ಕರ್ನಾಟಕ

karnataka

ETV Bharat / state

'ಬಿವೈ ವಿಜಯೇಂದ್ರ ನೇಮಕ ಬಿಎಲ್​ ಸಂತೋಷ್​ಗೆ ಸ್ಪಷ್ಟ ಸಂದೇಶ.. ನೀವು ಕೇಶವ ಕೃಪಾದಲ್ಲಿ ಇರಿ': ಪ್ರಿಯಾಂಕ್ ಖರ್ಗೆ ಟೀಕೆ - ಪ್ರಿಯಾಂಕ್ ಖರ್ಗೆ ಟೀಕೆ

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬಿವೈ ವಿಜಯೇಂದ್ರ ನೇಮಕದ ಬಗ್ಗೆ ಸಚಿವ ಪ್ರಿಯಾಂಕ್​ ಖರ್ಗೆ ಪ್ರತಿಕ್ರಿಯಿಸಿದ್ದು, ಬಿ.ಎಲ್​. ಸಂತೋಷ್​ಗೆ ಟಾಂಗ್​ ನೀಡಿದ್ದಾರೆ.

Minister Priyank Kharge
ಸಚಿವ ಪ್ರಿಯಾಂಕ್​ ಖರ್ಗೆ

By ETV Bharat Karnataka Team

Published : Nov 11, 2023, 4:33 PM IST

Updated : Nov 11, 2023, 5:37 PM IST

ಬೆಂಗಳೂರು:ನೂತನ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ ವಿಜಯೇಂದ್ರ ನೇಮಕಗೊಂಡಿರುವ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಬಿ.ಎಲ್​. ಸಂತೋಷ್​ರನ್ನು ವ್ಯಂಗಿಸಿದ್ದಾರೆ. ರಾಜ್ಯಾಧ್ಯಕ್ಷನಾಗಿ ವಿಜಯೇಂದ್ರ ಅವರನ್ನು ಆಯ್ಕೆ ಮಾಡುವ ಮೂಲಕ ಹೈಕಮಾಂಡ್​ ಸಂತೋಷ್​ ಅವರಿಗೆ ನೀವು ಕೇಶವ ಕೃಪಾದಲ್ಲೇ ಇರಿ ಎಂದು ಸ್ಪಷ್ಟ ಸಂದೇಶ ಕಳುಹಿಸಿದೆ ಎಂದು ಟೀಕಿಸಿದ್ದಾರೆ.

ಬೆಂಗಳೂರಲ್ಲಿ ಮಾತನಾಡಿದ ಅವರು, ಬಿ.ವೈ ವಿಜಯೇಂದ್ರ ನೇಮಕ ಮೂಲಕ 'ಬಿ.ಎಲ್. ಸಂತೋಷ್ ನಿಮ್ಮ ತಂತ್ರಗಾರಿಕೆ ನಮಗೆ ಸಂತೋಷ ಆಗಿಲ್ಲ. ಯಡಿಯೂರಪ್ಪ ಅವರ ಪುತ್ರನಿಗೆ ಪ್ರಮುಖ ಸ್ಥಾನ ಕೊಡುತ್ತಿದ್ದೇವೆ. ನೀವು ಕೇಶವ ಕೃಪಾದಲ್ಲಿ ಇರಿ ಎಂದು ವರಿಷ್ಠರು ಸಂದೇಶ ಕೊಟ್ಟಂತಿದೆ ಎಂದು ಟಾಂಗ್​ ನೀಡಿದರು. ಬಳಿಕ ವೈಯಕ್ತಿಕವಾಗಿ ನಾನು ಟೀಕೆ ಮಾಡಲ್ಲ. ವಿಜಯೇಂದ್ರ ನನಗಿಂತ 4-5 ವರ್ಷ ದೊಡ್ಡವರು. ಅವರಿಗೆ ಒಳ್ಳೆಯದಾಗಲಿ. ಬಿಜೆಪಿ ಇಲ್ಲಿ ಅಸ್ತಿತ್ವ ಕಳೆದುಕೊಂಡಿದೆ. ಅದಕ್ಕೆ ಜೀವ ತುಂಬುವ ಶಕ್ತಿ ಕೊಡಲಿ ಎಂದರು.

