿಯನ್ನು ಅಡಗಿಸುವ ಉದ್ದೇಶವನ್ನು ಹೊಂದಿಲ್ಲ ಎಂದು ಸ್ಪಷ್ಟಪಡಿಸಿದರು.

ಪ್ರಸಕ್ತ ಸಾಲಿನ ಜನವರಿ ವೇಳೆಗೆ ಭಾರತದಲ್ಲಿ 60 ಕೋಟಿ ಜನ ಸಕ್ರಿಯ ಇಂಟರ್‌ನೆಟ್ ಬಳಕೆದಾರರಿದ್ದಾರೆ. ಅದರಲ್ಲಿ ಪ್ರಮುಖವಾಗಿ ವಾಟ್ಸ್​ಆ್ಯಪ್​​ ಬಳಕೆದಾರರು 54 ಕೋಟಿ, ಇನ್‌ಸ್ಟಾಗ್ರಾಂ ಬಳಕೆದಾರರು 52 ಕೋಟಿ, ಫೇಸ್‌ಬುಕ್ ಮೆಸೆಂಜರ್‌ನ 35 ಕೋಟಿ ಬಳಕೆದಾರರಿದ್ದಾರೆ. ಒಬ್ಬ ವ್ಯಕ್ತಿ ಪ್ರತಿನಿತ್ಯ ಸರಾಸರಿ 2 ಗಂಟೆ 36 ನಿಮಿಷಗಳ ಕಾಲ ಸಾಮಾಜಿಕ ಜಾಲತಾಣವನ್ನು ವೀಕ್ಷಿಸುತ್ತಾನೆ. ಇದು ಮಾಹಿತಿ ಪಡೆಯಲು ಹಾಗೂ ಹರಡಲು ವೇದಿಕೆಯಾಗಿದೆ ಎಂದು ಹೇಳಿದರು.

ಇಂತಹ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗುವಂತಹ ಸುದ್ದಿಗಳು, ಮಾಹಿತಿಗಳ ಕುರಿತು ಸರ್ಕಾರ ಹಾಗೂ ಸರ್ಕಾರಿ ಸಂಸ್ಥೆಗಳು ಪರಿಶೀಲಿಸಬೇಕು. ನಾಗರಿಕರಿಗೆ ಯಾವುದು ಸುಳ್ಳು ಸುದ್ದಿ, ಯಾವುದು ಸತ್ಯವಾದದ್ದು, ಯಾವುದು ಉದ್ದೇಶಪೂರ್ವಕವಾಗಿ ದಾರಿ ತಪ್ಪಿಸಲು ಹರಡುತ್ತಿರುವ ಸುದ್ದಿ ಎಂಬುದರ ಕುರಿತು ಮಾಹಿತಿ ನೀಡುವ ಕೆಲಸವನ್ನು ಮಾಡಬೇಕಿದೆ ಎಂದರು.

