ಬೆಂಗಳೂರು/ ಕಲಬುರಗಿ: ನನ್ನ ಜೊತೆ ಹಲವು ಕಾಂಗ್ರೆಸ್ ಶಾಸಕರು ಸಂಪರ್ಕದಲ್ಲಿದ್ದಾರೆ ಎಂದಿದ್ದ ಬಿ.ಎಲ್ ಸಂತೋಷ್ ಅವರಿಗೆ ಸಚಿವ ಪ್ರಿಯಾಂಕ್ ಖರ್ಗೆ ಸವಾಲು ಹಾಕಿದ್ದಾರೆ. 45 ಶಾಸಕರು ಬೇಡ, 4 ಶಾಸಕರನ್ನು ಕರೆದುಕೊಂಡು ಹೋಗಲಿ ನೋಡೋಣ ಎಂದು ಪಂಥಾಹ್ವಾನ ನೀಡಿದ್ದಾರೆ.
ಬಿ.ಎಲ್ ಸಂತೋಷ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ 'ಮೊದಲು ಅವರ ಶಾಸಕರನ್ನು, ಸಂಸದರನ್ನು ಹಿಡಿದಿಟ್ಟುಕೊಳ್ಳಲಿ. ನಂತರ ಕಾಂಗ್ರೆಸ್ ಶಾಸಕರ ಬಗ್ಗೆ ಮಾತನಾಡಲಿ ಎಂದರು. ಆರ್ಎಸ್ಎಸ್ ಯಾವ ಪಕ್ಷದ ಜೊತೆ ಇಲ್ಲ ಎನ್ನುತ್ತಾರೆ. ಆದರೆ, ಬಿಜೆಪಿಗೆ ಹೋಗಿ ಪಾಠ ಮಾಡ್ತಾರೆ. ಆಪರೇಷನ್ ಕಮಲಕ್ಕೆ ಹಣ ಎಲ್ಲಿಂದ ಬರುತ್ತದೆ?. ಬಿಎಸ್ವೈ ಸೇರಿ ಲಿಂಗಾಯತರಿಗೆ ಟಿಕೆಟ್ ನೀಡಲಿಲ್ಲ. ಇದಕ್ಕೆ ಬಿ.ಎಲ್.ಸಂತೋಷ್ ಮೊದಲು ಉತ್ತರ ನೀಡಲಿ. ನಂತರ ನಮ್ಮವರ ಬಗ್ಗೆ ಮಾತನಾಡಲಿ' ಎಂದರು.
ಸರ್ಕಾರ ಪ್ರಗತಿ ಪರ ಹೆಜ್ಜೆ ಹಾಕುತ್ತಿದೆ: ಕೈ ಶಾಸಕರ ಅಸಮಾಧಾನದ ವಿಚಾರವಾಗಿ ಮಾತನಾಡಿದ ಅವರು, ಸಿಎಂ, ಡಿಸಿಎಂ ಶಾಸಕರ ಅಹವಾಲು ಸ್ವೀಕರಿಸಿದ್ದಾರೆ. ಹಂತ ಹಂತವಾಗಿ ಬೇಡಿಕೆ ಈಡೇರಿಸುತ್ತಾರೆ. ಎಲ್ಲರ ಸಹಕಾರ, ಸಹನೆ ಬೇಕಾಗುತ್ತದೆ. ನಮ್ಮ ಗ್ಯಾರಂಟಿಗಳು ಎಲ್ಲರಿಗೂ ಹೋಗುತ್ತಿವೆ. ಈ ಬಾರಿ ಸ್ವಲ್ಪ ಕಷ್ಟ ಆಗಬಹುದು ಎಂದು ಸಿಎಂ ಹೇಳಿದ್ದಾರೆ. ಹಿಂದಿನ ಸರ್ಕಾರ ಸಾಲ ಮಾಡಿ ತುಪ್ಪ ತಿಂದಿದೆ. ಈಗ ಆರ್ಥಿಕವಾಗಿ ರಾಜ್ಯ ದಿವಾಳಿಯಾಗಿಲ್ಲ. ಸರ್ಕಾರ ಪ್ರಗತಿ ಪರ ಹೆಜ್ಜೆ ಹಾಕುತ್ತಿದೆ. ಎಲ್ಲರ ಸಹಕಾರ ಸರ್ಕಾರಕ್ಕೆ ಬೇಕು ಎಂದು ಮನವಿ ಮಾಡಿದರು.
ಸಚಿವರ ಕಚೇರಿಯಲ್ಲಿ ಪಿಎಗಳ ದರ್ಬಾರ್ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ನನಗೆ ಅದರ ಬಗ್ಗೆ ಮಾಹಿತಿಯಿಲ್ಲ. ಶಾಸಕರೇ ನನಗೆ ಹೇಳಬೇಕು ಎಂದರು. ಅಕ್ರಮ ಬಿಟ್ ಕಾಯಿನ್ ವರ್ಗಾವಣೆ ವಿಚಾರವಾಗಿ ಮಾತನಾಡಿದ ಅವರು, ಹ್ಯಾಕರ್ ಶ್ರೀಕಿಯಿಂದ ವರ್ಗಾವಣೆ ಆರೋಪ ಪ್ರಕರಣವನ್ನು ತನಿಖೆ ಮಾಡಿದರೆ ವಿಚಾರ ಹೊರಗೆ ಬರುತ್ತೆಂದು ತನಿಖೆ ಮಾಡಿಸಿಲ್ಲ. ನಾವು ಬಂದ ನಂತರ ಎಸ್ಐಟಿ ಮಾಡಿದ್ದೇವೆ. ತನಿಖೆಯನ್ನೂ ಮಾಡಿಸುತ್ತಿದ್ದೇವೆ.