ಬೆಂಗಳೂರು:ಕೊರೊನಾ ನೆಪ ಮುಂದಿಟ್ಟುಕೊಂಡು ಪಶುಸಂಗೋಪನೆ ಇಲಾಖೆಯ ಅಭಿವೃದ್ಧಿ ಕುಂಠಿತವಾದರೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಪಶುಪಾಲನಾ ಭವನದಲ್ಲಿ ನಡೆದ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಭಾಗಿಯಾದ ಸಚಿವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕೊರೊನಾ ನೆಪ ಹೇಳಿ ಗೋ ಶಾಲೆಗಳತ್ತ ಅಧಿಕಾರಿಗಳು ತಲೆ ಹಾಕುತ್ತಿಲ್ಲ. ಜಾನುವಾರುಗಳ ಆರೋಗ್ಯ ತಪಾಸಣೆ, ಜಾನುವಾರುಗಳಿಗೆ ಕಿವಿ ಓಲೆ (ಟ್ಯಾಗ್) ಹಾಕುವುದು ಸರಿಯಾಗಿ ಆಗುತ್ತಿಲ್ಲ ಎಂದು ರಾಜ್ಯದ ವಿವಿಧ ಭಾಗಗಳಿಂದ ದೂರುಗಳು ಬರುತ್ತಿದ್ದು, ಜಾನುವಾರು ಸಾಕಣೆದಾರರು ಮತ್ತು ರೈತರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ ಎಂದು ಸಚಿವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದರು.
ರಾಜ್ಯಾದ್ಯಂತ ಲಸಿಕೆಗೆ ಕ್ರಮ:ಬೆಂಗಳೂರು ಗ್ರಾಮಾಂತರ ಸೇರಿದಂತೆ ಕಾಲುಬಾಯಿ ರೋಗ ಕಾಣಿಸಿಕೊಳ್ಳುತ್ತಿರುವುದರಿಂದ ತಕ್ಷಣಕ್ಕೆ ಲಸಿಕೆ ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಲ್ಲದೇ ಆಂಥ್ರಾಕ್ಸ್, ಚಪ್ಪೆರೋಗ, ಗಳಲೇ ರೋಗ, ಬ್ರುಸೆಲೋಸಿಸ್ ಸೇರಿದಂತೆ ವಿವಿಧ ರೋಗಗಳ ವಿರುದ್ಧ ಲಸಿಕಾ ಕಾರ್ಯ ಮತ್ತಷ್ಟು ತೀವ್ರಗತಿಯಲ್ಲಿ ನಡೆಸಲು ಅಧಿಕಾರಿಗಳಿಗೆ ತಿಳಿಸಿದ್ದಾರೆ. ಲಸಿಕೆ ನೀಡುವ ಮೊದಲು ಜಾನುವಾರುಗಳಿಗೆ ನೀಡಲಾಗುವ ಜಂತುನಾಶಕ ಔಷಧವನ್ನು ಕಡ್ಡಾಯವಾಗಿ ನೀಡಬೇಕು ಹಾಗೂ ರಾಜ್ಯಾದ್ಯಂತ ಲಸಿಕಾ ಅಭಿಯಾನಗಳನ್ನು ಮತ್ತಷ್ಟು ಚುರುಕುಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸಚಿವರು ತಾಕಿತು ಮಾಡಿದ್ದಾರೆ.
ಇದನ್ನೂ ಓದಿ: ಮನೆಯಲ್ಲಿರದೇ ಓಡಾಡುತ್ತಿದ್ದ ಕೊರೊನಾ ಸೋಂಕಿತ.. ಪ್ರಶ್ನಿಸಿದ ಅಧಿಕಾರಿಗಳಿಗೇ ಆವಾಜ್
ಔಷಧ ಕೊರತೆ ಇಲ್ಲ:ರಾಜ್ಯದಲ್ಲಿ ಜಾನುವಾರುಗಳಿಗೆ ನೀಡಲಾಗುವ ಉಚಿತ ಔಷಧಗಳ ದಾಸ್ತಾನು ಸಾಕಷ್ಟಿದ್ದು, ಗುಣಮಟ್ಟದ ಔಷಧವನ್ನು ಜಾನುವಾರುಗಳಿಗೆ ನೀಡಲು ಪಶು ವೈದ್ಯಾಧಿಕಾರಿಗಳಿಗೆ ಸಚಿವರು ತಿಳಿಸಿದ್ದಾರೆ. 2021-22ನೇ ಸಾಲಿನ ಮೊದಲ ಕಂತು ಆರ್ಥಿಕ ಇಲಾಖೆಯಿಂದ ಬಿಡುಗಡೆ ಆಗಿದ್ದು, ಪಶುಸಂಗೋಪನೆ ಇಲಾಖೆಯ ಎಲ್ಲ ಅಭಿವೃದ್ಧಿ ಕೆಲಸಗಳು ಮತ್ತಷ್ಟು ವೇಗೆದಿಂದ ಸಾಗಬೇಕು ಎಂದು ಸಚಿವರು ಹೇಳಿದರು. ಇದೇ ಸಂದರ್ಭದಲ್ಲಿ ಬೆಂಗಳೂರಿನ ಪಶುಪಾಲನಾ ಭವನದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ವಾರ್ ರೂಮ್ಗೆ ಸಚಿವರು ಭೇಟಿ ನೀಡಿದರು. ವಾರ್ ರೂಮ್ಗೆ ಬೇಕಾದ ಎಲ್ಲ ತಂತ್ರಜ್ಞಾನ ಹಾಗೂ ಇತರೆ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಪಶುಸಂಗೋಪನೆ ಇಲಾಖೆಯ ಕಾರ್ಯದರ್ಶಿ ಕ್ಯಾಪ್ಟನ್ ಮಣಿವಣ್ಣನ ಸೇರಿದಂತೆ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.