ಬೆಂಗಳೂರು: ತೀವ್ರ ಬರಗಾಲ ಪರಿಸ್ಥಿತಿ ಹಿನ್ನೆಲೆ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಈಗ ನಿಗದಿ ಪಡಿಸಿರುವ 100 ದಿನಗಳ ಉದ್ಯೋಗ ಅವಧಿಯನ್ನು 150 ದಿನಗಳಿಗೆ ಏರಿಸಬೇಕು. 1,300 ಲಕ್ಷ ಮಾನವ ದಿನಗಳನ್ನು 1,800 ಲಕ್ಷ ಮಾನವ ದಿನಗಳಿಗೆ ಏರಿಕೆ ಮಾಡಬೇಕೆಂದು ಕೋರಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಗಿರಿರಾಜ್ ಸಿಂಗ್ ಅವರಿಗೆ ಪತ್ರ ಬರೆದಿದ್ದಾರೆ.
ಕರ್ನಾಟಕದಲ್ಲಿ ಈ ಬಾರಿ ಮುಂಗಾರು ಮಳೆಯ ತೀವ್ರ ಕೊರತೆಯಿಂದಾಗಿ ಬರ ಪರಿಸ್ಥಿತಿ ಎದುರಾಗಿದೆ. ರಾಜ್ಯ ಸರ್ಕಾರ ಈಗಾಗಲೇ 31 ಜಿಲ್ಲೆಗಳಲ್ಲಿನ 195 ತಾಲೂಕು ಬರಪೀಡಿತ ಪ್ರದೇಶಗಳೆಂದು ಘೋಷಿಸಿರುವ ಹಿನ್ನೆಲೆ ಕರ್ನಾಟಕ ರಾಜ್ಯವು ನರೇಗಾ ಕಾರ್ಯಕ್ರಮದಡಿ ಉದ್ಯೋಗ ಸೃಷ್ಟಿಯಲ್ಲಿ ಮತ್ತು ವೈಯಕ್ತಿಕ ಆಸ್ತಿಗಳ ಸೃಷ್ಟಿಯಲ್ಲಿ ಮುಂದಿದ್ದು, ಪ್ರಸಕ್ತ ಹಣಕಾಸು ವರ್ಷ ರಾಜ್ಯದಲ್ಲಿ 13 ಕೋಟಿ ಮಾನವ ದಿನಗಳನ್ನು ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ. ಇದುವರೆಗೆ 8.48 ಕೋಟಿ ಮಾನವ ದಿನಗಳ ಉದ್ಯೋಗವನ್ನು ಸೃಷ್ಟಿಸಲಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.