ಮುಂದುವರೆದು, ರಾಜ್ಯಾಧ್ಯಕ್ಷ ಸ್ಥಾನಕ್ಕೆ ವಿ.ಸೋಮಣ್ಣ, ಸಿ.ಟಿ.ರವಿ ರಾಜ್ಯಾಧ್ಯಕ್ಷ ಪ್ರಯತ್ನಿಸಿದ್ದರು. ಪ್ರಧಾನಿ ಮೋದಿ ಅವರು, ಕುಟುಂಬ ರಾಜಕಾರಣ ತೊಲಗಿಸಬೇಕು, ಓಲೈಕೆ ರಾಜಕಾರಣ, ಭ್ರಷ್ಟಾಚಾರ ನಾವು ಒಪ್ಪಲ್ಲ ಎಂದು ಕೆಂಪು ಕೋಟೆ ಮೇಲೆ ನಿಂತು ಭಾಷಣ ಮಾಡುತ್ತಿದ್ದರು. ಆದರೆ, ಈಗ ವಿಜಯೇಂದ್ರ ಆಯ್ಕೆಗೆ ಏನನ್ನಬೇಕು?. ಭ್ರಷ್ಟಾಚಾರ ತೆಗೆದುಹಾಕುತ್ತೇವೆ ಎಂದು ಬಿಎಸ್​ವೈ ಅವರನ್ನು ಕಣ್ಣೀರು ಹಾಕಿಸಿ ಕೆಳಗಿಳಿಸಿದರು. ನಾನು ಏನೇ ಮಾಡಿದರು ಖರ್ಗೆ ಮಗ ಅನ್ನುತ್ತಾರೆ. ನಾನು ಯೂತ್ ಕಾಂಗ್ರೆಸ್​ನಲ್ಲಿ ಕೆಲಸ ಮಾಡಿ ಶಾಸಕನಾದೆ. ಅದನ್ನು ಯಾರೂ ಹೇಳಲ್ಲ. ಆದರೂ ನಮ್ಮನ್ನು ಕುಟುಂಬ ರಾಜಕಾರಣ ಅಂದರು. ಆದರೆ ಈಗ ಯಡಿಯೂರಪ್ಪ ಅವರ ಮಗನಿಗೆ ಸ್ಥಾನ ನೀಡಿದ್ದಾರೆ. ಈಗ ಮೋದಿ, ಶಾ ಮಾತು ಏನಾಯಿತು. ಇದಕ್ಕೆ ಬಿಜೆಪಿಯವರು ಉತ್ತರ ಕೊಡಬೇಕು ಎಂದು ಗುಡುಗಿದರು.

ರಾಜ್ಯದಲ್ಲಿ ಬಿಜೆಪಿ ಮುಗಿಸಬೇಕೆಂದು ಮಾಡಿದ ಹಾಗಿದೆ. ಸದಾನಂದ ಗೌಡರು ಸ್ವಯಂ ನಿವೃತಿ ಪಡೆದಿದ್ದಾರೆ. ಇದು ಒತ್ತಾಯದ ಸ್ವಯಂ ನಿವೃತ್ತಿ ಆಗಿದೆ. ಮಾನಸಿಕವಾಗಿ, ದೈಹಿಕವಾಗಿ ಅವರು ಫಿಟ್​ ಇದ್ದಾರೆ. ಆದರೂ ನಿವೃತ್ತಿ ಕೊಡಿಸಿದ್ದಾರೆ. ಅವರು ನೊಂದು ಪಕ್ಷವನ್ನು ಬಿಟ್ಟಿದ್ದಾರೆ.‌ ಮಾಜಿ ಸಿಎಂ ದೆಹಲಿಗೆ ಹೋದರೂ ಬಾಗಿಲು ತೆಗೆದಿಲ್ಲ. ಬಿಜೆಪಿ ವರ್ಸಸ್ ಬಿಜೆಪಿ ಆಗಿದೆ. ಬಿಜೆಪಿ ಬಿಟ್ಟು ಎಷ್ಟು ಜನ ಬರ್ತಾರೆ ನೀವೆ ನೋಡಿ ಎಂದರು.

ಬೂತ್ ಮಟ್ಟ, ಸಂಘದಲ್ಲಿ‌ ಕೆಲಸ ಮಾಡಿದ್ದೇನೆ ಅಂತಿದ್ದ ಈಶ್ವರಪ್ಪ ಈಗ ಎಲ್ಲಿಗೆ ಹೋದರು?. ವಿಜಯೇಂದ್ರ ನನಗೆ ಬಚ್ಚಾ ಅನ್ನುತ್ತಿದ್ದರು. ಈಗ ಹೋಗಿ ಮಂಡಿ ಊರುತ್ತೀರಾ?. ಈಗ ಈಶ್ವರಪ್ಪ ಪಕ್ಷ ಬಿಡ್ತಾರಾ?.‌ ಮೊದಲು ನಿಮ್ಮ ಮನೆಯನ್ನು ನೋಡಿಕೊಳ್ಳಿ. ಬಿಜೆಪಿ ಲೆಕ್ಕಾಚಾರ ಏನು ಎಂದು ಅವರಿಗೆ ಬಿಟ್ಟಿದು. ನಾವು ನಮ್ಮ ಬಲದ ಮೇಲೆ ತಂತ್ರಗಾರಿಕೆ ಮಾಡ್ತೇವೆ ಎಂದರು.

ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಮಾಧ್ಯಮ ಪ್ರತಿಕ್ರಿಯೆ

ಗ್ಯಾರಂಟಿ ಯೋಜನೆ ಅನುಕೂಲ ನೋಡಿ ಬಿಜೆಪಿ ತತ್ತರಿಸಿ ಹೋಗಿದೆ-ಹೆಚ್​ ಕೆ ಪಾಟೀಲ್​: ಬಳ್ಳಾರಿಯಲ್ಲಿಂದು ಸುದ್ದಿಗಾರರೊಂದಿಗೆ ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಮಾತನಾಡಿದರು. ಈ ವೇಳೆ, ಕಾಂಗ್ರೆಸ್​ ಪಕ್ಷದ ಗ್ಯಾರಂಟಿ ಯೋಜನೆಯಿಂದ ಜನರಿಗೆ ಅನುಕೂಲವಾಗಿದೆ. ಇದನ್ನು ನೋಡಿ ಬಿಜೆಪಿ ತತ್ತರಿಸಿ ಹೋಗಿದೆ ಎಂದರು. ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ವಿಜಯೇಂದ್ರ ಅವರನ್ನು ನೇಮಕ ಮಾಡಿದ್ದನ್ನು ಉಲ್ಲೇಖಿಸಿ ರಾಜ್ಯಾಧ್ಯಕ್ಷರನ್ನು ನೇಮಕ ಮಾಡುವುದಕ್ಕೆ ಇಷ್ಟು ದಿನ ಬೇಕಾಯಿತು. ಇದರಿಂದ ನಮ್ಮ ಪಕ್ಷಕ್ಕೆ ಯಾವುದೇ ಪರಿಣಾಮ ಬೀರುವುದಿಲ್ಲ. ಕಾಂಗ್ರೆಸ್ ಪಕ್ಷದ ಸಂಘಟನೆ ಗಟ್ಟಿಯಾಗಿದೆ. ಲೋಕಸಭೆ ಚುನಾವಣೆಯಲ್ಲಿ 20ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ ಎಂದು ಹೆಚ್​​ ಕೆ ಪಾಟೀಲ್​​ ಭರವಸೆ ವ್ಯಕ್ತಪಡಿಸಿದರು.

ಮುಂದುವರೆದು ಬರ ಪರಿಶೀಲನೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಕೇಂದ್ರದ ಬರ ಅಧ್ಯಯನ ತಂಡ ಬಂದು ಪರಿಶೀಲನೆ ನಡೆಸಿ ಹೋಗಿದೆ. ಸರ್ಕಾರದ ಜೊತೆ ಚರ್ಚೆ ಮಾಡಿದೆ. ಬರ ಪರಿಹಾರವಾಗಿ ಕೇಂದ್ರ ಸರ್ಕಾರ 3,700 ಕೋಟಿ ರೂಪಾಯಿ ರಿಲೀಸ್​ ಮಾಡಬೇಕಿತ್ತು. ಆದರೆ, ಇದುವರೆಗೂ ನಯಾ ಪೈಸೆ ಕೊಟ್ಟಿಲ್ಲ. ಬರ ಪರಿಹಾರಕ್ಕೆ ಒತ್ತಾಯ ಮಾಡಬೇಕಾದ ಬಿಜೆಪಿ ನಾಯಕರು ಬರ ಅಧ್ಯಯನ ಮಾಡ್ತಿದ್ದಾರೆ. ಮುಂಗಾರು ಮುಗಿದು ಹಿಂಗಾರು ಸಮಯದಲ್ಲಿ ಬರ ಅಧ್ಯಯನ ಮಾಡಲು ಹೊರಟಿದ್ದಾರೆ. ಇವರಿಗೆ ಜನರ ಬಗ್ಗೆ ಕಾಳಜಿ ಇಲ್ಲ. ಸಂಸದರು ಪರಿಹಾರದ ಬಗ್ಗೆ ಮಾತನಾಡುತ್ತಿಲ್ಲ ಎಂದು ಪಾಟೀಲ್​ ಆರೋಪಿಸಿದರು.

ಇದನ್ನೂ ಓದಿ:ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಆಯ್ಕೆ: ವಿಶೇಷ ಪೂಜೆ ನೆರವೇರಿಸಿದ ಶಾಸಕ ಡಾ.ಶಿವರಾಜ್ ಪಾಟೀಲ್

Last Updated : Nov 11, 2023, 5:37 PM IST

ABOUT THE AUTHOR

...view details