ಕರ್ನಾಟಕ

karnataka

ETV Bharat / state

PSI ನೇಮಕಾತಿ ಅಕ್ರಮ ಬಗ್ಗೆ ಹೈಕೋರ್ಟ್ ತೀರ್ಪು, ಹಿಂದಿನ ಸಚಿವರಿಗೆ ಛೀಮಾರಿ ಹಾಕಿದಂತೆ: ಸಚಿವ ಪ್ರಿಯಾಂಕ್ ಖರ್ಗೆ

ಪಿಎಸ್​ಐ ನೇಮಕಾತಿ ಪರೀಕ್ಷಾ ಅಕ್ರಮ ಪ್ರಕರಣದಲ್ಲಿ ಕರ್ನಾಟಕದ ಉಚ್ಚ ನ್ಯಾಯಾಲಯವು ನೀಡಿರುವ ತೀರ್ಪು ಅತ್ಯಂತ ಸ್ವಾಗತಾರ್ಹ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ತಿಳಿಸಿದ್ದಾರೆ.

ಸಚಿವ ಪ್ರಿಯಾಂಕ್ ಖರ್ಗೆ
ಸಚಿವ ಪ್ರಿಯಾಂಕ್ ಖರ್ಗೆ

By ETV Bharat Karnataka Team

Published : Nov 10, 2023, 6:53 PM IST

Updated : Nov 10, 2023, 7:27 PM IST

ಬೆಂಗಳೂರು : ಕರ್ನಾಟಕದ ಉಚ್ಚ ನ್ಯಾಯಾಲಯವು PSI ನೇಮಕಾತಿ ಪರೀಕ್ಷಾ ಅಕ್ರಮ ಪ್ರಕರಣದಲ್ಲಿ ನೀಡಿರುವ ತೀರ್ಪು ಅತ್ಯಂತ ಸ್ವಾಗತಾರ್ಹ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ತಿಳಿಸಿದ್ದಾರೆ.

ಈ ಸಂಬಂಧ ಎಕ್ಸ್ ಪೋಸ್ಟ್ ಮಾಡಿರುವ ಅವರು, ಹಿಂದೆ ನಡೆದಿರುವ 545 ಪಿಎಸ್ಐ ನೇಮಕಾತಿ ಪರೀಕ್ಷೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಲು ಆದೇಶಿಸಿ ಸ್ವತಂತ್ರ ಸಂಸ್ಥೆಯಿಂದ ಮತ್ತೆ ಮರು ಪರೀಕ್ಷೆ ನಡೆಸಬೇಕು ಎಂದು ಆದೇಶಿಸಿರುವುದು ಹಿಂದಿನ ಬಿಜೆಪಿ ಸರ್ಕಾರದ ದುಷ್ಟ ಆಡಳಿತಕ್ಕೆ ಉಚ್ಚ ನ್ಯಾಯಾಲಯದ ಸಾಕ್ಷಿ ಮುದ್ರೆಯಾಗಿದ್ದು, ಪರೀಕ್ಷೆಯಲ್ಲಿ ಅಕ್ರಮ ನಡೆದೇ ಇಲ್ಲ ಎಂದು ಹಲವಾರು ಬಾರಿ ಸದನಕ್ಕೆ ವಾದಿಸಿದ್ದ ಹಿಂದಿನ ಬಿಜೆಪಿ ಸರ್ಕಾರದ ಆಡಳಿತ ವೈಫಲ್ಯಕ್ಕೆ ಹಾಗೂ ಪ್ರಕರಣವನ್ನು ಹಳ್ಳ ಹಿಡಿಸಲು ತನಿಖೆ ಮೇಲೆ ಪ್ರಭಾವ ಬೀರಿದ ಮತ್ತು ಆರೋಪಿಗಳನ್ನು ರಕ್ಷಿಸಲು ಪ್ರಯತ್ನಿಸಿದ್ದ ಅಂದಿನ ಬಿಜೆಪಿ ಸಚಿವರಿಗೆ ಛೀಮಾರಿ ಹಾಕಿದಂತೆ ಎಂದು ಟೀಕಿಸಿದ್ದಾರೆ.

