ಬೆಂಗಳೂರು: ಸಿಡಿ ಪ್ರಕರಣವನ್ನು ಸಿಬಿಐಗೆ ನೀಡುವ ಕುರಿತು ಮಾಜಿ ಸಚಿವ ರಮೇಶ್ ಜಾರಕಿಹೊಳಿ ತಮ್ಮ ಜೊತೆ ಮಾತುಕತೆ ನಡೆಸಿಲ್ಲ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಅವರು ಸ್ಪಷ್ಟಪಡಿಸಿದ್ದಾರೆ. ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿಯವರು ಶಾಸಕರು, ಒಬ್ಬ ಮಾಜಿ ಸಚಿವರು ಇವತ್ತು ಅವರು ದೆಹಲಿಗೆ ಬಂದಿದ್ದರು, ನನ್ನನ್ನು ಭೇಟಿ ಮಾಡಿದ್ದು ನಿಜ, ಆದರೆ ನನ್ನನ್ನು ಬಿಟ್ಟು ಬೇರೆ ಯಾರನ್ನು ಭೇಟಿ ಮಾಡಿದರು ಅಂತಾ ಗೊತ್ತಿಲ್ಲ. ಅವರು ಬೇರೊಂದು ಕಾರಣಕ್ಕೆ ಬಂದು ಹಾಗೆಯೇ ನನ್ನನ್ನು ಭೇಟಿ ಮಾಡಿದ್ದರು ಅಷ್ಟೇ. ಸಿಡಿ ಪ್ರಕರಣವನ್ನು ಸಿಬಿಐಗೆ ಕೊಡುವ ಬಗ್ಗೆ ನನ್ನ ಬಳಿ ಅವರು ಏನು ಪ್ರಸ್ತಾಪ ಮಾಡಿಲ್ಲ ಎಂದರು.
ವಿಧಾನಸಭೆ ಚುನಾವಣೆಗೆ ಬಿಜೆಪಿಯಿಂದ ಟಿಕೆಟ್ ಪಟ್ಟಿ ಯಾವಾಗ? ಎನ್ನುವ ಕುರಿತು ಪ್ರತಿಕ್ರಿಯೆ ನೀಡಿದ ಪ್ರಹ್ಲಾದ್ ಜೋಷಿ, ಚುನಾವಣೆ ಘೋಷಣೆ ಆದ ಮೇಲೆ ಪಟ್ಟಿ ಪ್ರಕಟ ಆಗುತ್ತದೆ ಎಂದರು. ರಾಜ್ಯಕ್ಕೆ ಹೆಚ್ಚು ಅನುದಾನ ಬಂದಿಲ್ಲ ಅನ್ನೋದಕ್ಕೆ ಆಧಾರವಿಲ್ಲ. ಮೋದಿ ಅವರ ಆಡಳಿತದಲ್ಲಿ ಹೆಚ್ಚು ಅನುದಾನ ಬಂದಿದೆ. ಕಳೆದ ಎಂಟು ವರ್ಷಗಳಲ್ಲಿ ಇನ್ಫ್ರಾಸ್ಟ್ರಕ್ಟರ್ಗೆ ಹೆಚ್ಚು ಆದ್ಯತೆ ನೀಡಲಾಗಿದೆ. ರೋಡ್, ಹೈವೇ, ರೈಲು ಹೊಸ ಮಾರ್ಗ, ರೈಲು ಡಬಲ್ಲಿಂಗ್, ಎಲೆಕ್ಟ್ರಿಫಿಕೇಶನ್ ಮಾಡಲಾಗಿದೆ. ಇಡೀ ದೇಶ ಮತ್ತು ಕರ್ನಾಟಕದಲ್ಲೂ ಕೂಡ ಆಗಿದೆ. 1960ರಿಂದ ಏನು ಆಗಿದೆಯೋ ಎಂಟು ವರ್ಷದಲ್ಲಿ ಡಬಲ್ ಕೆಲಸ ಆಗಿದೆ ಎಂದು ಹೇಳಿದರು.
ಭದ್ರಾ ಯೋಜನೆಗೆ 60:40 ರೇಶಿಯೋದಲ್ಲಿ ಅನುದಾನ ಬಿಡುಗಡೆ ಆಗಿದೆ. ಅತಿ ಹೆಚ್ಚು ಖರ್ಚು ಮಾಡಿ ಯೋಜನೆ ರೂಪಿಸಲಾಗಿದೆ. ಇದರಿಂದ ಉದ್ಯೋಗ, ಇನ್ಫ್ರಾಸ್ಟ್ರಕ್ಚರ್ ಕ್ರಿಯೇಟ್ ಆಗಿದೆ. ಸಾಮಾನ್ಯವಾಗಿ ಟೀಕಿಸೋ ಜನ ಹೆಚ್ಚಿರುತ್ತಾರೆ. ಈ ಬಾರಿ ಪೊಲಿಟಿಕಲ್ ಪಾರ್ಟಿ ಬಿಟ್ಟರೆ ಜನರು ಬಜೆಟ್ ಸ್ವಾಗತ ಮಾಡಿದ್ದಾರೆ. ಭಾರತ ಬ್ರೈಟ್ ಸ್ಪಾಟ್ ಎಂದು ತಿಳಿಸಿದರು.