ಬೆಂಗಳೂರು:ಪಶುಸಂಗೋಪನೆ ಸಚಿವರಾದ ಪ್ರಭು ಚೌಹಾಣ್ ಗುರುವಾರ ಇಲಾಖೆಯ ಅಡಿಯಲ್ಲಿ ಬರುವ ವಿವಿಧ ಕೇಂದ್ರಗಳಿಗೆ ದಿಢೀರ್ ಭೇಟಿ ನೀಡಿ, ಅಲ್ಲಿನ ಕಾರ್ಯಚಟುವಟಿಕೆಗಳ ಕುರಿತು ಪರಿಶೀಲನೆ ನಡೆಸಿದರು.
ಈ ವೇಳೆ ಮಾತನಾಡಿದ ಸಚಿವರು, ಇಲಾಖೆಯಲ್ಲಿ ಹಲವಾರು ಹುದ್ದೆಗಳು ಖಾಲಿ ಇವೆ. ಇದರ ಬಗ್ಗೆ ಸಿಎಂ ಗಮನಕ್ಕೆ ತಂದು ಬೇಗ ಭರ್ತಿ ಮಾಡಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಇಲಾಖೆಯ ಕ್ಷೇತ್ರಗಳಲ್ಲಿ ಅತ್ಯುತ್ತಮವಾಗಿ ಸಂವರ್ಧನೆ ಕಾರ್ಯ ನಡೆಯುತ್ತಿದ್ದು, ಅದನ್ನು ಸೂಕ್ತ ರೀತಿಯಲ್ಲಿ ರೈತರಿಗೆ ತಲುಪಿಸಲು ಅತ್ಯುನ್ನತವಾದ ತರಬೇತಿ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.
ಹೈನುಗಾರಿಕೆ ಅಭಿವೃದ್ಧಿಯೊಂದಿಗೆ ಸಮಗ್ರ ಪಶುಪಾಲನೆಗೆ ಹೆಚ್ಚಿನ ಒತ್ತು ಕೊಟ್ಟು ಮೊಲ ಸಾಕಾಣಿಕೆ, ಹಂದಿ ಸಾಕಾಣಿಕೆ, ಕೋಳಿ ಸಾಕಾಣಿಕೆಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಉತ್ತೇಜನ ನೀಡಲಾಗುವುದು ಎಂದು ತಿಳಿಸಿದರು.
ಪಶುಸಂಗೋಪನಾ ಇಲಾಖೆಯ ಹೆಸರಘಟ್ಟದ ಜಾನುವಾರು ಕ್ಷೇತ್ರಗಳಾದ ರಾಜ್ಯ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರ, ಜಾನುವಾರು ಸಂವರ್ಧನಾ ಕ್ಷೇತ, ರಾಜ್ಯ ಕುಕ್ಕುಟ ಕ್ಷೇತ್ರ, ಹಂದಿ ತಳಿ ಸಂವರ್ಧನಾ ಕೇಂದ್ರ, ರಾಜ್ಯ ವೀರ್ಯ ಶೇಖರಣಾ ಕೇಂದ್ರ, ಮೊಲ ಸಾಕಾಣಿಕೆ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಭೇಟಿಯ ವೇಳೆ ಕ್ಷೇತ್ರ ಜಂಟಿ ನಿರ್ದೇಶಕರಾದ ಡಾ.ಎಚ್.ಎಸ್ ಜಯಣ್ಣ ಮತ್ತು ಇತರ ಅಧಿಕಾರಿಗಳು ಹಾಜರಿದ್ದರು.