ಆಗಿರುವ ಅಕ್ರಮದ ಸಂಪೂರ್ಣ ಚಿತ್ರಣವನ್ನು ನ್ಯಾಯಾಲಯಕ್ಕೆ ಸಮರ್ಥವಾಗಿ ಮನವರಿಕೆ ಮಾಡಿಸಿ 56,000ಕ್ಕೂ ಹೆಚ್ಚು ಆಕಾಂಕ್ಷಿಗಳ ಪರವಾಗಿ ತೀರ್ಪು ಬರುವಂತೆ ಮಾಡಿರುವ ನಮ್ಮ ಸರ್ಕಾರದ ವಕೀಲರ ತಂಡಕ್ಕೂ ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸುತ್ತೇನೆ ಎಂದಿದ್ದಾರೆ. ಈ ಗೆಲುವು ಬಿಜೆಪಿಯ ಭ್ರಷ್ಟ ಆಡಳಿತದ ವಿರುದ್ಧ ಸಿಡಿದೆದ್ದು ಸಂಘಟಿತರಾಗಿ, ಪ್ರಕರಣವನ್ನು ಮುನ್ನಲೆಗೆ ತರಲು ಹೋರಾಡಿದ ಎಲ್ಲ ನ್ಯಾಯಯುತ ಪಿಎಸ್ಐ ಉದ್ಯೋಗ ಆಕಾಂಕ್ಷಿಗಳ ಗೆಲುವಾಗಿದೆ ಎಂದಿದ್ದಾರೆ.

ಪಿಎಸ್​ಐ ಮರು ಪರೀಕ್ಷೆಗೆ ಹೈಕೋರ್ಟ್ ಆದೇಶ ಸ್ವಾಗತಾರ್ಹ : ಪಿಎಸ್​ಐ ಮರು ಪರೀಕ್ಷೆ ನಡೆಸಲು ಹೈಕೋರ್ಟ್ ನೀಡಿರುವ ತೀರ್ಪುನ್ನು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಸ್ವಾಗತ ಮಾಡಿದ್ದಾರೆ. ತೀರ್ಥಹಳ್ಳಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಇದ್ದಾಗ ಪಿಎಸ್ಐ ಹುದ್ದೆಗಳಿಗಾಗಿ ನಡೆದ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಹೇಳಿ‌ ನಾವೇ ಅದನ್ನು ತನಿಖೆಗೆ ಒಳಪಡಿಸಿದ್ದೆವು.

ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ

ಸಿಓಡಿ ತಂಡ ಅಕ್ರಮದಲ್ಲಿ ಭಾಗಿಯಾದವರನ್ನು ಬಂಧಿಸಿ ತನಿಖೆಗೆ ಒಳಪಡಿಸಿ, ಕಾನೂನು ಕ್ರಮ ಜರುಗಿಸಿತ್ತು. ಆಗ ಯಾರು ಆಯ್ಕೆಯಾಗಿದ್ದರು. ಅವರು ಕೋರ್ಟ್​ಗೆ ಹೋಗಿದ್ರು. ಕೋರ್ಟ್ ನಮ್ಮ ಸರ್ಕಾರದ ಆದೇಶವನ್ನು ಎತ್ತಿ‌ ಹಿಡಿದಿದೆ. ಪುನರ್ ಪರೀಕ್ಷೆಯಾಗಬೇಕು. ಪರೀಕ್ಷೆ ಸಹ ಸ್ವತಂತ್ರ ಸಂಸ್ಥೆಯಿಂದ ನಡೆಸಬೇಕೆಂದು ತಿಳಿಸಿದೆ. ಹೈಕೋರ್ಟ್ ವಿಭಾಗೀಯ‌ ಪೀಠ ನೀಡಿದ ಆದೇಶವನ್ನು ನಾವು ಸ್ವಾಗತ ಮಾಡುತ್ತೇನೆ. ಇದು ಸಮಾಧಾನ ಕೊಟ್ಟಿದೆ. ಕಷ್ಟಪಟ್ಟು ಓದಿದ ಅಭ್ಯರ್ಥಿಗಳಿಗೆ ನ್ಯಾಯ ಸಿಗಬೇಕೆಂದು ನಮ್ಮ ವಾದವಾಗಿದೆ ಎಂದು ಹೇಳಿದರು.

ಇದನ್ನೂ ಓದಿ:ಪಿಎಸ್‌ಐ ನೇಮಕಾತಿ ಹಗರಣ: ಮರು ಪರೀಕ್ಷೆ ಪ್ರಶ್ನಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

Last Updated : Nov 10, 2023, 7:27 PM IST

ABOUT THE AUTHOR

...view details