ಸಾಮಾಜಿಕ ಜಾಲತಾಣದ ಮೂಲಕ ಅಪಪ್ರಚಾರ :ಪ್ರಜಾಪ್ರಭುತ್ವದಲ್ಲಿ ಚುನಾವಣೆ ಮೂಲಕ ಸರ್ಕಾರ ಆಯ್ಕೆಯಾಗುವುದು. ನಾಗರಿಕರು ನಮಗೆ ಆಶೀರ್ವಾದ ಮಾಡಲು ಸರ್ಕಾರದ ಬಗ್ಗೆ ಅವರಿಗೆ ಒಳ್ಳೆಯ ಅಭಿಪ್ರಾಯ ಇರಬೇಕು. ಆದರೆ, ಇತ್ತೀಚಿಗೆ ಕೆಲವು ಪಕ್ಷ ಹಾಗೂ ಸಂಸ್ಥೆಗಳು ಸರ್ಕಾರದ ಬಗ್ಗೆ ಸತ್ಯಕ್ಕೆ ದೂರವಾದ ವಿಚಾರಗಳನ್ನು ಮುಂದಿಟ್ಟು ಅಪಪ್ರಚಾರ ಮಾಡುತ್ತಿವೆ. ಇದಕ್ಕೆ ಸಾಮಾಜಿಕ ಜಾಲತಾಣಗಳನ್ನು ಬಳಕೆ ಮಾಡಿಕೊಳ್ಳುತ್ತಿವೆ. ಸುಳ್ಳು ಸುದ್ದಿಗಳ ಬಗ್ಗೆ ಸಾರ್ವಜನಿಕರು ನೀಡುವಂತಹ ದೂರುಗಳನ್ನು ಪರಿಶೀಲನೆ ಮಾಡುತ್ತೇವೆ. ಸುಳ್ಳು ಸುದ್ದಿಗಳನ್ನು ಪತ್ತೆ ಹಚ್ಚುವಂತಹ ಹಲವಾರು ಸಂಸ್ಥೆಗಳಿವೆ. ಅವರು ನಮ್ಮೊಂದಿಗೆ ಕೈ ಜೋಡಿಸುವಂತೆ ಕರೆ ನೀಡುತ್ತೇವೆ. ಸಮಾಜದಲ್ಲಿ ದ್ವೇಷದ ಮನೋಭಾವನೆ ಬೆಳೆಯಲು ಸುಳ್ಳು ಸುದ್ದಿಗಳು ಕಾರಣ ಎಂದು ಶೇ. 78 ರಷ್ಟು ಮಂದಿ ಹೇಳಿದ್ದಾರೆ. ಅದೇ ರೀತಿ, ಶೇ.88 ರಷ್ಟು ಯುವಕರು ಇದನ್ನು ಒಪ್ಪಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಸುಳ್ಳು ಸುದ್ದಿಗಳನ್ನು ಪತ್ತೆ ಹಚ್ಚಲು ಕೆನಡಾ, ಡೆನ್ಮಾರ್ಕ್, ಸ್ವೀಡನ್ ಹಾಗೂ ದಕ್ಷಿಣ ಕೊರಿಯಾದಲ್ಲಿ ಕಾರ್ಯಪಡೆಯನ್ನು ರಚನೆ ಮಾಡಲಾಗಿದೆ. ಬೆಲ್ಜಿಯಂ ಹಾಗೂ ಇಟಲಿಯಲ್ಲಿ ವೇದಿಕೆ ರಚಿಸಲಾಗಿದೆ. ನೆದರ್‌ ಲ್ಯಾಂಡ್ ಸೇರಿದಂತೆ ಇನ್ನಿತರ ದೇಶಗಳಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಮಾಡಲಾಗುತ್ತದೆ. ನಮ್ಮ ರಾಜ್ಯದಲ್ಲಿ ಸುಳ್ಳು ಸುದ್ದಿಯನ್ನು ಪತ್ತೆ ಹಚ್ಚಿದಾಗ ಅದರ ಮೂಲವನ್ನು ಸಾರ್ವಜನಿಕವಾಗಿ ತಿಳಿಸುತ್ತೇವೆ. ಯಾವುದಾದರೂ ಸುದ್ದಿಗೆ ಮೂಲ ಇಲ್ಲದಿದ್ದರೆ ಅದನ್ನು ತಿಳಿಸುತ್ತೇವೆ. ಸುಳ್ಳು ಸುದ್ದಿ ಪತ್ತೆ ಮಾಡಲು ಓವರ್‌ಸೈಟ್ ಕಮಿಟಿ ರಚನೆ ಮಾಡಲು ಉದ್ದೇಶಿಸಲಾಗಿದೆ ಎಂದರು.

ಇದರಲ್ಲಿ ಐಟಿ, ಬಿಟಿ ಇಲಾಖೆಯ ಮುಖ್ಯಸ್ಥರು, ಹಿರಿಯ ಪೊಲೀಸ್ ಅಧಿಕಾರಿ, ವಾರ್ತಾ ಇಲಾಖೆಯ ಪ್ರತಿನಿಧಿಗಳು, ಕೆಐಟಿಎಸ್ ವ್ಯವಸ್ಥಾಪಕ ನಿರ್ದೇಶಕರು, ಐಐಎಸ್ಸಿ ಡೀನ್, ಹೆಚ್ಚುವರಿ ಅಡ್ವೊಕೇಟ್ ಜನರಲ್, ಸೈಬರ್ ಸುರಕ್ಷತಾ ಕೇಂದ್ರದ ಮುಖ್ಯಸ್ಥರು ಹಾಗೂ ನಾಗರಿಕ ಸಮಾಜದ ಪ್ರತಿನಿಧಿ ಇರುತ್ತಾರೆ ಎಂದು ತಿಳಿಸಿದರು.

ಸುಳ್ಳು ಸುದ್ದಿ ಹರಡುವವರ ವಿರುದ್ಧ ಕ್ರಮ :ಓವರ್‌ಸೈಟ್ ಕಮಿಟಿಯು ನೀಡುವ ವರದಿ, ಅಭಿಪ್ರಾಯದಂತೆ ಸುಳ್ಳು ಸುದ್ದಿ ಹರಡಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಇಲ್ಲಿ ಯಾರನ್ನೂ ಗುರಿಯಾಗಿಸುತ್ತಿಲ್ಲ. ನಮ್ಮ ವಿರುದ್ಧ ಆರೋಪ ಮಾಡುತ್ತಿರುವ ಬಿಜೆಪಿಯವರು ತಮ್ಮ ಕಚೇರಿಯಲ್ಲಿರುವ ಒಂದು ವಿಭಾಗವನ್ನು ಮುಚ್ಚಿದರೆ ಸಾಕು, ಸುಳ್ಳು ಸುದ್ದಿ ಸೃಷ್ಟಿಯಾಗುವ ಪ್ರಮಾಣ ಕಡಿಮೆಯಾಗಿ ಬಿಡುತ್ತದೆ ಎಂದು ಸಚಿವರು ವಿವರಿಸಿದರು.

ಇದನ್ನೂ ಓದಿ :ಒಳ್ಳೆಯ ಕೆಲಸ ಮಾಡಿದ್ರೆ ಪ್ರಶಸ್ತಿ..ತಪ್ಪು ಮಾಡಿದರೆ ಕ್ರಿಮಿನಲ್ ಕೇಸ್ : ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಎಚ್ಚರಿಕೆ

ABOUT THE AUTHOR

...view details