ಬೆಂಗಳೂರು : ಬಿಜೆಪಿಯವರು ಮೊದಲೇ ಮಾತನಾಡಿದ್ದರೆ ಪ್ರತಿಪಕ್ಷದ ನಾಯಕರು ಸಿಗುತ್ತಿದ್ದರೇನೋ, ಹಲವು ನಾಯಕರು ನನ್ನ ರಾಜೀನಾಮೆಗೆ ಆಗ್ರಹಿಸುತ್ತಿದ್ದಾರೆ. ಅವರ ಮಾತು ಕೇಳಿ ಸಂತೋಷವಾಗಿದೆ. ಅವರು ನನಗೆ ಖೆಡ್ಡಾ ತೋಡಲು ಹೊರಟಿದ್ದಾರೆ. ಆದರೆ, ಅವರೇ ಖೆಡ್ಡಾಕ್ಕೆ ಬೀಳುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಲೇವಡಿ ಮಾಡಿದ್ದಾರೆ.
ವಿಧಾನಸೌಧದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅವರೇ ತಿಂದು ತೇಗಿದವರು. ನನ್ನ ರಾಜೀನಾಮೆಗೆ ಆಗ್ರಹಿಸುತ್ತಿದ್ದಾರೆ. ಬಿಜೆಪಿಯವರದ್ದು ಸುಳ್ಳಿನ ಕಾರ್ಖಾನೆ. ಕಿಯೋನಿಕ್ಸ್ನಲ್ಲಿ ದೊಡ್ಡ ಅಕ್ರಮ ಅನ್ನುತ್ತಿದ್ದಾರೆ. ಪರ್ಸೆಂಟೇಜ್ ಇಲ್ಲದೇ ಕೆಲಸ ಆಗಲ್ಲ ಅಂತಿದ್ದಾರೆ. ಬಿಲ್ ಕೊಟ್ಟಿಲ್ಲ ಅಂತ ಬಿಜೆಪಿಯವರು ಹೇಳ್ತಾರೆ. ಎಷ್ಟು ಪೆಂಡಿಂಗ್ ಇದೆ ಅಂತ ಅವರಿಗೆ ಗೊತ್ತಿದೆಯಾ?. ಬರೀ 16 ಕೋಟಿ ರೂ. ಮಾತ್ರ ಪೆಂಡಿಂಗ್ ಇದೆ. ಮ್ಯಾನ್ಯುವಲ್ ಬಿಲ್ಲಿಂಗ್ ಆಗಿದೆ. ಅದನ್ನು ಚೆಕ್ ಮಾಡುವುದಕ್ಕೆ ಪೆಂಡಿಂಗ್ ಇಡಲಾಗಿದೆ ಎಂದರು.
ಮೂರನೇ ಪಾರ್ಟಿ ಪರಿಶೀಲನೆ ಆಗದೇ ಉಳಿದಿದೆ. ಆ ಬಿಲ್ ಮಾಡಬೇಡಿ ಅಂತ ನಾನೇ ಹೇಳಿದ್ದೇನೆ. ಆರ್ಥಿಕ ಇಲಾಖೆಯ ಸ್ಪಷ್ಟ ಆದೇಶವೇ ಇದೆ. ನಾನು ಪರಿಶೀಲಿಸದೇ ಹಣ ಹಾಗೆ ಕೊಡಬೇಕಾ?. ಜನರ ತೆರಿಗೆ ಹಣಕ್ಕೆ ಬೆಲೆ ಇಲ್ಲವೇ?. ಜನರ ತೆರಿಗೆ ಹಣ ಹಾಗೆಯೇ ಕೊಟ್ಟುಬಿಡಬೇಕಾ?. ಮೂರು ವರ್ಷದಿಂದ ವ್ಯಾಪಾರ ಇಟ್ಟಿದ್ದರು. ಅದನ್ನ ನಾವು ಬಂದ ಮೇಲೆ ಕಠಿಣ ಮಾಡಿದ್ದೇವೆ. ಅದಕ್ಕೆ ಬಿಜೆಪಿಯವರು ಈಗ ಕುಣಿಯುತ್ತಿದ್ದಾರೆ. ನಾವು ಕಠಿಣ ಮಾಡುತ್ತಿರುವುದಕ್ಕೆ ಅವರಿಗೆ ಕಷ್ಟವಾಗುತ್ತಿದೆ ಎಂದು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಕಿಯೋನಿಕ್ಸ್ನಲ್ಲಿ 500 ಕೋಟಿ ರೂ. ಅವ್ಯವಹಾರ :ಅಕೌಂಟೆಂಟ್ ಜನರಲ್ ರಿಪೋರ್ಟ್ನಂತೆ ಮಾಡುತ್ತಿದ್ದೇವೆ. ಅವರ ಆಡಿಟ್ ಪ್ರಕಾರವೇ ನಾವು ಕೆಲಸ ಮಾಡುತ್ತಿದ್ದೇವೆ. ಕಿಯೋನಿಕ್ಸ್ನಲ್ಲಿ 500 ಕೋಟಿ ರೂ. ಅವ್ಯವಹಾರ ಆಗಿದೆ. ಅದನ್ನು ಆಡಿಟ್ನಲ್ಲಿ ಎತ್ತಿ ಹಿಡಿಯಲಾಗಿದೆ. 2019 ರಿಂದ 2023 ರವರೆಗೆ ಕಿಯೋನಿಕ್ಸ್ನಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿದರು.
