ಬೆಂಗಳೂರು: ಬಿಜೆಪಿ ಸೆಂಟ್ರಲ್ ಲೀಡರ್ಶಿಪ್ ರಾಜ್ಯ ನಾಯಕರನ್ನು ಕ್ಯಾರೇ ಮಾಡ್ತಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ. ನಗರದಲ್ಲಿಂದು ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಮೊಸರಲ್ಲಿ ಕಲ್ಲು ಹುಡುಕುವುದರಲ್ಲಿ ಎಕ್ಸಪರ್ಟ್. ರಾಜ್ಯಕ್ಕೆ ಬಂದಿದ್ದು ದೇಶದ ಪ್ರಧಾನಿಯೇ ಹೊರತು ಬಿಜೆಪಿ ಪ್ರಧಾನಿ ಅಲ್ಲ. ಶಿಷ್ಟಾಚಾರವನ್ನು ಯಾವುದೇ ಸರ್ಕಾರವೂ ಪಾಲನೆ ಮಾಡಬೇಕಾಗುತ್ತದೆ. ನಮ್ಮ ಸರ್ಕಾರವೇ ಪ್ರಧಾನಿ ಕಚೇರಿಗೆ ಪತ್ರ ಬರೆದಿತ್ತು. ಪ್ರಧಾನಿ ರಿಸೀವ್ ಮತ್ತು ಸೆಂಡ್ ಆಫ್ಗೆ ಲೈನ್ ಅಪ್ ಕಳಿಸಲಾಗಿತ್ತು ಎಂದು ಹೇಳಿದರು.
ರಾಜ್ಯಪಾಲರು, ಮುಖ್ಯಮಂತ್ರಿಗಳು, ಸ್ಥಳೀಯ ಸಂಸದರ ಲೈನ್ ಅಪ್ ಮಾಹಿತಿ ಕಳಿಸಲಾಗಿತ್ತು. ಬಳಿಕ ಪ್ರಧಾನಿ ಕಚೇರಿಯಿಂದ ನಮಗೆ ವಾಪಸ್ ಉತ್ತರ ಬಂದಿತ್ತು. ನಮ್ಮ ಶಿಷ್ಟಾಚಾರದ ಪತ್ರವನ್ನು ಕೇಂದ್ರ ತಿರಸ್ಕಾರ ಮಾಡಿ ಅವರೇ ಯಾರು ಯಾರು ಇರಬೇಕು ಎಂಬುದನ್ನು ಕಳಿಸಿದ್ದರು. ಬಿಜೆಪಿಯವರು ಆರೋಪ ಮಾಡುವ ಮೊದಲು ಅಧ್ಯಯನ ಮಾಡುವುದು ಒಳ್ಳೆಯದು. ಬಿಜೆಪಿ ಈ ಬಗ್ಗೆ ಸುಖಾ ಸುಮ್ಮನೆ ಆರೋಪ ಮಾಡುತ್ತಿದೆ ಎಂದು ಕಿಡಿ ಕಾರಿದರು.
