ಬೆಳಗಾವಿ: "ದಲಿತ ಎನ್ನುವ ಕಾರಣಕ್ಕೆ ನಾಗ್ಪುರದಲ್ಲಿರುವ ಕೆ ಬಿ ಹೆಡ್ಗೇವಾರ್ ವಸ್ತು ಸಂಗ್ರಹಾಲಯಕ್ಕೆ ಪ್ರವೇಶ ನಿರಾಕರಿಸಲಾಗಿದೆ. ಇದಕ್ಕೆ ಕಾರಣ ಏನು ಎಂದು ಸ್ಪಷ್ಟಪಡಿಸುವಂತೆ" ಮಾಜಿ ಶಾಸಕರೊಬ್ಬರು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ಅವರಿಗೆ ಆಡಿಯೋವೊಂದರ ಮೂಲಕ ಕಾರಣ ಕೇಳಿದ್ದಾರೆ. ಗೂಳಿಹಟ್ಟಿ ಶೇಖರ್ ಅವರದ್ದು ಎನ್ನಲಾದ ಈ ಆಡಿಯೋ ಈಗ ಸದ್ದು ಮಾಡುತ್ತಿದೆ.
ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋದ ಬಗ್ಗೆ ಸುವರ್ಣಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಸಚಿವ ಪ್ರಿಯಾಂಕ್ ಖರ್ಗೆ, "ಆರ್ಎಸ್ಎಸ್ ಸರಸಂಘಚಾಲಕರಾಗಿ ದಲಿತರನ್ನು ನೇಮಕ ಮಾಡಲಿ" ಎಂದು ಸವಾಲು ಹಾಕಿದ್ದಾರೆ.
ಖರ್ಗೆ ಹೇಳಿದ್ದಿಷ್ಟು:"ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಅವರು ಬಿ.ಎಲ್ ಸಂತೋಷ್ಗೆ ಸ್ಪಷ್ಟವಾದ ಪ್ರಶ್ನೆಯನ್ನು ಕೇಳಿದ್ದಾರೆ. ಅದಕ್ಕೆ ಬಿಜೆಪಿ ನಾಯಕರು ಉತ್ತರ ಕೊಡಲಿ. ಆರ್ಎಸ್ಎಸ್ ಸಂಸ್ಥಾಪಕ ಕೆ.ಬಿ. ಹೆಡ್ಗೇವಾರ್ ಮ್ಯೂಸಿಯಂಗೆ ಹೋದಾಗ ದಲಿತ ಎಂಬ ಕಾರಣಕ್ಕೆ ಪ್ರವೇಶ ಕೊಟ್ಟಿಲ್ಲ ಎಂದು ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಆಡಿಯೋದಲ್ಲಿ ಹೇಳಿದ್ದಾರೆ. ಅಲ್ಲದೇ ಈ ನಿಯಮ ಬಿಜೆಪಿಯ ದಲಿತ ನಾಯಕರಿಗೂ ಅನ್ವಯ ಆಗುತ್ತಾ? ಎಂದು ಕೇಳಿದ್ದಾರೆ. ಹಿಂದುತ್ವದಲ್ಲಿ ಆರ್ಎಸ್ಎಸ್ ತತ್ವದಲ್ಲಿ ದಲಿತರಿಗೆ, ಹಿಂದುಳಿದವರಿಗೆ ಹಾಗೂ ಅಲ್ಪಸಂಖ್ಯಾತರಿಗೆ, ಬಡವರಿಗೆ ಜಾಗ ಇಲ್ಲ ಎಂದು ಇದರಿಂದ ಸ್ಪಷ್ಟವಾಗುತ್ತದೆ" ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
"ದಲಿತ ಸಮುದಾಯದ ಗೂಳಿಹಟ್ಟಿ ಅವರಿಗೆ ಪ್ರವೇಶ ನೀಡದೆ ಸ್ಪಷ್ಟವಾದ ಸಂದೇಶ ಕೊಟ್ಟಿದ್ದಾರೆ. ಬಸವ ತತ್ವ ಪಾಲನೆ ಮಾಡುತ್ತೇವೆ ಎಂದು ಹೇಳುತ್ತಿರುವ ಬಿಜೆಪಿ ನಾಯಕರು ಇದಕ್ಕೆ ಉತ್ತರಿಸಬೇಕು. ಇದು ಅವರ ಪಕ್ಷದ ಮಾಜಿ ಸಚಿವರೊಬ್ಬರು ಕೇಳುತ್ತಿರುವ ಪ್ರಶ್ನೆ. ಹಿಂದುತ್ವದಲ್ಲಿ ಆರ್ಎಸ್ಎಸ್ ತತ್ವದಲ್ಲಿ ದಲಿತರಿಗೆ, ಬಡವರಿಗೆ ಸ್ಥಾನ ಇಲ್ಲ. ಬೆಳಗ್ಗೆ ಎದ್ದು ಬಸವಣ್ಣನ ತತ್ವದ ಬಗ್ಗೆ ಮಾತನಾಡುವ ಬಿಜೆಪಿ ನಾಯಕರು ಅದರ ಬಗ್ಗೆ ಉತ್ತರ ಕೊಡಬೇಕು ಎಂದು ಒತ್ತಾಯಿಸಿದರು.