ನನ್ನ ರಾಜೀನಾಮೆಗೆ ಇವರು ಕೇಳುತ್ತಿದ್ದರಲ್ಲವೇ?, ಇವರು ಎಷ್ಟು ಅಕ್ರಮ ನಡೆಸಿದ್ದಾರೆ ಗೊತ್ತಿದೆಯಾ?. ಪರಿಕರಗಳ ಖರೀದಿಯಲ್ಲಿ ಅಕ್ರಮವೆಸಗಿದ್ದಾರೆ. ಮಾರ್ಕೆಟ್ ದರಕ್ಕಿಂತ ಹೆಚ್ಚು ಕೊಟ್ಟು ಖರೀದಿಸಿದ್ದಾರೆ. 1 ಲಕ್ಷ ಇರೋದಕ್ಕೆ 5 ಲಕ್ಷ ರೂ. ಕೊಟ್ಟು ಖರೀದಿಸಿದ್ದಾರೆ. ಮೂರು ಸಾವಿರ ಬೆಲೆ ಬಾಳುವುದನ್ನು 60 ರೂ.ಗೆ ಮಾರಾಟ ಮಾಡಿದ್ದಾರೆ. ಕಂಪ್ಯೂಟರ್ 30 ಸಾವಿರ ರೂ. ಇದ್ದರೆ 80 ಸಾವಿರ ಬೆಲೆ ಕೊಟ್ಟು ಖರೀದಿಸಿದ್ದಾರೆ. ಇನ್ನು ಸಿಸಿಟಿವಿಗಳನ್ನು ಸಹ ದುಪ್ಪಟ್ಟು ಕೊಟ್ಟು ಖರೀದಿಸಲಾಗಿದೆ ಎಂದು ಉದಾಹರಣೆ ಸಹಿತ ವಿವರಿಸಿದರು.