ಪ್ರಧಾನಿ ಭಾಷಣ ತುಣುಕು ಪ್ರದರ್ಶಿಸಿದ ಖರ್ಗೆ:ಇದೇ ವೇಳೆ ಪ್ರಧಾನಿಗಳ ಭಾಷಣದ ತುಣುಕು ಕೇಳಿಸಿದ ಪ್ರಿಯಾಂಕ್ ಖರ್ಗೆ, ಬಿಜೆಪಿ ಕಾರ್ಯಕರ್ತರಿಗೆ ವಿಷಯ ಗೊತ್ತಿದೆ. ಪ್ರಧಾನಿ ಮಾತನಾಡುವಾಗ ನಿಮ್ಮ ಗಮನ ಎಲ್ಲಿತ್ತು. ಶಿಷ್ಟಾಚಾರ ಉಲ್ಲಂಘನೆ ಬಿಜೆಪಿ ಪ್ರಧಾನಿಗಲ್ಲ, ಶಿಷ್ಟಾಚಾರ ಉಲ್ಲಂಘನೆ ದೇಶದ ಪ್ರಧಾನಿಗೆ ಇರುತ್ತದೆ. ಬಿಜೆಪಿ ಐಟಿ ಸೆಲ್ ಮಾತು ಕೇಳುವುದು ಬಿಟ್ಟು ಅಧ್ಯಯನ ಮಾಡಲಿ. Need Not be Disturbed ಅಂತ ಪ್ರಧಾನಿ ಕಚೇರಿಯಿಂದಲೇ ಪತ್ರ ಬಂದಿದೆ. ಬಿಜೆಪಿಯವರು ಹತಾಶರಾಗಿಬಿಟ್ಟಿದ್ದಾರೆ. ಏನಾದರೂ ಮಾಡಿ ಅವರ ಹೆಸರು ಚಾಲ್ತಿಯಲ್ಲಿಡುವುದಕ್ಕೆ ಈ ರೀತಿ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ನಮ್ಮ ಮಾತನ್ನಂತೂ ಬಿಜೆಪಿಯವರು ಕೇಳುವುದಿಲ್ಲ. ಕನಿಷ್ಠ ಪ್ರಧಾನಿಯವರ ಮಾತನ್ನಾದರೂ ಕಿವಿಗೊಟ್ಟು ಕೇಳಲಿ. ಬಿಜೆಪಿ ನಾಯಕರ ಸ್ಥಿತಿ ಏನಾಗಿದೆ ಅಂದರೆ ಫಸ್ಟ್ ಡೇ ಫಸ್ಟ್ ಶೋ ತರಹ ಆಗಿದೆ. ಸಿನಿಮಾ ಹೀರೊಗೆ ಮುಖ ತೋರಿಸಲು ಅಭಿಮಾನಿಗಳು ಮಾಡ್ತಾರಲ್ಲ ಹಾಗಿದೆ. ಬ್ಯಾರಿಕೇಡ್ ಮೇಲೆ ಹತ್ತಿ ಮುಖ ತೋರಿಸೋದಕ್ಕೆ ಹೊರಟಿದ್ದಾರೆ. ಸಾಮಾನ್ಯ ಡಿಗ್ನಿಟಿ ಕೂಡ ಇಟ್ಟುಕೊಂಡಿಲ್ಲ ಎಂದು ಕಾರ್ಯಕರ್ತರೇ ಬೈತಿದ್ದಾರೆ. ಮಾಜಿ ಸಚಿವರು ಹೇಗೆಲ್ಲ ಮಾಡ್ತಾ ಇದ್ದರು ನೋಡಿ. ಪ್ರಧಾನ ಮಂತ್ರಿಗಳು ಇವರನ್ನು ಗುರುತೇ ಹಿಡಿಯುವುದಿಲ್ಲ. ಪ್ರಧಾನಿಯವರಿಗೆ ಇವರ ಮುಖ ಪರಿಚಯವೇ ಇಲ್ಲ. ಬಿಜೆಪಿ ಕೇಂದ್ರ ನಾಯಕರಿಗೆ ರಾಜ್ಯದ ನಾಯಕರ ಬಗ್ಗೆ ಅಸಡ್ಡೆ ಇದೆ ಎಂದು ಖರ್ಗೆ ದೂರಿದರು.
ವಿರೋಧ ಪಕ್ಷದ ನಾಯಕನೇ ಇಲ್ಲ ಅಂದ್ರೆ ಕನ್ನಡಿಗರ ಅಭಿಮಾನಕ್ಕೆ ಧಕ್ಕೆ ಆಗ್ತಿಲ್ವಾ?. ಚಂದ್ರಯಾನವೇ ಹೋಗಿ ಮುಟ್ಟಿಬಿಟ್ಟಿದೆ. ಆದರೆ ದೆಹಲಿಯಿಂದ ಇನ್ನೂ ವಿಪಕ್ಷ ನಾಯಕ ಬಿಜೆಪಿಗೆ ಬಂದಿಲ್ಲ. ಬಿಜೆಪಿ ಶಾಶ್ವತ ವಿಪಕ್ಷ ಆಗಿರಬೇಕು ಎಂಬುದು ನಮ್ಮ ಆಸೆ. ಆದರೆ ಅವರಿಗೆ ಇನ್ನೂ ಒಬ್ಬ ನಾಯಕನೇ ಸಿಕ್ಕಿಲ್ಲ ಎನ್ನೋದು ವಿಪರ್ಯಾಸ ಎಂದು ಕುಟುಕಿದರು.