ಬೆಂಗಳೂರು :ಕುಮಾರಸ್ವಾಮಿ ಹಿಟ್ ಅಂಡ್ ರನ್ ಮಾಡುತ್ತಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು. ವಿಧಾನಸೌಧದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಮೇಲೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಆರೋಪ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ವೈಎಸ್ಟಿ ಮತ್ತು ವಿಎಸ್ಟಿ ಟ್ಯಾಕ್ಸ್ ಬಗ್ಗೆ ಸಾಕ್ಷಿಗಳು ಇದ್ದರೆ ಕೊಡಿ. ಅದರ ಬಗ್ಗೆ ನಾವು ತನಿಖೆ ಮಾಡುತ್ತೇವೆ. ವೈಎಸ್ಟಿ ಅಂದ್ರೆ ಏನು ಅನ್ನೋದರ ಬಗ್ಗೆ ಮೊದಲು ಹೇಳಿ. ಹೆಚ್ ಡಿ ಕುಮಾರಸ್ವಾಮಿ ಹಿರಿಯರಿದ್ದಾರೆ ನೋಡಿಕೊಂಡು ಮಾತನಾಡಬೇಕು. ಸುಮ್ಮನೆ ಹಿಟ್ ಅಂಡ್ ರನ್ ಬೇಡ ಎಂದು ಕಿಡಿಕಾರಿದರು.
ರಾಜ್ಯದ ಮೇಲೆ ಭ್ರಷ್ಟಾಚಾರದ ಆರೋಪ ಇದೆ. ಅದನ್ನು ತೊಳೆಯುವ ಕೆಲಸ ನಾವು ಮಾಡ್ತಿದ್ದೇವೆ. ಶೇ 40ರಷ್ಟು ಕಮಿಷನ್ ಬಗ್ಗೆ ಕೂಡ ತನಿಖೆ ನಡೆಸುತ್ತಿದ್ದೇವೆ. ಹಿಂದಿನ ಸರ್ಕಾರದ ಮೇಲೆ ನಾವು ಭ್ರಷ್ಟಾಚಾರ ಆರೋಪ ಮಾಡಿದ್ವಿ. ಅದರ ದಾಖಲೆ ಇಟ್ಟುಕೊಂಡು ನಾವು ಮಾತನಾಡಿದ್ದೇವೆ. ಕುಮಾರಸ್ವಾಮಿ ಅವರ ಬಳಿ ದಾಖಲೆ ಇದ್ದರೆ ತೋರಿಸಿ ಎಂದು ಸವಾಲು ಹಾಕಿದರು.
ಮೊದಲು ವಿಪಕ್ಷ ನಾಯಕರು ಯಾರು ಅನ್ನೋದು ಬಿಜೆಪಿ ನಿರ್ಧಾರ ಮಾಡಲಿ. ಬಿಜೆಪಿ ಅಧಿಕಾರದಲ್ಲಿದ್ದಾಗ ಮನೆಯೊಂದು ಮೂರು ಬಾಗಿಲು ಆಗಿತ್ತು. ಈಗ ವಿಪಕ್ಷದಲ್ಲಿದ್ದಾಗ ಬಿಜೆಪಿ ಮನೆಯೊಂದು ನೂರು ಬಾಗಿಲಾಗಿದೆ. ಮೊದಲು ಬಿಜೆಪಿ ವಿಪಕ್ಷ ನಾಯಕರು ಯಾರು ಎಂದು ತೀರ್ಮಾನ ಮಾಡಲಿ. ಆಮೇಲೆ ನಮ್ಮ ಗ್ಯಾರಂಟಿ ಬಗ್ಗೆ ಮಾತಾಡಲಿ ಎಂದು ಟೀಕಿಸಿದರು.
ರಾಜ್ಯದಲ್ಲಿ ವೈಎಸ್ಟಿ ತೆರಿಗೆ ಜಾರಿಗೆ ಬಂದಿದೆ : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಹೊಸದಾಗಿ ವೈಎಸ್ಟಿ (YST) ತೆರಿಗೆ ಆರಂಭವಾಗಿದೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು (ಜುಲೈ 2-2023) ಆರೋಪ ಮಾಡಿದ್ದರು.