ಜಸ್ಟೀಸ್ ನಾಗಮೋಹನ್ ದಾಸ್ ನೇತೃತ್ವದಲ್ಲಿ ತನಿಖೆ :ನಮ್ಮದು ಆಳುವ ಸರ್ಕಾರ ಅಲ್ಲ. ಆಲಿಸುವ ಸರ್ಕಾರ. ನಮ್ಮ ಅಧಿಕಾರಿಗಳನ್ನು ಹೇಗೆ ಹೆದರಿಸುತ್ತಾರೆ. ಅಧಿಕಾರಿಗಳಿಗೆ ಜೀವ ಬೆದರಿಕೆ ಹಾಕುತ್ತಿದ್ದಾರೆ. ಕಿಯೋನಿಕ್ಸ್ ಪಬ್ಲಿಕ್ಗೆ ಸೇರಿದ್ದು, ಇದರ ಅವ್ಯವಹಾರ ನಾವು ಕೇಳಬೇಡವೇ?. ನಾವು ಆಡಿಟ್ ಮಾಡಿಸಿದರೆ ಇನ್ನೆಷ್ಟು ಸಿಗಬಹುದು. ಅಕ್ರಮದ ಬಗ್ಗೆ ನಾವು ಆಡಿಟ್ ಮಾಡಿಸ್ತೇವೆ. ಟೆಂಡರ್ ಇನ್ವೈಟ್ ಕಮಿಟಿ ಮಾಡಿದ್ದೇವೆ. ಸ್ಕೂಟಿನಿ ಕಮಿಟಿಯನ್ನು ನಾವು ರಚಿಸಿದ್ದೇವೆ. ಪ್ರತಿಯೊಂದು ಕಾನೂನು ಪ್ರಕಾರ ಮಾಡಲು ಹೊರಟ್ಟಿದ್ದೇವೆ. ಇದು ಬಿಜೆಪಿಯವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಕಿಯೋನಿಕ್ಸ್ನಲ್ಲಿ ನಡೆದಿರುವ ಅವ್ಯವಹಾರ ಪ್ರಕರಣವನ್ನು ತನಿಖೆಗೆ ಕೊಡುತ್ತೇವೆ. ಜಸ್ಟೀಸ್ ನಾಗಮೋಹನ್ ದಾಸ್ ನೇತೃತ್ವದಲ್ಲಿ ತನಿಖೆ ಮಾಡಿಸುತ್ತೇವೆ. ತನಿಖೆಯಲ್ಲಿ ಯಾರದ್ದೇ ತಪ್ಪಿದ್ದರೂ ಕ್ರಮ ಕೈಗೊಳ್ಳಲಿ ಎಂದು ಹೇಳಿದರು.
ಪಿಎಸ್ಐ ಪ್ರಕರಣದಲ್ಲಿ ಏನು ಮಾಡಿದ್ರು. ಅಕ್ರಮವೇ ಆಗಿಲ್ಲ ಅಂದ್ರು. ಸದನದಲ್ಲೇ ತಪ್ಪು ಉತ್ತರ ಕೊಟ್ಟರು. ಆರೋಪಿಯನ್ನ ಯಾರು ಬಿಡಿಸಿದ್ದು ಹೇಳಿ ಎಂದು ವಾಗ್ದಾಳಿ ನಡೆಸಿದ ಪ್ರಿಯಾಂಕ್ ಖರ್ಗೆ, ಆರ್ ಡಿ ಪಾಟೀಲ್ ಎಸ್ಕೇಪ್ ವಿಚಾರದಲ್ಲಿ ಅಧಿಕಾರಿಗಳ ತಪ್ಪಿದ್ದರೂ ಕ್ರಮ ಜರುಗಿಸುತ್ತೇವೆ. ಪೊಲೀಸರು ಮಫ್ತಿಯಲ್ಲಿ ಹೋಗಿದ್ದರು. ಡಿ. ಆರ್ ಪಾಟೀಲ್ ಬಂಧನಕ್ಕೆ ಹೋಗಿದ್ದರು. ಅವರು ಎಸ್ಕೇಪ್ ಆಗಿದ್ದರು. ನಾನು ಯಾರನ್ನೂ ಡಿಫೆಂಡ್ ಮಾಡಲ್ಲ. ಒದ್ದು ಒಳಗೆ ಹಾಕುತ್ತೇವೆ. ಇನ್ನೊಂದು ಆರು ತಿಂಗಳು ಕಾಯಿರಿ, ಯಾರು ಇದ್ದಾರೆ ಎಲ್ಲರ ಮೇಲೆ ಕ್ರಮ ಜರುಗಿಸ್ತೇವೆ. ನಾವು ಮೈಮೇಲೆ ಎಣ್ಣೆ ಹಾಕಿ ತಪ್ಪಿಸಿಕೊಳ್ಳುವುದಿಲ್ಲ. ಯಾವುದಕ್ಕೂ ನಾವು ಹೆದರಲ್ಲ. ಎಲ್ಲವನ್ನೂ ನಾವು ಹೊರಗೆಳೆಯುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ:ಕೆಇಎ ಪರೀಕ್ಷೆ ಅಕ್ರಮದ ಆರೋಪಿ ಆರ್ ಡಿ ಪಾಟೀಲ್ ಬಂಧನಕ್ಕೆ ಕ್ರಮ: ಸಚಿವ ಪ್ರಿಯಾಂಕ್ ಖರ್ಗೆ